ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟು ಸಡಿಲಿಸದ ಕುಸ್ತಿಪಟುಗಳು: ಇಂದು ಕೇಂದ್ರ ಕ್ರೀಡಾ ಸಚಿವರೊಂದಿಗೆ ಮತ್ತೆ ಸಭೆ?

Last Updated 20 ಜನವರಿ 2023, 2:54 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಕುಸ್ತಿಪಟುಗಳು ಗುರುವಾರ ರಾತ್ರಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಕೂಡ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯ ಎರಡನೇ ದಿನವಾದ ಗುರುವಾರ ರಾತ್ರಿ 10 ಗಂಟೆಯ ಸುಮಾರಿಗೆ ಕೇಂದ್ರ ಕ್ರೀಡಾ ಸಚಿವರೊಂದಿಗೆ ಮ್ಯಾರಥಾನ್ ಸಭೆ ಆರಂಭವಾಯಿತು. ಸರ್ಕಾರವು ತಕ್ಷಣವೇ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾವನ್ನು ವಿಸರ್ಜಿಸಬೇಕೆಂಬ ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲು ಕುಸ್ತಿಪಟುಗಳು ನಿರಾಕರಿಸಿದರು. ಹೀಗಾಗಿ ಸಭೆಯಲ್ಲಿ ಯಾವುದೇ ತೀರ್ಮಾನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕುಸ್ತಿಪಟುಗಳು ತಡರಾತ್ರಿ 1:45 ಕ್ಕೆ ಠಾಕೂರ್ ಅವರ ಮನೆಯಿಂದ ನಿರ್ಗಮಿಸಿದ್ದು, ಮನೆಯ ಹೊರಗೆ ಕಾಯುತ್ತಿದ್ದ ಸುದ್ದಿಗಾರರ ಜೊತೆ ಮಾತನಾಡಲಿಲ್ಲ. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪೂನಿಯಾ, ರವಿ ದಹಿಯಾ, ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶಾ ಫೋಗಟ್ ಸಭೆಯಲ್ಲಿ ಭಾಗವಹಿಸಿದ್ದರು.

ಕುಸ್ತಿಪಟುಗಳು ಶುಕ್ರವಾರ ಮತ್ತೆ ಕ್ರೀಡಾ ಸಚಿವರನ್ನು ಭೇಟಿಯಾಗಲಿದ್ದಾರೆ. ಸರ್ಕಾರವೇ ಸ್ವತಃ ಭಾರತ ಕುಸ್ತಿ ಫೆಡರೇಷನ್ ಲಿಖಿತ ವಿವರಣೆ ಕೇಳಿದ್ದು, ಆ ವಿಷಯ ತೀರ್ಮಾನವಾಗುವವರೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ರಾಜೀನಾಮೆ ನೀಡುವಂತೆ ಸಚಿವಾಲಯವು ಒತ್ತಾಯಿಸುವುದಿಲ್ಲ ಎಂದು ಸಭೆಯಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷರಿಂದ ಹಲವಾರು ಮಹಿಳಾ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಒಡ್ಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಬುಧವಾರ ಕುಸ್ತಿ ಫೆಡರೇಷನ್‌ಗೆ ಕೇಳಲಾಗಿತ್ತು. 72 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಸಂಸ್ಥೆಯಿಂದ ಕ್ರೀಡಾ ಸಚಿವಾಲಯಕ್ಕೆ ಇನ್ನೂ ಪ್ರತಿಕ್ರಿಯೆ ಲಭಿಸಿಲ್ಲ.

ಮೂಲಗಳ ಪ್ರಕಾರ, ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಬೇಕೆಂದು ಸರ್ಕಾರ ಹೇಳಿದೆ. ಆದರೆ ಕ್ರೀಡಾಪಟುಗಳು ಡಬ್ಲ್ಯುಎಫ್‌ಐ ಅನ್ನು ವಿಸರ್ಜಿಸದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT