ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ನತ್ತ ಚಿತ್ತ....

Last Updated 28 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಎರಡು ವರ್ಷಗಳ ಹಿಂದೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿಪಟುಗಳು ನಿರಾಸೆ ಕಂಡಿದ್ದರು. ಸಾಕ್ಷಿ ಮಲಿಕ್‌ ಅವರನ್ನು ಬಿಟ್ಟು ಉಳಿದವರೆಲ್ಲಾ ಸಾಂಬಾ ನಾಡಿನಲ್ಲಿ ಸಜ್ಜಾಗಿದ್ದ ಅಖಾಡದಲ್ಲಿ ಕಿಂಚಿತ್ತೂ ಹೋರಾಟ ತೋರದೆ ಚಿತ್‌ ಆಗಿದ್ದರು.

ಆ ನಿರಾಸೆ ಹಾಗೂ ನೋವು ಮರೆಯುವ ಮುನ್ನ ಮತ್ತೊಂದು ಒಲಿಂಪಿಕ್ಸ್‌ ಸನ್ನಿಹಿತವಾಗುತ್ತಿದೆ. 2020ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ಆಯೋಜನೆ ಯಾಗಿರುವ ಕೂಟದಲ್ಲಿ ಪದಕ ಗೆಲ್ಲುವವರು ಯಾರು ಎಂಬ ಕುತೂಹಲ ಗರಿಗೆದರಿದೆ. ಈ ವರ್ಷ ನಡೆದ ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ನಮ್ಮ ಪೈಲ್ವಾನರಿಂದ ಮೂಡಿ ಬಂದಿರುವ ಸಾಮರ್ಥ್ಯ ಹೊಸ ಭರವಸೆಗೆ ಕಾರಣವಾಗಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕುವ ನಮ್ಮವರ ಕನಸು ಟೋಕಿಯೊದಲ್ಲಿ ಸಾಕಾರಗೊಳ್ಳಬಹುದೆಂಬ ಆಶಾಭಾವ ಕುಸ್ತಿ ಪ್ರಿಯರಲ್ಲಿ ಮನೆ ಮಾಡಿದೆ. ಈ ಕೂಟದಲ್ಲಿ ಪದಕ ಗೆಲ್ಲಬಲ್ಲ ಕೆಲ ಕುಸ್ತಿಪಟುಗಳ ಕುರಿತ ಮಾಹಿತಿ ಇಲ್ಲಿದೆ.

ಬಜರಂಗ್ ಪುನಿಯಾ
ಹೋದ ವಾರ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಬಜರಂಗ್‌, ಈ ಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಪೈಲ್ವಾನ ಎಂಬ ದಾಖಲೆ ನಿರ್ಮಿಸಿದ್ದರು. 2013ರಲ್ಲಿ ಅವರಿಂದ ಕಂಚಿನ ಸಾಧನೆ ಮೂಡಿಬಂದಿತ್ತು.

2014ರ ಏಷ್ಯನ್‌ ಕೂಟದಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದ ಬಜರಂಗ್‌, ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ (2016, 2017) ಎರಡು ಚಿನ್ನದ ಪದಕ ಗೆದ್ದಿದ್ದಾರೆ. ಈ ವರ್ಷ ನಡೆದಿದ್ದ ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲೂ ಚಿನ್ನದ ಸಾಧನೆ ಮಾಡಿರುವ ಇವರು ಟೋಕಿಯೊದಲ್ಲೂ ಪದಕಕ್ಕೆ ಮುತ್ತಿಕ್ಕಬಲ್ಲ ಸಮರ್ಥ ಪೈಲ್ವಾನ ಎನಿಸಿದ್ದಾರೆ.

*********

ವಿನೇಶಾ ಪೋಗಟ್‌
ಪೋಗಟ್‌ ಕುಟುಂಬದ ಕುಡಿ ವಿನೇಶಾ. 2016ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅವರು ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ಗಾಯಗೊಂಡು ನಿವೃತ್ತರಾಗಿದ್ದರು.

2013ರಲ್ಲಿ ನಡೆದಿದ್ದ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದು ಪ್ರವರ್ಧಮಾನಕ್ಕೆ ಬಂದಿದ್ದ ವಿನೇಶಾ, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಸೇರಿದಂತೆ ಒಟ್ಟು ಐದು ಪದಕಗಳಿಗೆ ಕೊರಳೊಡ್ಡಿದ್ದರು. ಈ ವರ್ಷ ಬಿಷಕೆಕ್‌ನಲ್ಲಿ ಜರುಗಿದ್ದ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಅವರು ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಮತ್ತು ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಜಯಿಸಿ ಹೊಸ ದಾಖಲೆ ನಿರ್ಮಿಸಿದ್ದರು.

***

ಪೂಜಾ ಧಂಡಾ
ಪೂಜಾ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ನಾಲ್ಕನೇ ಮಹಿಳಾ ಕುಸ್ತಿಪಟು ಎಂಬ ದಾಖಲೆ ನಿರ್ಮಿಸಿದ್ದಾರೆ. ಹೋದ ವಾರ ನಡೆದಿದ್ದ ಚಾಂಪಿಯನ್‌ಷಿಪ್‌ನ 57ಕೆ.ಜಿ. ವಿಭಾಗದಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು.

24 ವರ್ಷದ ಪೂಜಾ, ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಬೆಳ್ಳಿಯ ಪದಕ ಗೆದ್ದು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.

***

ಸುಶೀಲ್‌ ಕುಮಾರ್
35 ವರ್ಷ ವಯಸ್ಸಿನ ಸುಶೀಲ್‌, 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಕ್ರೀಡಾಬದುಕಿಗೆ ವಿದಾಯ ಹೇಳುವ ಆಲೋಚನೆ ಹೊಂದಿದ್ದಾರೆ.

2008 ಮತ್ತು 2012ರ ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿದ್ದ ಅವರು ಕಾಮನ್‌ವೆಲ್ತ್‌ ಕೂಟದಲ್ಲೂ ಹೆಜ್ಜೆಗುರುತು ಮೂಡಿಸಿದ್ದಾರೆ. 2010ರಲ್ಲಿ ದೆಹಲಿ (66 ಕೆ.ಜಿ), 2014ರಲ್ಲಿ ಗ್ಲಾಸ್ಗೊ (74 ಕೆ.ಜಿ) ಮತ್ತು 2018ರಲ್ಲಿ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕೂಟಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ ಹೆಗ್ಗಳಿಕೆ ಅವರದ್ದು.

ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಏಕೈಕ ಪೈಲ್ವಾನ. ಏಷ್ಯನ್‌ ಕ್ರೀಡಾಕೂಟ, ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ಗಳಲ್ಲೂ ಪದಕಗಳನ್ನು ಗೆದ್ದಿದ್ದಾರೆ.

***

ಸಾಕ್ಷಿ ಮಲಿಕ್‌
26 ವರ್ಷ ವಯಸ್ಸಿನ ಸಾಕ್ಷಿ, ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು. ಈ ಬಾರಿಯ ಕಾಮನ್‌ವೆಲ್ತ್ ಕೂಟದಲ್ಲಿ ಕಂಚಿನ ಪದಕ ಜಯಿಸಿರುವ ಸಾಕ್ಷಿ, ಏಷ್ಯನ್‌ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌, ವಿಶ್ವ ಜೂನಿಯರ್‌ ಮತ್ತು ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ಗಳಲ್ಲೂ ಪದಕಗಳನ್ನು ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ್ದಾರೆ.

*********

ಮೌಸಮ್‌ ಖತ್ರಿ
97 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಮೌಸಮ್‌, ಈ ಬಾರಿಯ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿ ಭರವಸೆ ಮೂಡಿಸಿದ್ದಾರೆ. 2010ರ ಏಷ್ಯನ್‌ ಕೂಟದಲ್ಲಿ ಕಂಚು ಗೆದ್ದಿದ್ದ ಅವರು, ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ ಮತ್ತು ದಕ್ಷಿಣ ಏಷ್ಯನ್‌ ಕ್ರೀಡಾಕೂಟಗಳಲ್ಲೂ ಮೋಡಿ ಮಾಡಿದ್ದಾರೆ.

ಖಾಸಾಬ ಹಾಕಿಕೊಟ್ಟ ಬುನಾದಿ
ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಹಿರಿಮೆ ಖಾಸಾಬ ದಾದಾಸಾಹೇಬ್‌ ಜಾಧವ್‌ ಅವರದ್ದು. 1952ರ ಕೂಟದಲ್ಲಿ ಅವರು ಫ್ರೀಸ್ಟೈಲ್‌ ಬಾಂಥಮ್‌ವೇಟ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು.

ನಂತರ ಸುಶೀಲ್‌ ಕುಮಾರ್‌ ಹೊಸ ಭಾಷ್ಯ ಬರೆದರು. 2008ರ ಬೀಜಿಂಗ್‌ ಕೂಟದ 66 ಕೆ.ಜಿ.ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದ್ದ ಸುಶೀಲ್‌, 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದು ಮೈಲುಗಲ್ಲು ಸ್ಥಾಪಿಸಿದ್ದರು. ಇದೇ ಕೂಟದಲ್ಲಿ ಯೋಗೇಶ್ವರ ದತ್‌ (60 ಕೆ.ಜಿ.ಫ್ರೀಸ್ಟೈಲ್‌) ಕೂಡಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. 2016ರ ರಿಯೊ ಕೂಟದಲ್ಲಿ ಸಾಕ್ಷಿ ಮಲಿಕ್‌ ಮಿಂಚಿದ್ದರು. 58ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದ್ದ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT