ಶುಕ್ರವಾರ, ನವೆಂಬರ್ 22, 2019
25 °C
86 ಕೆ.ಜಿ.ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಪೈಲ್ವಾನ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ದೀಪಕ್‌ ಪುನಿಯಾಗೆ ಟೋಕಿಯೊ ಟಿಕೆಟ್‌

Published:
Updated:
Prajavani

ನೂರ್‌ ಸುಲ್ತಾನ್‌, ಕಜಕಸ್ತಾನ: ನಿರಾಯಾಸವಾಗಿ ಎದುರಾಳಿಯನ್ನು ‘ಚಿತ್‌’ ಮಾಡಿದ ಭಾರತದ ದೀಪಕ್‌ ಪುನಿಯಾ, ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ‌ಫೈನಲ್‌ ಪ್ರವೇಶಿಸಿದರು. ಇದರೊಂದಿಗೆ ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ರಹದಾರಿ ಪಡೆದರು.

ಪುರುಷರ 86 ಕೆ.ಜಿ.ವಿಭಾಗದಲ್ಲಿ ಅವರಿಂದ ಈ ಸಾಧನೆ ಅರಳಿತು.

ಮೊದಲ ಬಾರಿ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿರುವ ದೀಪಕ್‌, ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 8–2 ಪಾಯಿಂಟ್ಸ್‌ನಿಂದ ಸ್ವಿಟ್ಜರ್ಲೆಂಡ್‌ನ ಸ್ಟೀಫನ್‌ ರೀಚ್‌ಮತ್‌ ಅವರನ್ನು ಪರಾಭವಗೊಳಿಸಿದರು.

ದೀಪಕ್‌ ಹಾಕಿದ ಬಿಗಿಪಟ್ಟುಗಳಿಂದ ಬಿಡಿಸಿಕೊಳ್ಳಲು ಸ್ಟೀಫನ್‌ ಕೊಸರಾಡಿದರು. ಮೊದಲ ಅವಧಿಯಲ್ಲಿ 1–0 ಮುನ್ನಡೆ ಪಡೆದಿದ್ದ ಭಾರತದ ಪೈಲ್ವಾನ, ನಂತರ ಮುನ್ನಡೆಯನ್ನು 4–0ಗೆ ಹೆಚ್ಚಿಸಿಕೊಂಡರು. ಈ ಹಂತದಲ್ಲಿ ಎದುರಾಳಿ ಎರಡು ಪಾಯಿಂಟ್ಸ್‌ ಕಲೆಹಾಕಿದರು. ಇದರಿಂದ ವಿಚಲಿತರಾಗದ ದೀಪಕ್‌, ಇನ್ನಷ್ಟು ವಿಶ್ವಾಸದಿಂದ ಸೆಣಸಿದರು.

ಇದಕ್ಕೂ ಮುನ್ನ ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಕುಸ್ತಿಪಟು 7–6 ಪಾಯಿಂಟ್ಸ್‌ನಿಂದ ಕೊಲಂಬಿಯಾದ ಕಾರ್ಲೊಸ್‌ ಅರ್ತುರೊ ಮೆಂಡೆಜ್‌ ಎದುರು ಗೆದ್ದಿದ್ದರು.

ಹೋದ ತಿಂಗಳು ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ 20ರ ಹರೆಯದ ದೀಪಕ್‌, ಎಂಟರ ಘಟ್ಟದ ಹಣಾಹಣಿಯ ಆರಂಭದಲ್ಲೇ ಹಿನ್ನಡೆ ಕಂಡಿದ್ದರು. ಪಂದ್ಯ ಮುಗಿಯಲು ಒಂದು ನಿಮಿಷ ಇದ್ದಾಗ ಕಾರ್ಲೊಸ್‌ 6–3 ರಿಂದ ಮುಂದಿದ್ದರು.

ಈ ಹಂತದಲ್ಲಿ ಭಾರತದ ಪೈಲ್ವಾನ ಜಾಣ್ಮೆಯ ನಡೆಗಳನ್ನು ಅನುಸರಿಸಿದರು. ರಕ್ಷಣೆಗೆ ಒತ್ತು ನೀಡುವ ಜೊತೆಗೆ ಶಕ್ತಿಯುತ ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಮ್ಯಾಟ್‌ ಮೇಲೆ ಉರುಳಿಸಿದರು. ಈ ಮೂಲಕ ಸತತ ನಾಲ್ಕು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು 7–6 ಮುನ್ನಡೆ ಗಳಿಸಿದರು. ಕೊನೆಯ 21 ಸೆಕೆಂಡುಗಳಲ್ಲಿ ಎಚ್ಚರಿಕೆಯಿಂದ ಆಡಿ ಸಂಭ್ರಮಿಸಿದರು.

ಕಜಕಸ್ತಾನದ ಅದಿಲೆತ್‌ ದವಲುಮ್‌ಬಯೆವ್‌ ಎದುರಿನ ಮೊದಲ ಸುತ್ತಿನ ಹಣಾಹಣಿಯಲ್ಲೂ ದೀಪಕ್‌ 0–5 ಪಾಯಿಂಟ್ಸ್‌ನಿಂದ ಹಿಂದಿದ್ದರು. ಬಳಿಕ ಆಕ್ರಮಣಕಾರಿ ಸಾಮರ್ಥ್ಯ ತೋರಿ 8–6ರಿಂದ ಗೆದ್ದರು. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 6–0 ಪಾಯಿಂಟ್ಸ್‌ನಿಂದ ತಜಿಕಿಸ್ತಾನದ ಬಖೋದರ್‌ ಕದಿರೋವ್‌ ಅವರನ್ನು ಪರಾಭವಗೊಳಿಸಿದ್ದರು.

ಚಿನ್ನದ ಪದಕದ ಸುತ್ತಿನಲ್ಲಿ ದೀಪಕ್‌ ಅವರು ಇರಾನ್‌ನ ಹಸನ್‌ ಯಜದನಿ ವಿರುದ್ಧ ಸೆಣಸಲಿದ್ದಾರೆ. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಹಸನ್‌ 11–0 ಪಾಯಿಂಟ್ಸ್‌ನಿಂದ ಮೈಲೆಸ್‌ ಅಮಿನ್‌ ಎದುರು ವಿಜಯಿಯಾಗಿದ್ದರು.

ರಾಹುಲ್‌ಗೆ ನಿರಾಸೆ: ನಾನ್‌ ಒಲಿಂಪಿಕ್‌ ವಿಭಾಗದ 61 ಕೆ.ಜಿ.ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ರಾಹುಲ್‌ ಅವಾರೆ ನಿರಾಸೆ ಕಂಡರು.

ಜಾರ್ಜಿಯಾದ ಬೆಕ ಲೊಮಟಡ್ಜ್‌ 10–6ರಿಂದ ಭಾರತದ ಪೈಲ್ವಾನನ ವಿರುದ್ಧ ಗೆದ್ದರು.

ಕ್ವಾರ್ಟರ್‌ ಫೈನಲ್‌ನಲ್ಲಿ 10–7ರಿಂದ ಕಜಕಸ್ತಾನದ ರಸಲ್‌ ಕಲಿಯೇವ್‌ ಎದುರು ಗೆದ್ದಿದ್ದ ರಾಹುಲ್‌, ಲೊಮಟಡ್ಜ್‌ ವಿರುದ್ಧದ ಹಣಾಹಣಿಯ ಎರಡನೇ ಅವಧಿಯಲ್ಲಿ ಮಂಕಾದರು.

ಇದಕ್ಕೂ ಮೊದಲು ನಡೆದಿದ್ದ ಪಂದ್ಯದಲ್ಲಿ ರಾಹುಲ್‌ 13–2ರಿಂದ ತುರ್ಕಮೆನಿಸ್ತಾನದ ಕರೀಂ ಹೊಜಾಕೊವ್‌ ಅವರನ್ನು ಸೋಲಿಸಿದ್ದರು.

ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ರಾಹುಲ್‌ ಅವರಿಗೆ ಮಿಹೈ ಎಸಾನು ಅಥವಾ ಟೇಲರ್‌ ಗ್ರಾಫ್‌ ಅವರ ಸವಾಲು ಎದುರಾಗಲಿದೆ.

79 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಜಿತೇಂದರ್‌ ಕುಮಾರ್‌ 0–4ರಲ್ಲಿ ಸ್ಲೊವೇಕಿಯಾದ ತೈಮುರಜ್‌ ಸಲ್ಕಜನೋವಾ ಎದುರು ಸೋತರು.

ಇದಕ್ಕೂ ಮೊದಲು ನಡೆದಿದ್ದ ಪಂದ್ಯಗಳಲ್ಲಿ ಜಿತೇಂದರ್‌ 7–2ರಿಂದ ಗೆವೊರ್ಗಿ ಪ್ಯಾಸ್ಕಲೊವ್‌ ಎದುರೂ, 7–1ರಿಂದ ಮಹಮ್ಮದ್‌ ನೂರಿ ಕೊತನೊಗ್ಲು ಮೇಲೂ ವಿಜಯಿಯಾಗಿದ್ದರು.

97 ಕೆ.ಜಿ.ವಿಭಾಗದ ಮೊದಲ ಸುತ್ತಿನಲ್ಲಿ ಮೌಸನ್‌ ಖತ್ರಿ 0–10ರಿಂದ ಅಮೆರಿಕದ ಕೈಲ್‌ ಸಿಂಡರ್‌ ಎದುರು ಮಣಿದರು.

ಪ್ರತಿಕ್ರಿಯಿಸಿ (+)