ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‌ಷಿಪ್‌: ಗಿರೀಶ್‌, ಅರ್ಜುನ್‌ ಮಿಂಚು

7

ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‌ಷಿಪ್‌: ಗಿರೀಶ್‌, ಅರ್ಜುನ್‌ ಮಿಂಚು

Published:
Updated:
Deccan Herald

ಮೈಸೂರು: ಪ್ರೇಕ್ಷಕರ ಕೇಕೆ ಹಾಗೂ ಚಪ್ಪಾಳೆಯ ಬೆಂಬಲದೊಂದಿಗೆ ಬಿಗಿಪಟ್ಟು ಹಾಕಿದ ಗಿರೀಶ್‌ ಅವರು ’ಕನ್ನೇಗೌಡ ಬಸವಯ್ಯನವರ ಕುಸ್ತಿ ಸಮಿತಿ’ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಗೆದ್ದರು.

ಕನ್ನೇಗೌಡಕೊಪ್ಪಲಿನ ಬಿಜಿಎಸ್ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಮಣ್ಣಿನ ಅಖಾಡದಲ್ಲಿ ನಡೆದ ಹಣಾಹಣಿಯಲ್ಲಿ ಗಿರೀಶ್‌ ಅವರು ಕನಕಪುರದ ರಮೇಶ್‌ ಅವರನ್ನು ಚಿತ್‌ ಮಾಡಿದರು. ಆರಂಭದಿಂದಲೇ ಆಕ್ರಮಣಕಾರಿಯಾಗಿ ಕುಸ್ತಿ ಪ್ರದರ್ಶನ ನೀಡಿದ ಗಿರೀಶ್‌ ಎದುರಾಳಿಗೆ ಯಾವುದೇ ಅವಕಾಶ ನೀಡಲಿಲ್ಲ.

ಮತ್ತೊಂದು ಹಣಾಹಣಿಯಲ್ಲಿ ಲಿಂಗದೇವರಕೊಪ್ಪಲಿನ ಅರ್ಜುನ್‌ ಅವರು ಮಹದೇವಪುರದ ವಿಕಾಸ್‌ ವಿರುದ್ಧ ಗೆಲುವು ಸಾಧಿಸಿದರು. ಮೊದಲ ಕೆಲವು ಸೆಕೆಂಡು ಇಬ್ಬರ ನಡುವೆ ಸಮಬಲದ ಪೈಪೋಟಿ ನಡೆಯಿತಾದರೂ ಬಳಿಕ ಅರ್ಜುನ್‌ ಮೇಲುಗೈ ಪಡೆದರು.

ಇತರ ಹಣಾಹಣಿಗಳಲ್ಲಿ ಮೈಸೂರು ಭೂತಪ್ಪನವರ ಗರಡಿ ದೀಕ್ಷಿತ್ ಕುಮಾರ್, ಬೆಂಗಳೂರಿನ ಅಜಯ್‌ ವಿರುದ್ಧ; ಮೆಲ್ಲಹಳ್ಳಿಯ ಮನೋಜ್, ನಂಜನಗೂಡಿನ ಸೂರ್ಯಕಾಂತ್‌ ವಿರುದ್ಧ; ತೊಣಚಿಕೊಪ್ಪಲಿನ ಗೋಪಿ, ಮಾಯಣ್ಣನವರ ಗರಡಿ ವೆಂಕಟೇಶ್ ವಿರುದ್ಧ; ಇಸ್ಕಿಯಾನ್‌ ಗರಡಿಯ ಝೈದ್‌ ಖುರೈಷಿ, ಮೇಳಾಪುರ ಗಂಗಾಧರ ವಿರುದ್ಧ; ಸೈಯದ್ ನೂರುಲ್ಲಾ ಗರಡಿಯ ಶುಯೇಬ್, ರಮ್ಮನಹಳ್ಳಿ ಮಹೇಶ್‌ ವಿರುದ್ಧ; ಗೋಳೂರಿನ ನಾಗರಾಜು, ಉದ್ಬೂರಿನ ದಿನೇಶ್‌ ವಿರುದ್ಧ; ಇಟ್ಟಿಗೆಗೂಡಿನ ಚಂದನ್, ಪಾಂಡವಪುರದ ಶಿವು ವಿರುದ್ಧ; ಧಾರವಾಡದ ದೊರೆಯಪ್ಪ, ರಮ್ಮನಹಳ್ಳಿಯ ಮನು ವಿರುದ್ಧ ಗೆಲುವು ಪಡೆದರು.

ವಿಜಯಪುರದ ರವಿಚಂದ್ರ, ಕೊಲ್ಲಾಪುರದ ಕಿರಣ್‌ ಮಾನೆ; ಹಂಪಾಪುರದ ನಾಗೇಶ್, ಸಾಂಗ್ಲಿಯ ಭಜರಂಗ್, ಬಾಬುರಾಯನಕೊಪ್ಪಲಿನ ಕಿರಣ್, ಕ್ಯಾತಮಾರನಹಳ್ಳಿಯ ಬಸವರಾಜು, ಇಟ್ಟಿಗೆಗೂಡಿನ ಮಹೇಂದ್ರ ಪ್ರಸಾದ್, ಸಾಂಗ್ಲಿಯ ಪರಶುರಾಮ್; ಎಂ.ಜಿ.ಕೊಪ್ಪಲಿನ ಚೇತನ್, ಇಸ್ಕಿಯಾನ್ ಗರಡಿಯ ತಫ್ಸೀರ್ ಪಠಾಣ್, ಇಸ್ಕಿಯಾನ್ ಗರಡಿಯ ಶಾಕೀಬ್, ಪಾಂಡವಪುರದ ಸುಜೇಂದ್ರ, ಹಾಜಿನಜೀರ್ ಗರಡಿಯ ಇಕ್ಮತ್ ಅಲಿ, ಪಾಲಹಳ್ಳಿಯ ರಾಕೇಶ್ ನಡುವಿನ ಹಣಾಹಣಿ ಸಮಬಲದಲ್ಲಿ ಕೊನೆಗೊಂಡವು.

ತಾತ್ಕಾಲಿಕ ಗ್ಯಾಲರಿ ಮತ್ತು ಅಖಾಡದ ಸುತ್ತಲೂ ಕುಳಿತಿದ್ದ ನೂರಾರು ಪ್ರೇಕ್ಷಕರು ಕೇಕೆ, ಸಿಳ್ಳೆಗಳ ಮೂಲಕ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಿದರು. ಪ್ರೇಕ್ಷಕರಿಗೆ ಅನುಕೂಲ ಕಲ್ಪಿಸಲು ಎರಡು ದೊಡ್ಡ ಪರದೆಗಳಲ್ಲಿ ಕುಸ್ತಿ ಪಂದ್ಯಗಳ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !