ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಪಲ್ಲಾಗಿ ಒಂದು ‘ಯೋಗ’ ಸ್ಟೋರಿ!

Last Updated 29 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

‘ಸಿಂಪಲ್ಲಾಗೊಂದು ಲವ್ ಸ್ಟೋರಿ’ ಮೂಲಕ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ನಟಿ ಶ್ವೇತಾ ಶ್ರೀವಾತ್ಸವ್ ‘ರಹದಾರಿ’ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ವೇತಾ ತಮ್ಮ ಮುದ್ದು ಮಗಳಿಗಾಗಿ ಎರಡು ವರ್ಷಗಳ ಕಾಲ ವೃತ್ತಿ ಬದುಕಿಗೆ ಅಲ್ಪವಿರಾಮ ನೀಡಿದ್ದರೂ, ಫಿಟ್‌ನೆಸ್‌ಗೆ ಮಾತ್ರ ಪೂರ್ಣವಿರಾಮ ನೀಡಿಲ್ಲ.

ಹೆರಿಗೆ, ಬಾಣಂತನ, ಮಗಳ ಆರೈಕೆಯ ನಡುವೆ ಬ್ಯುಸಿಯಾಗಿದ್ದ ಶ್ವೇತಾ ಈಚೆಗಷ್ಟೇ ಹೊಸ ಫೋಟೊಶೂಟ್ ಮೂಲಕ ತಾವಿನ್ನೂ ಫಿಟ್‌ ಅಂಡ್ ಫೈನ್ ಆಗಿದ್ದೇನೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೆಣ್ಣುಮಕ್ಕಳು ಶಾಂತ ಮನಸ್ಸಿನಿಂದ ತಮ್ಮ ದಿನಚರಿಯನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸಿಕೊಂಡಲ್ಲಿ ದೇಹವಷ್ಟೇ ಅಲ್ಲ ಮನಸ್ಸಿನ ಫಿಟ್‌ನೆಸ್ ಅನ್ನೂ ಕಾಯ್ದುಕೊಳ್ಳಬಹುದು ಅನ್ನುವುದು ಶ್ವೇತಾ ಕಂಡುಕೊಂಡಿರುವ ಸತ್ಯ.

ತಾಯಂದಿರು ಕನಿಷ್ಠ ಒಂದು ವರ್ಷವಾದರೂ ಮಗುವಿಗೆ ಎದೆಹಾಲುಣಿಸುವುದು ಕಡ್ಡಾಯ. ಅದರಿಂದಲೇ ದೇಹದ ಸೌಷ್ಟವವನ್ನೂ ಕಾಪಾಡಿಕೊಳ್ಳಲು ಸಾಧ್ಯ. ಹೆರಿಗೆ ನಂತರ ಹೆಣ್ಣುಮಕ್ಕಳ ದೇಹದಲ್ಲಾಗುವ ಅಲ್ಪ ಬದಲಾವಣೆಗಳನ್ನು ಮುಕ್ತ ಮನದಿಂದ ಒಪ್ಪಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್‌ಗೆ ಹಿತಕಾರಿ ಅನ್ನುವುದು ಶ್ವೇತಾ ಹೇಳುವ ಕಿವಿಮಾತು.

ತೀರಾ ಬಾಯಿ ಕಟ್ಟಬೇಡಿ!

ಹೆರಿಗೆಯ ಬಳಿಕ ದಪ್ಪಗಾಗುವ ಭೀತಿಯಲ್ಲಿ ಬಹುತೇಕ ಹೆಣ್ಣುಮಕ್ಕಳು ಬಾಯಿ ಕಟ್ಟುತ್ತಾರೆ. ಆದರೆ, ಅದನ್ನು ಖಂಡಿತ ಮಾಡಬೇಡಿ ಅನ್ನುತ್ತಾರೆ ಶ್ವೇತಾ. ಬಾಣಂತಿಯರು ಪಥ್ಯದ ಹೆಸರಿನಲ್ಲಿ ಪೋಷಕಾಂಶವುಳ್ಳ ಆಹಾರ ತ್ಯಜಿಸಬೇಡಿ. ಆಹಾರದಲ್ಲಿ ಹಸಿರು ಸೊಪ್ಪು–ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳಿಗೆ ಕಾಯಂ ಸ್ಥಾನವಿರಲಿ. ಅಂತೆಯೇ ತೂಕ ಕಳೆದುಕೊಳ್ಳಬೇಕೆನ್ನುವವರು ತಪ್ಪದೇ ತುಪ್ಪವನ್ನು ತಿನ್ನಿ ಅನ್ನುತ್ತಾರೆ ಶ್ವೇತಾ.

ಸಿಹಿಗೆ ಗುಡ್‌ಬೈ

ಸಿಹಿ ಅಂದರೆ ನನಗೆ ಪ್ರಾಣ. ಆದರೆ, ತೂಕ ಹೆಚ್ಚಾಗುವ ಭೀತಿಯಲ್ಲಿ ಅವುಗಳನ್ನೆಲ್ಲಾ ಈಗ ವರ್ಜಿಸಿದ್ದೇನೆ. ಬಿಳಿ ಸಕ್ಕರೆಯ ತಿನಿಸುಗಳಿಗಿಂತ ಸಾಂಪ್ರದಾಯಿಕ ಸಿಹಿ ಆಹಾರಕ್ಕೆ ಆದ್ಯತೆ ನೀಡುತ್ತೇನೆ. ಚಾಕಲೇಟ್, ಕೇಕ್, ಮೈದಾ ಉತ್ಪನ್ನಗಳಿಗೆ ಗುಡ್‌ಬೈ ಹೇಳಿದ್ದೇನೆ. ಬಿಳಿ ಅನ್ನಕ್ಕೆ ಪರ್ಯಾಯವಾಗಿ ಸುಕ್ಕಾ ರೋಟಿ, ಕೆಂಪಕ್ಕಿ, ಕುಚಲಕ್ಕಿ ಮೊರೆ ಹೋಗಿದ್ದೇನೆ. ಉಳಿದಂತೆ ನನ್ನಿಷ್ಟದ ಹಣ್ಣು–ತರಕಾರಿಗಳು ನನ್ನ ಡಯಟ್ ಪಟ್ಟಿಯಲ್ಲಿ ಕಾಯಂ ಸ್ಥಾನ ಪಡೆದಿವೆ.

ಡಯಟ್ ಶೇ 80, ವರ್ಕೌಟ್ ಶೇ 20!

ತೂಕ ಕಳೆದುಕೊಳ್ಳುವಿಕೆಯಲ್ಲಿ ವ್ಯಾಯಾಮಕ್ಕಿಂತ ಆಹಾರದ್ದೇ ಪ್ರಮುಖ ಪಾತ್ರ. ನಿಮ್ಮ ದೇಹಕ್ಕೆ ಏನು ಬೇಕು ಅನ್ನುವುದನ್ನು ಕಂಡುಕೊಂಡು ಡಯಟ್ ಪಾಲಿಸಿದಲ್ಲಿ ಮಾತ್ರ ನೀವಂದುಕೊಂಡಂತೆ ತೂಕ ಕಳೆದುಕೊಳ್ಳಲು ಸಾಧ್ಯ. ತೂಕ ಕಳೆದುಕೊಳ್ಳುವಿಕೆಯಲ್ಲಿ ಡಯಟ್‌ ಶೇ 80ರಷ್ಟು ಪಾತ್ರ ವಹಿಸಿದರೆ, ವರ್ಕೌಟ್ ಶೇ 20ರಷ್ಟು ಪಾತ್ರ ವಹಿಸುತ್ತದೆ. ಹಾಗಾಗಿ, ಚೆನ್ನಾಗಿ ತಿಂದು ವರ್ಕೌಟ್ ಮಾಡಿ ಕರಗಿಸುತ್ತೇನೆ ಅನ್ನುವುದು ಸುಳ್ಳು ಅನ್ನುತ್ತಾರೆ ಶ್ವೇತಾ.

ಯೋಗದಲ್ಲಿದೆ ಫಿಟ್‌ನೆಸ್ ರಹಸ್ಯ

ಯೋಗದಿಂದ ರಾತ್ರೋರಾತ್ರಿ ನಾನು ಸ್ಲಿಮ್ ಆಗ್ತೀನಿ ಅನ್ನೋದು ಸುಳ್ಳು. ಯೋಗದ ಫಲಿತಾಂಶ ನಿಧಾನಗತಿಯದ್ದು. ಅದು ಬರೀ ದೈಹಿಕವಷ್ಟೇ ಅಲ್ಲ ಆಧ್ಯಾತ್ಮಿಕ, ಮಾನಸಿಕ ಬದಲಾವಣೆಗೂ ಪೂರಕ. ಏರೊಬಿಕ್ಸ್, ಈಜು, ಜುಂಬಾ ನನಗಿಷ್ಟ. ಬಿಡುವಿದ್ದಾಗ ಮಾತ್ರ ಅದರಲ್ಲಿ ತೊಡಗಿಕೊಳ್ಳುವೆ. ನನ್ನ ಯೋಗಗುರು ನಿಖಿತಾ ಅವರು ವಾರಕ್ಕೆ ಮೂರು ದಿನ ನನಗೆ ಸೂಕ್ತವಾಗುವಂಥ ಯೋಗ ಹೇಳಿಕೊಡುತ್ತಾರೆ. ನಿತ್ಯ ಸೂರ್ಯ ನಮಸ್ಕಾರದ ಜೊತೆಗೆ ಪವರ್ ಯೋಗ, ಹಠಯೋಗ, ಅಷ್ಟಾಂಗ ಹೀಗೆ ಭಿನ್ನ ಪ್ರಯೋಗ ನಡೆಯುತ್ತಲೇ ಇರುತ್ತದೆ. ಕನಿಷ್ಠ ವಾರಕ್ಕೆ ಮೂರು ದಿನವಾದರೂ ಯೋಗ ಮಾಡಿ ಅನ್ನುವುದು ನನ್ನ ಸಲಹೆ. ನನ್ನ ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್‌ನ ರಹಸ್ಯ ಯೋಗದಲ್ಲಿದೆ. ಜೀರ್ಣಕ್ರಿಯೆ ಮತ್ತು ತೂಕ ಕಳೆದುಕೊಳ್ಳುವಲ್ಲಿ ಇದು ಮಹತ್ತರ ಪಾತ್ರ ವಹಿಸಿತು ಅನ್ನುತ್ತಾರೆ ಅವರು.

ಹೆರಿಗೆ ಸಮಯದಲ್ಲಿ ನನ್ನ ದೇಹದ ತೂಕ 86 ಕೆ.ಜಿ. ಇತ್ತು. ಇಂದು ನಾನೀಗ 61 ಕೆ.ಜಿ. ಇದ್ದೇನೆ. ಇದಕ್ಕೆ ನಾನು ರೂಪಿಸಿಕೊಂಡಿರುವ ಡಯಟ್ ಮತ್ತು ಯೋಗವೇ ಕಾರಣ.ನಾವು ಮಾನಸಿಕವಾಗಿ ರಿಲ್ಯಾಕ್ಸ್ ಇದ್ದಾಗ ಮಾತ್ರ ದೇಹದ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಅದು ನಮ್ಮ ವೃತ್ತಿ ಮತ್ತು ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಏನೂ ಮಾಡದೇ ಇರುವುದಕ್ಕಿಂತ ಕನಿಷ್ಠ ಯೋಗ ಮಾಡಿ. ಅದರಿಂದ ನಾನಂತೂ ಫಲಿತಾಂಶ ಕಂಡುಕೊಂಡಿದ್ದೇನೆ ಅನ್ನುತ್ತಾರೆ ಶ್ವೇತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT