ಬುಧವಾರ, ಆಗಸ್ಟ್ 21, 2019
27 °C

ಪ್ರೊ ಕಬಡ್ಡಿ: ಯೋಧಾ–ತಮಿಳ್‌ ತಲೈವಾಸ್‌ ನಡುವಣ ಪಂದ್ಯ ರೋಚಕ ಟೈ

Published:
Updated:
Prajavani

ಪಟ್ನಾ: ಪಾಟಲೀಪುತ್ರ ಒಳಾಂಗಣ  ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೊ ಕಬಡ್ಟಿ ಟೂರ್ನಿಯಲ್ಲಿ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ನಡುವಣ ಪಂದ್ಯವು 28–28ರಿಂದ ಟೈ ಆಯಿತು.

ಮೊದಲಾರ್ಧದ ವಿರಾಮದ ವೇಳೆಗೆ ಯುಪಿ 16–11ರಿಂದ ಮುನ್ನಡೆ ಸಾಧಿಸಿತ್ತು.  ತಂಡದ ಆಟಗಾರ ರಿಷಾಂಕ್ ದೇವಾಡಿಗ ಮಿಂಚಿನಾಟವಾಡಿದ್ದರು. ಎರಡನೇ ಅವಧಿಯಲ್ಲಿ ತಲೈವಾಸ್ ತಂಡವು ತಿರುಗೇಟು ನೀಡಿತು. ಇದರಿಂದಾಗಿ ಪಂದ್ಯದ ಅಂತ್ಯದವರೆಗೂ ನೋಡುಗರು ರೋಚಕ ರಸದೌತಣ ಸವಿದರು. 

ರಾಹುಲ್ ಚೌಧರಿ ಮತ್ತು ಶಬ್ಬೀರ್ ಬಾಪು ಅವರು ತಲಾ ಐದು ಪಾಯಿಂಟ್ ಕಬಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.  ರಾಹುಲ್ 13 ರೇಡ್‌ಗಳಲ್ಲಿ ಐದು ಪಾಯಿಂಟ್ ಹೆಕ್ಕಿ ತಂದರು ರಕ್ಷಣಾ ವಿಭಾಗದಲ್ಲಿ ಮಿಂಚಿದ ಮಂಜೀತ್ ಚಿಲ್ಲಾರ್  ನಾಲ್ಕು ಟ್ಯಾಕಲ್ ಪಾಯಿಂಟ್‌ಗಳನ್ನು ತಂಡದ ಖಾತೆಗೆ ಜಮೆ ಮಾಡಿದರು. 

ಯೋಧಾ ತಂಡದಲ್ಲಿರುವ ಕನ್ನಡಿಗ ರಿಷಾಂಕ್ ದೇವಾಡಿಗ ಮತ್ತು ಸುಮಿತ್ ಅವರೂ ಉತ್ತಮವಾಗಿ ಆಡಿದರು. ರಿಷಾಂಕ್ ಐದು ಅಂಕಗಳನ್ನು ಗಳಿಸಿದರೆ ಸುಮಿತ್ ನಾಲ್ಕು ಪಾಯಿಂಟ್ಸ್‌ಗಳ ಕಾಣಿಕೆಯನ್ನು ತಮ್ಮ ತಂಡಕ್ಕೆ ನೀಡಿದರು. ಬದಲೀ ಆಟಗಾರನಾಗಿ ಕಣಕ್ಕಿಳಿದ ಸುರೇಂದರ್ ಗಿಲ್ ಮೂರು ಪಾಯಿಂಟ್‌ ಗಳಿಸಿದರು.

ಕೊನೆಯ ಒಂಬತ್ತು ನಿಮಿಷಗಳು ಬಾಕಿ ಇರುವಾಗ ತಲೈವಾಸ್ ತಂಡವು ಯೋಧಾದೊಂದಿಗೆ ಸಮಬಲ ಸಾಧಿಸಲು ಆರಂಭಿಸಿತು. ಅಲ್ಲಿಯವರೆಗೂ ತಲೈವಾಸ್ ತಂಡವು 23–2‌5ರಲ್ಲಿ ಇತ್ತು. ನಂತರ ಶಬ್ಬೀರ್ ಬಾಪು ಮತ್ತು ರಾಹುಲ್ ಉತ್ತಮ ಮುನ್ನಡೆ ತಂದುಕೊಟ್ಟರು. ಅಲ್ಲದೇ ರಕ್ಷಣಾ ಪಡೆಯು ಎದುರಾಳಿ ದಾಳಿಗಾರರನ್ನು ನಿಯಂತ್ರಿಸಿದ್ದು ಫಲ ನೀಡಿತು.

ದೇವಾಡಿಗ ಸಾಧನೆ: ಪ್ರೊ ಕಬಡ್ಡಿ ಟೂರ್ನಿಯಲ್ಲಿ 600 ಪಾಯಿಂಟ್‌ಗಳನ್ನು ಗಳಿಸಿದ ಸಾಧನೆಯನ್ನು ರಿಷಾಂಕ್ ಮಾಡಿದರು. 

Post Comments (+)