ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಡೆಯ ನರ ಸುಸ್ಥಿತಿಗೆ ವಿಶ್ವಾಮಿತ್ರ ಆಸನ

ಯೋಗಾಯೋಗ
Last Updated 25 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪುರಾಣಗಳಲ್ಲಿ ಆಸಕ್ತಿಯಿರುವವರಿಗೆ ವಿಶ್ವಾಮಿತ್ರ ಮಹರ್ಷಿಯ ಹೆಸರು ಚಿರಪರಿಚಿತ. ಕನ್ಯಾಕುಬ್ಜ ದೇಶದ ಅರಸುವಂಶಕ್ಕೆ ಸೇರಿದ ವ್ಯಕ್ತಿ ಎಂದು ಹೇಳಲಾಗಿದೆ. ಪ್ರಜಾಪಾಲಕನಾದ ಈತ ಬೇಟೆಗೆ ತೆರಳಿದಾಗ ಅರಣ್ಯದಲ್ಲಿ ವಸಿಷ್ಠಮುನಿಯ ಆಶ್ರಮದಲ್ಲಿ ತಂಗಿದ್ದ. ಬಳಿಕ, ಮುನಿಯ ಬಳಿಯಿದ್ದ ಕಾಮಧೇನುವನ್ನು ಪಡೆಯುಲು ಯತ್ನಿಸಿ ಸೋಲುತ್ತಾನೆ.

ತನ್ನ ಸೋಲಿಗೆ ಕಾರಣವಾದ ಕಾಮಧೇನುವಿನಲ್ಲಿದ್ದ ‘ಅಚಿಂತ್ಯ’ ಪ್ರಭಾವ ಹಾಗೂ ವಸಿಷ್ಠ ಮುನಿಯ ‘ಬ್ರಹ್ಮ ತೇಜೋಬಲ’ವನ್ನು ತಾನೂ ಪಡೆಯಬೇಕು ಎಂದು ನಿರ್ಧರಿಸಿ, ಘೋರ ತಪಗೈದು ವಿಶ್ವಾಮಿತ್ರನು ಬ್ರಹ್ಮರ್ಷಿ ಸ್ಥಾನ ಪಡೆಯುತ್ತಾನೆ. ಬಳಿಕ, ಲೋಕಹಿತಕ್ಕೆ ತೊಡಗುತ್ತಾನೆ.
ವಿಶ್ವಾಮಿತ್ರನು ತಪಸ್ಸನ್ನು ಆಚರಿಸುವ ವೇಳೆ ಮೇನಕೆ ಎಂಬ ಅಪ್ಸರೆಯ ರೂಪಕ್ಕೆ ಮೋಹಗೊಂಡು, ಶಕುಂತಲೆಯ ಜನನಕ್ಕೂ ಕಾರಣನಾಗಿ, ತಪಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ತಪ್ಪಿನ ಅರಿವಾಗಿ, ಅರಿಷಡ್ವರ್ಗಗಳನ್ನು ಜಯಿಸಿ, ನಾಶರಹಿತವಾದ ಬ್ರಹ್ಮರ್ಷಿ ಪದವಿ ಹಾಗೂ ಸಪ್ತರ್ಷಿ ಮಂಡಲದಲ್ಲಿ ಮಹತ್ವದ ಸ್ಥಾನ ಗಳಿಸುತ್ತಾನೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಈ ಮುನಿಯ ಹೆಸರಿನಲ್ಲಿ ವಿಶ್ವಾಮಿತ್ರಾಸನವಿದೆ.

ಅಭ್ಯಾಸಕ್ರಮ

ಕಾಲುಗಳನ್ನು ಜೋಡಿಸಿಟ್ಟು, ನೇರವಾಗಿ ನಿಂತು, ಮುಂದೆ ಬಾಗಿ ಕೈಗಳನ್ನು ನೆಲಕ್ಕೂರಿ. ಕಾಲುಗಳನ್ನು ನಾಲ್ಕರಿಂದ ನಾಲ್ಕೂವರೆ ಅಡಿ ಅಂತರದವರೆಗೆ ಹಿಂದಕ್ಕೆ ಚಾಚಿಡಿ.

ಉಸಿರನ್ನು ಹೊರದೂಡುತ್ತಾ ಬಲಗಾಲನ್ನು ಬಲಗೈನ ಹೊರಭಾಗದಲ್ಲಿ ಸುತ್ತುವರಿದು ತಂದು, ಬಲತೊಡೆಯ ಹಿಂಬದಿಯು ಬಲ ತೋಳಿನ ಹಿಂಬದಿಯ ಮೇಲ್ಭಾಗದಲ್ಲಿರಿಸಿ. ತೊಡೆ, ಮಂಡಿ, ಮೀನಖಂಡಗಳನ್ನು ತುಸು ಬಿಗಿಗೊಳಿಸಿ ಕಾಲನ್ನು ನೇರವಾಗಿಸಿ. ಚಾಚಿಟ್ಟ ಎಡಕಾಲಿನ ಪಾದವನ್ನು ನೆಲಕ್ಕೊರಗಿಸಿ ಮೀನಖಂಡ, ಮಂಡಿ, ತೊಡೆಯನ್ನು ಬಿಗಿಗೊಳಿಸಿ. ಬಳಿಕ, ಎಡತೊಡೆಯ ಮೇಲಿದ್ದ ಎಡಗೈಯನ್ನು ಮೇಲಕ್ಕೆ ಚಾಚಿ ಬೆರಳುಗಳನ್ನು ಚೂಪಾಗಿಸಿ. ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 15ರಿಂದ 20 ಸೆಕೆಂಡು ನೆಲೆಸಿ. ನಂತರ ವಿರುದ್ಧ ದಿಕ್ಕಿನಲ್ಲಿ ಅಭ್ಯಾಸ ನಡೆಸಿ.

ಫಲಗಳು

*ಕಿಬ್ಬೊಟ್ಟೆಯ ಹಾಗೂ ತೊಡೆಯ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಒದಗಿಸಿ ಬಲಗೊಳಿಸುತ್ತದೆ.

*ಕೈಗಗಳು, ಮಣಿಕಟ್ಟುಗಳು ಹೆಚ್ಚು ಹೆಚ್ಚು ಬಲ ಪಡೆಯುತ್ತವೆ.

*ತೊಡೆಯ ನರಗಳು ಸರಿಯಾದ ಕ್ರಮ ಪಡೆಯುತ್ತವೆ.

*ಬೆನ್ನಿನ ಸೆಳೆತ ದೂರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT