ಭಾನುವಾರ, ನವೆಂಬರ್ 17, 2019
24 °C
ಯೋಗಾಯೋಗ

ಕೈ ಬಲ ಮತ್ತು ಏಕಾಗ್ರತೆಗೆ ಬಕಾಸನ

Published:
Updated:
Prajavani

ದೇಹ ಸದೃಢತೆ ಜತೆಗೆ ತಾಳ್ಮೆಯನ್ನು ಹೆಚ್ಚಿಸಿ, ಏಕಾಗ್ರತೆಯನ್ನು ಒಟ್ಟೊಟ್ಟಿಗೆ ಗಳಿಸಲು ಯೋಗದಲ್ಲಿ ಹೇಳಲಾದ ಆಸನಗಳು ಪೂರಕವಾಗಿವೆ. ಅವುಗಳಲ್ಲಿ ಬಕಾಸನವೂ ಒಂದು.

ಚೂಪಾದ ಕೊಕ್ಕು, ಬೂದು ಮೈಬಣ್ಣ, ನೀಳ ಕಾಲಿನ ಹಕ್ಕಿಯೇ ಬಕ ಪಕ್ಷಿ. ಮೀನುಗಳಿರುವ ನದಿ, ಹಳ್ಳ-ಕೊಳ್ಳಗಳ ನೀರಿನಂಚಿನಲ್ಲಿ ಕಾಣುವ ಇದು, ಕಣ್ಮುಚ್ಚಿ ತೂಕಡಿಸುವಂತೆ ಕಾಣುತ್ತದೆ.

ನೀರಿನಂಚಿನಲ್ಲಿ ನೀಳ ಕಾಲುಗಳ ಮೇಲೆ ನಿಂತು, ದೇಹವನ್ನು ನಿಶ್ಚಲವಾಗಿಸಿ ನಿಲ್ಲಿಸುತ್ತದೆ. ಕಣ್ಣುಗಳನ್ನು ಮುಚ್ಚಿಕೊಂಡು ಆಹಾರ ಕ್ಕಾಗಿ(ಮೀನಿನ ಬೇಟೆಗೆ) ಹೊಂಚು ಹಾಕುತ್ತದೆ. ಮೀನು ಸಮೀಪಕ್ಕೆ ಬರುವುದನ್ನು ಸೂಕ್ಷ್ಮವಾಗಿ ಅರಿತು ಕ್ಷಣ ಮಾತ್ರದಲ್ಲಿ ಕೊಕ್ಕಿನಿಂದ ಮೀನಿನ ಬೇಟೆಯಾಡುತ್ತದೆ. ಇದಕ್ಕೇ ‘ಬಕ ಧ್ಯಾನ' ಎನ್ನುವುದು.

ಅಂದರೆ ಇತರರನ್ನು ವಂಚಿಸಲು ಹಾಕುವ ಸೋಗು ಅಥವಾ ಧ್ಯಾನ ಎಂದರ್ಥ. ಈ ಪಕ್ಷಿಯ ಹೆಸರಿನಲ್ಲಿ ಬಕಾಸನವೂ ಇದೆ. ಪಕ್ಷಿಯಲ್ಲಿನ ತಾಳ್ಮೆ, ಏಕಾಗ್ರ ಚಿತ್ತವನ್ನು ಗಳಿಸಲು ಈ ಆಸನ ನೆರವಾಗುತ್ತದೆ

ಅಭ್ಯಾಸಕ್ರಮ

ಎರಡು ಕಾಲುಗಳ ಮಧ್ಯೆ ಒಂದು ಅಡಿ ಅಂತರವಿರಿಸಿ, ನೇರವಾಗಿ ನಿಂತು ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ. ಉಸಿರನ್ನು ಹೊರ ಹಾಕುತ್ತಾ ಮುಂದೆ ಬಾಗಿ ಕೈಗಳನ್ನು ನೆಲಕ್ಕೂರಿ.

ಎರಡೂ ಕೈಗಳ ಮಧ್ಯೆ ಒಂದು ಅಡಿ ಅಂತರವಿರಲಿ. ಮೊಣಕಾಲನ್ನು ಬಾಗಿಸುತ್ತಾ ಪೃಷ್ಟ ಭಾಗವನ್ನು ಕೆಳಗಿಳಿಸಿ. ಕೈಗಳನ್ನು ತುಸು ಮಡಿಸಿ, ತೋಳುಗಳ ಹಿಂಬದಿಗೆ ಮೊಣಕಾಲಿನ ಕೆಳ ಭಾಗವನ್ನು ಕೂರಿಸಿ ಬಿಗಿಗೊಳಿಸಿ.

ದೇಹವನ್ನು ತುಸು ಮುಂದೆ ತಂದು ಕೈಗಳ ಮೇಲೆ ಭಾರ ಹಾಕುತ್ತಾ ಸಮತೋಲನ ಕಾಯ್ದುಕೊಳ್ಳಿ. ಬಳಿಕ ಕಾಲುಗಳನ್ನು ಸಮೀಪಕ್ಕೆ ತಂದು ಪಾದಗಳನ್ನು ಒಂದರ ಮೇಲೊಂದು ಇರಿಸಿ ಮೆಲ್ಲಗೆ ನೆಲದಿಂದ ಮೇಲಕ್ಕೆತ್ತಿ. ಮುಂದೆ ನೋಡುತ್ತಾ ಕೈಗಳನ್ನು ಹಿಗ್ಗಿಸಿ ನೇರ ವಾಗಿಸಿ. ಇಡೀ ದೇಹ ಎರಡು ಅಂಗೈಗಳ ಮೇಲೆ ನಿಂತಿರುತ್ತದೆ. ಅಂತಿಮ ಸ್ಥಿತಿಯಲ್ಲಿ 20ರಿಂದ 30 ಸೆಕೆಂಡು ನೆಲೆಸಿದ್ದು ವಿರಮಿಸಿ.

ಫಲಗಳು

* ಕೈಗಳು ಮತ್ತು ಭುಜಗಳಿಗೆ ಉತ್ತಮ ವ್ಯಾಯಾಮ ದೊರೆತು ದೋಷಗಳು ನಿವಾರಣೆಯಾಗುತ್ತವೆ.

* ಕೈಗಳು ಬಲಗೊಳ್ಳುತ್ತವೆ.

* ಬೆನ್ನು, ಸೊಂಟ ಭಾಗದ ನರಗಳು ಚೈತನ್ಯ ಪಡೆಯುತ್ತವೆ.

* ಕೈಗಳ ಮೇಲೆ ಇಡೀ ದೇಹವನ್ನು ನೆಲೆಗೊಳಿಸುವ ಮೂಲಕ ತಾಳ್ಮೆಯನ್ನು ಮತ್ತು ಏಕಾಗ್ರತೆಯನ್ನು ರೂಢಿಸುತ್ತದೆ.

ಪ್ರತಿಕ್ರಿಯಿಸಿ (+)