ಬುಧವಾರ, ನವೆಂಬರ್ 13, 2019
28 °C

57 ವರ್ಷದ ಮಾದಪ್ಪ ಯೋಗೇಂದ್ರ ಓಟದ ಗುಟ್ಟು

Published:
Updated:

ಬೆಳಿಗ್ಗೆ ಆರು ಗಂಟೆಗೆ ಶೇಷಾದ್ರಿಪುರಂನ ತಮ್ಮ ಮನೆಯಿಂದ ಹೊರಡುವ ಮಾದಪ್ಪ ಯೋಗೇಂದ್ರ ಮರಳುವುದು ಏಳು ಗಂಟೆಯಷ್ಟೊತ್ತಿಗೆ. ಈ ನಡುವಿನ 60 ನಿಮಿಷಗಳಲ್ಲಿ ವೈಯಾಲಿಕಾವಲ್, ಸದಾಶಿವನಗರ, ಸ್ಯಾಂಕಿ ಕೆರೆಯ ಅಂಗಳದಲ್ಲಿ ಅವರ ಓಟ. ಕೆಲವೊಮ್ಮೆ ಮಲ್ಲೇಶ್ವರಂ, ವಸಂತನಗರ,  ಯಶವಂತಪುರ, ಕನ್ನಿಂಗ್ ಹ್ಯಾಮ್ ರಸ್ತೆಗಳಲ್ಲಿ ಇವರ ಓಟದ ನೋಟ ಕಾಣಬಹುದು.

57 ವರ್ಷದ ಮಾದಪ್ಪ ಯೋಗೇಂದ್ರ ಅವರು  ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದಾರೆ. ಬೆಳ್ಳಂದೂರು ಅವರ ಕಾರ್ಯಕ್ಷೇತ್ರ. ಬೆಳಿಗ್ಗೆ ಓಟದ ಅಭ್ಯಾಸ ತಪ್ಪಿದರೆ ಸಂಜೆಗೆ ಖಚಿತ. ಆದರೆ ಓಡುವುದನ್ನು, ವ್ಯಾಯಾಮವನ್ನು ಯಾವತ್ತೂ ತಪ್ಪಿಸಿಕೊಂಡವರೇ ಅಲ್ಲ. ವಾರಾಂತ್ಯದ ಎರಡು ರಜೆಗಳನ್ನು ತಮ್ಮ ತವರೂರು ಮೈಸೂರಿನಲ್ಲಿರುತ್ತಾರೆ. ಅಲ್ಲಿ ತಾವಷ್ಟೇ ಅಲ್ಲ. ತಮ್ಮ ಓರಗೆಯವರ ದೊಡ್ಡ ಬಳಗದೊಂದಿಗೆ ಅಭ್ಯಾಸ ಮಾಡುತ್ತಾರೆ. ಕಿರಿಯರಿಗೂ ಮಾರ್ಗದರ್ಶನ ನೀಡುತ್ತಾರೆ.

ಮುಂದಿನ ತಿಂಗಳು ಮಲೇಷ್ಯಾದಲ್ಲಿ ನಡೆಯಲಿರುವ ಮಾಸ್ಟರ್ಸ್ ಅಥ್ಲೆಟಿಕ್ಸ್‌ಗೆ ಹೋಗುವ ಸಿದ್ಧತೆಯಲ್ಲಿದ್ದಾರೆ. 5000 ಮೀ, 10000 ಮೀಟರ್ಸ್ ಮತ್ತು ಕ್ರಾಸ್‌ ಕಂಟ್ರಿ ಓಟಗಳಲ್ಲಿ ಅವರು ಮೊದಲಿನಿಂದಲೂ ಸಾಧನೆ ಮಾಡುತ್ತಿದ್ದಾರೆ.

ಆದರೆ, ಅವರ ಓಟದ ಹವ್ಯಾಸ ಆರಂಭವಾಗಿದ್ದು ಕ್ರೀಡಾಪಟುವಾಗುವ ಉದ್ದೇಶದಿಂದ ಅಲ್ಲ. ಹೈಸ್ಕೂಲಿನಲಿದ್ದಾಗ ಎನ್‌ಸಿಸಿ ಕೆಡೆಟ್ ಆಗಿದ್ದರು. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆಯುವ ಪರೇಡ್‌ನಲ್ಲಿ ಭಾಗವಹಿಸಲೇಬೇಕೆಂಬ ಛಲ ಅವರಿಗೆ ಇತ್ತು. ಆದರೆ, ಅದರಲ್ಲಿ ಭಾಗವಹಿಸುವ ಅರ್ಹತೆ ಗಳಿಸಲು ದೂರ ಅಂತರದ ಓಟದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿತ್ತು. ಅದಕ್ಕಾಗಿ ಹಗಲು ರಾತ್ರಿ ಶ್ರಮಪಟ್ಟರು. ದೂರ ಅಂತರದ ಓಟಗಳಲ್ಲಿ ಪರಿಣತಿ ಸಾಧಿಸತೊಡಗಿದರು. ಕೊನೆಗೂ ಪಿಯುಸಿಯಲ್ಲಿ ದೆಹಲಿಯಲ್ಲಿ ಪರೇಡ್ ಮಾಡಿಬರುವಲ್ಲಿ ಯಶಸ್ವಿಯಾದರು. ಆಗ ಕಾಲೇಜು ದಿನಗಳಲ್ಲಿ ಪದಕ, ಪ್ರಶಸ್ತಿ ಗೆದ್ದರು. ನೌಕರಿಗೆ ಸೇರಿದ ನಂತರವೂ  ಆರೋಗ್ಯ ನಿರ್ವಹಣೆಗಾಗಿ ತಾಲೀಮು ಮಾಡುತ್ತಿದ್ದರು. ಅವರ ಕ್ರೀಡಾ ಜೀವನದಲ್ಲಿ ಮತ್ತೊಮ್ಮೆ ಮಹತ್ವದ ತಿರುವು ಲಭಿಸಿದ್ದು 2010ರಲ್ಲಿ.

‘ಆ ವರ್ಷ ಮೈಸೂರಿಗೆ ದೆಹಲಿ ಕಾಮನ್‌ವೆಲ್ತ್‌ ಗೇಮ್ಸ್‌‌ನ ರಿಲೇ ಬೇಟನ್ ರ‍್ಯಾಲಿ ಬಂದಿತ್ತು. ಆಗ ನಾನು ಭಾಗವಹಿಸಿದ್ದೆ. ಅದರಲ್ಲಿ ಓಡುತ್ತಿದ್ದ ವಿದೇಶಗಳ ಮಾಸ್ಟರ್ಸ್‌ ಅಥ್ಲೀಟ್‌ಗಳನ್ನು ಭೇಟಿಯಾದೆ. ನಾನೂ ಯಾಕೆ ಇವರಂತೆ ಮಾಸ್ಟರ್ ಅಥ್ಲೀಟ್ ಆಗಬಾರದು ಎಂದು ಯೋಚಿಸಿ ಕಾರ್ಯಪ್ರವೃತ್ತನಾದೆ’ ಎಂದು ನೆನಪಿಸಿಕೊಳ್ಳುತ್ತಾರೆ ಯೋಗೇಂದ್ರ. 

ಅಲ್ಲಿಂದ ಈಚೆಗೆ ಅವರು ರಾಜ್ಯ, ರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಮೈಸೂರಿನ ಅವರ ಮನೆಯ ಒಂದು ಕೋಣೆಯಲ್ಲಿ ಅವರ ಪ್ರಶಸ್ತಿ, ಪತ್ರಗಳು ಮತ್ತು ಪದಕಗಳು ಗೋಡೆಯನ್ನು ಅಲಂಕರಿಸಿವೆ. 2010ರಲ್ಲಿ ಮಲೇಷ್ಯಾ ಮತ್ತು 2011ರಲ್ಲಿ ಅಮೆರಿಕದಲ್ಲಿ ನಡೆದ ನಡೆದ ಕೂಟಗಳಲ್ಲಿ ಸ್ಪರ್ಧಿಸಿದರು. 2012ರಲ್ಲಿ ತೈವಾನ್‌ನಲ್ಲಿ ಏಷ್ಯನ್ ಮಾಸ್ಟರ್ಸ್‌ನಲ್ಲಿ 3000 ಮೀ ಸ್ಟೀಪಲ್ ಚೇಸ್‌ನಲ್ಲಿ ಭಾಗವಹಿಸಿದ್ದರು. 2014ರಲ್ಲಿ ಜಪಾನಿನಲ್ಲಿ ನಡೆದಿದ್ದ ಕೂಟದ 4X400 ಮೀ ರಿಲೆಯಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು. 2016ರಲ್ಲಿ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆದಿದ್ದ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಕೂಡ ಸ್ಪರ್ಧಿಸಿದ್ದರು.

‘ನಮ್ಮ ಇಲಾಖೆಯ ಅಧಿಕಾರಿಗಳು, ಕುಟುಂಬದವರ ಪ್ರೋತ್ಸಾಹದಿಂದ ಹತ್ತಾರು ದೇಶಗಳಲ್ಲಿ ನಡೆಯುವ ಕೂಟಗಳಿಗೆ ಹೋಗುವ ಅವಕಾಶ ಸಿಕ್ಕಿದೆ. ಕ್ರೀಡೆಯನ್ನು ಶ್ರದ್ಧೆಯಿಂದ ರೂಢಿಸಿಕೊಂಡರೆ ಸಿಗುವ ಲಾಭಗಳಲ್ಲಿ ಇದೂ ಒಂದು. ಬೇರೆ ಬೇರೆ ದೇಶಗಳ, ರಾಜ್ಯಗಳ ಸಂಸ್ಕೃತಿ, ಆಹಾರ, ಜನಜೀವನವನ್ನು ತಿಳಿಯಬಹುದು. ಇದು ಕೂಡ ನಮ್ಮ ವ್ಯಕ್ತಿತ್ವವನ್ನು ಆರೋಗ್ಯಯುತಗೊಳಿಸುತ್ತದೆ’ ಎಂದು ಯೋಗೇಂದ್ರ ಹೇಳುತ್ತಾರೆ.

ಬೆಂಗಳೂರು ಮತ್ತು ಮೈಸೂರು ಜನರಿಗೆ ಓಟಗಾರನಾಗಿಯೇ ಹೆಚ್ಚು ಪರಿಚಿತರು. ವಿದ್ಯಾರ್ಥಿ ದೆಸೆಯಿಂದಲೂ ಅಥ್ಲೀಟ್ ಆಗಿರುವ ಅವರು ಜೀವನದುದ್ದಕ್ಕೂ ಅಥ್ಲೀಟ್‌ ಆಗಿಯೇ ಉಳಿದಿದ್ದಾರೆ. ಈ ಹಾದಿಯಲ್ಲಿ ಅವರನ್ನು ಹತ್ತಾರು ಸಂಘಟನೆಗಳು ಗೌರವಿಸಿವೆ. ಪ್ರಶಸ್ತಿಗಳನ್ನು ಪ್ರದಾನ ಮಾಡಿವೆ.

‘ಕ್ರೀಡೆ ಮತ್ತು ಫಿಟ್‌ನೆಸ್ ಒಂದೇ ನಾಣ್ಯದ ಎರಡು ಮುಖಗಳು. ನಾವು ಬಾಲ್ಯದಲ್ಲಿ ಆಟೋಟಗಳಲ್ಲಿ ಇರುತ್ತವೆ. ಆದರೆ ವೃತ್ತಿಪರರಾದಂತೆ, ಕುಟುಂಬದ ಜವಾಬ್ದಾರಿ ಹೆಚ್ಚಿದಂತೆ ಕ್ರೀಡೆಗಳಿಂದ ವಿಮುಖರಾಗುತ್ತವೆ. ಆಗ ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದರೆ ಯಾವುದೇ ಖರ್ಚುಗಳಿಲ್ಲದ ಓಟ ಮತ್ತು ನಡಿಗೆಗಳನ್ನು ನಿರಂತರವಾಗಿ  ಮಾಡುವುದರಿಂದ ಹೆಚ್ಚು ಲಾಭವಿದೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಮಾಸ್ಟರ್ಸ್‌ ಕ್ರೀಡೆಗಳು ನಡೆಯುತ್ತಿವೆ. 90 ವರ್ಷ ಮೀರಿದವರೂ ಈ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಅವರ ಜೀವನಪ್ರೀತಿಯನ್ನು ನೋಡಿದಾಗ ಮತ್ತಷ್ಟು ಪ್ರೇರಣೆ ಸಿಗುತ್ತದೆ’ ಎಂದು ಯೋಗೇಂದ್ರ ಹೇಳುತ್ತಾರೆ.

ಇದನ್ನೂ ಓದಿ: ಆರೋಗ್ಯ, ಏಕಾಗ್ರತೆಗೆ ಕ್ರೀಡೆ ಅಗತ್ಯ

ಪ್ರತಿಕ್ರಿಯಿಸಿ (+)