ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔತಣಕೂಟ: ನಾಗರಿಕರಿಗೆ ಪರದಾಟ

ಮಿನಿ ವಿಧಾನಸೌಧಕ್ಕೆ ಬೀಗ ಹಾಕಿ ಪ್ರತಿಭಟಿಸಿದ ಸಾರ್ವಜನಿಕರು
Last Updated 25 ಮೇ 2018, 4:55 IST
ಅಕ್ಷರ ಗಾತ್ರ

ನಾಗಮಂಗಲ: ‘ಅಧಿಕಾರಿಗಳು ಕರ್ತವ್ಯ ಮರೆತು ಔತಣಕೂಟದಲ್ಲಿ ಮೋಜು–ಮಸ್ತಿಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿ ನಾಗರಿಕರು ಬುಧವಾರ ಮಿನಿ ವಿಧಾನಸೌಧಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಾಲ್ಲೂಕು ಆಡಳಿತವು ಮಾಂಸಾಹಾರ ಹಾಗೂ ಸಸ್ಯಾಹಾರ ಊಟದ ವ್ಯವಸ್ಥೆಯನ್ನು ಪಟ್ಟಣದ ಸಮೀಪ ಶ್ರೀರಾಮನಹಳ್ಳಿಯ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಮಾಡಲಾಗಿತ್ತು. ಇದರಿಂದ ಮಧ್ಯಾಹ್ನದ ಬಳಿಕ ಕಚೇರಿಯಲ್ಲಿ ಯಾರೂ ಇರಲಿಲ್ಲ. ಸಂಜೆ 4 ಗಂಟೆಯಾದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗೆ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ನಾಗರಿಕರು ಮಿನಿ ವಿಧಾನಸೌಧದ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಧರಣಿ ನಡೆಸಿದರು.

ಶಿರಸ್ತೇದಾರ್ ದ್ಯಾವರಸಯ್ಯ ಅವರು ಕಚೇರಿಗೆ ಬಂದರು. ಕಚೇರಿಯ ಬಾಗಿಲು ತೆಗೆಯುವಂತೆ ಮನವಿ ಮಾಡಿದರು. ಆದರೆ, ಅವರ ಮಾತಿಗೆ ಕಿವಿಗೊಡದ ಪ್ರತಿಭಟನಾಕಾರರು, ‘ತಹಶೀಲ್ದಾರ್ ಬರುವವರೆಗೆ ಕಚೇರಿಯ ಬಾಗಿಲನ್ನು ತೆರೆಯುವುದಿಲ್ಲ’ ಎಂದು ಪಟ್ಟುಹಿಡಿದರು.

ತಹಶೀಲ್ದಾರ್ ಎಂ.ನಂಜುಂಡಯ್ಯ ಅವರು ಅತಿಥಿ ಗೃಹದಿಂದ ಮಿನಿವಿಧಾನಸೌಧಕ್ಕೆ ಬಂದರು. ಈ ವೇಳೆ ಅವರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು.

‘ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಅಧಿಕಾರಿಗಳು ಮೋಜು–ಮಸ್ತಿಯಲ್ಲಿ ತೊಡಗಿದ್ದಾರೆ’ ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನಂಜುಂಡಯ್ಯ, ‘ಚುನಾವಣಾ ಕರ್ತವ್ಯದಲ್ಲಿ ಭಾಗಿಯಾದ ನೌಕರರಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಹೀಗಾಗಿ ನೌಕರರು ಕಚೇರಿಗೆ ಬರಲು ತಡವಾಗಿದೆ. ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ರೈತರ ಪರವಾಗಿ ನಾನಿದ್ದೇನೆ’ ಎಂದು ಸಮಾಧಾನ ಪಡಿಸಿದರು.

ಇದರಿಂದ ಸಮಾಧಾನಗೊಂಡ ನಾಗರಿಕರು ಬಾಗಿಲ ಬೀಗವನ್ನು ತೆರೆದು ತಹಶೀಲ್ದಾರ್ ಮತ್ತು ನೌಕರರು ಕಚೇರಿ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ಉಪವಿಭಾಗಾಧಿಕಾರಿ ಸದಾಶಿವ ಬಿ.ಪ್ರಭು ದೂರವಾಣಿಯಲ್ಲಿ ಮಾತನಾಡಿ, ‘ಚುನಾವಣೆಯಲ್ಲಿ ಸಹಕರಿಸಿದ ಸಿಬ್ಬಂದಿಗೆ ಸಣ್ಣ ಔತಣಕೂಟ ಮಾಡಲಾಗಿತ್ತು’ ಎಂದು ಸ್ಪಷ್ಟಪಡಿಸಿದರು.

ಔತಣಕೂಟದಲ್ಲಿ ಸದಾಶಿವ ಬಿ.ಪ್ರಭು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಹಶೀಲ್ದಾರ್‌ ವಿಷಾದ

‘ಚುನಾವಣಾ ಕರ್ತವ್ಯದಲ್ಲಿ ಭಾಗಿಯಾದ ನೌಕರರಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಹೀಗಾಗಿ ನೌಕರರು ಕಚೇರಿಗೆ ಬರಲು ತಡವಾಗಿದೆ. ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ರೈತರ ಪರವಾಗಿ ನಾನಿದ್ದೇನೆ’ ಎಂದು ಸಮಾಧಾನ ಪಡಿಸಿದರು.

**
‘ಚುನಾವಣೆಯಲ್ಲಿ ಸಹಕರಿಸಿದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಸಣ್ಣ ಔತಣಕೂಟ ಮಾಡಲಾಗಿತ್ತು. ಇದರಲ್ಲಿ ತಪ್ಪು ಹುಡುಕುವುದು ಬೇಡ
– ಸದಾಶಿವ ಬಿ.ಪ್ರಭು, ಉವಿಭಾಗಾಧಿಕಾರಿ 

**
ಭೂಮಿಗೆ ಸಂಬಂಧಿಸಿದ ಟಿಪ್ಪಣಿ ಕಾಪಿ ಪಡೆಯಲು ಮಧ್ಯಾಹ್ನ 1ರಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ, ಕಚೇರಿಯಲ್ಲಿ ನೌಕರರು ಇಲ್ಲದೆ ತೊಂದರೆ ಉಂಟಾಯಿತು
– ಕೃಷ್ಣಮೂರ್ತಿ, ದೇವಲಾಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT