ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹ್ಯ ಪಟ್ಕೊಂಡ್ರೆ ಬದುಕು ನಡೆಯಲ್ಲ...

Last Updated 7 ಮಾರ್ಚ್ 2018, 17:42 IST
ಅಕ್ಷರ ಗಾತ್ರ

ನನ್ನ ಹೆಸರು ಸುಶೀಲಾ. ವಯಸ್ಸು 32. ನಮ್ಮ ಪೂರ್ವಜರು ತಮಿಳುನಾಡಿನಿಂದ ವಲಸೆ ಬಂದು ಇಲ್ಲಿಯೇ ನೆಲೆ ನಿಂತಿದ್ದಾರೆ.  ನಾನು ಹುಟ್ಟಿ ಬೆಳೆದಿದ್ದು ತಮಿಳುನಾಡಿನಲ್ಲಿ. ಅಲ್ಲಿಯೇ ಏಳನೇ ತರಗತಿವರೆಗೆ ಓದಿದೆ. ಮದುವೆಯಾದ ಮೇಲೆ ಇಲ್ಲಿಗೆ ಬಂದೆ. ನನಗೆ ಏಳು ಮಂದಿ ಮಕ್ಕಳು. ಐದು ಹೆಣ್ಣು, ಎರಡು ಗಂಡು. ಗಂಡನೊಬ್ಬನ ದುಡಿಮೆಯಿಂದ ಬದುಕು ಸಾಗದು ಎಂದು ಅರಿತು ಪೌರಕಾರ್ಮಿಕ ವೃತ್ತಿಗೆ ಸೇರಿದೆ.

ಇತ್ತೀಚೆಗೆ ಗಂಡನ ದುಡಿಮೆಯೂ ಅಷ್ಟಕಷ್ಟೆ. ಕುಡಿದೂಕುಡಿದು ಅವನ ಆರೋಗ್ಯ ಹಾಳಾಗಿದೆ. ತಲೆನೋವು, ಭಾರ ಎತ್ತಲಾಗದು ಹೀಗೆ ಅವನಿಗೆ ಏನೋನೊ ಕಾಯಿಲೆ. ಒಂದು ವರ್ಷದಿಂದ ಮನೆಯಲ್ಲೇ ಇದ್ದಾನೆ. ಸಣ್ಣಪುಟ್ಟ ಕೆಲಸ ಮಾಡ್ತಾನೆ. ನಮ್ಮದು ವಿಚಿತ್ರ ಬದುಕು. ಮಳೆಯಿರಲಿ, ಬಿಸಿಲಿರಲಿ, ಚಳಿಯಿರಲಿ ಬೆಳ್ಳಂಬೆಳಿಗ್ಗೆಯೇ ಎದ್ದು ಕೆಲಸಕ್ಕೆ ಹಾಜರಾಗಬೇಕು. ನಾನೀಗ ಒಂದೂವರೆ ತಿಂಗಳ ಬಾಣಂತಿ. ಅಷ್ಟು ಚಿಕ್ಕ ಮಗುವನ್ನು ಮನೆಯಲ್ಲಿ ಬಿಟ್ಟು ಬರಲು ಕಷ್ಟ ಆಗುತ್ತೆ. ಹಾಗಂತ ಮನೆಯಲ್ಲಿ ಕುಳಿತರೆ ಹೊಟ್ಟೆ ತುಂಬುತ್ತಾ?

ನನ್ನ ನಿತ್ಯದ ದಿನಚರಿ ಆರಂಭವಾಗುವುದು ಬೆಳಿಗ್ಗೆ 5ಕ್ಕೆ. ಮುಗಿಯೋದು ರಾತ್ರಿ 11ಕ್ಕೆ. ನನ್ನ ಒಂದು ದಿನದ ಬದುಕು ಹೇಗಿರುತ್ತೆ ಗೊತ್ತಾ?

ಬೆಳಿಗ್ಗೆ 5ರಿಂದ 6.30
ಬೆಳಿಗ್ಗೆ 6.30ರ ಒಳಗೆ ಬಯೋಮೆಟ್ರಿಕ್‌ಗೆ ಬೆರಳು ಒತ್ತಬೇಕು. ಅದಕ್ಕೇ ಬೆಳಿಗ್ಗೆ 5 ಗಂಟೆಗೇ ಎದ್ದುಬಿಡ್ತೀನಿ ನೋಡಿ. ಎದ್ದವಳೇ ಮುಖ ತೊಳೆದುಕೊಂಡು ಗಂಡ–ಮಕ್ಕಳಿಗೆ ತಿಂಡಿ ರೆಡಿ ಮಾಡ್ತೀನಿ. ಮಧ್ಯಾಹ್ನದ ಊಟಕ್ಕೆ ಸಾಂಬಾರ್ ಬೆಳಿಗ್ಗೆಯೇ ಮಾಡಿಬಿಡ್ತೀನಿ. ಕೊನೆಯ ಮಗುವಿಗೆ ಈಗ ಒಂದೂವರೆ ತಿಂಗಳು. ಅದು ಎಚ್ಚರಿದ್ದರೆ ಎದೆಹಾಲು ಕುಡಿಸ್ತೀನಿ. ನಾನು ಕೆಲಸಕ್ಕೆ ಹೋದ್ಮೇಲೆ ಅದಕ್ಕೆ ಕುಡಿಸೋಕೆ ಅಂತ ಪಾಕೀಟ್ ಹಾಲು ಕಾಯಿಸಿಡ್ತೀನಿ. ಮಗು ನೋಡಿಕೊಳ್ಳಲು ಸಂಬಂಧಿಕರೊಬ್ಬರು ಇದ್ದಾರೆ. ಹಾಗಾಗಿ ಸ್ವಲ್ಪ ನೆಮ್ಮದಿ. ಆಮೇಲೆ ನಾನು ರೆಡಿ ಆಗ್ತೀನಿ. ರೆಡಿ ಅಂದ್ರೆ ಯಾವ ಮೇಕಪ್ ಗೀಕಪ್ ಅಂದ್ಕೊಬೇಡಿ. ಕೈಗೆ ಸಿಕ್ಕ ಸೀರೆಯನ್ನು ಮೈಗೆ ಸುತ್ತಿಕೊಂಡು, ತಲೆ ಬಾಚ್ಕೊಂಡು, ಹವಾಯಿ ಚಪ್ಪಲಿ ಮೆಟ್ಟಿಕೊಂಡು ಬಸ್‌ಸ್ಟ್ಯಾಂಡ್ ಕಡೆ ಓಡ್ತೀನಿ. ತಕ್ಷಣ ಬಸ್ ಸಿಕ್ಕರೆ ಖುಷಿ. ಇಲ್ಲದಿದ್ದರೆ ಹತ್ತು ನಿಮಿಷ ಕಾಯ್ಬೇಕು. ಆರೂಕಾಲು ಆಗುವ ಒಳಗೆ ಸಂಪಂಗಿರಾಮನಗರ ಪೊಲೀಸ್ ಸ್ಟೇಷನ್ ಪಕ್ಕ ಇರುವ ಬಯೋಮೆಟ್ರಿಕ್‌ಗೆ ಬೆರಳು ಒತ್ತ ಬೇಕು. ಆಮೇಲೆ ಮನಸಿಗೆ ತುಸು ಸಮಾಧಾನ. ಬೆಳಿಗ್ಗೆ ಆರೂವರೆ ಒಳಗೆ ನಾನು ಬೆರಳು ಒತ್ತದಿದ್ದರೆ ಆ ದಿನದ ಸಂಬಳ ಕಟ್.

ಬೆಳಿಗ್ಗೆ 6.30ರಿಂದ 10.30
ಮೇಸ್ತ್ರಿ ಅಣ್ಣ ಬಂದು ಇಂತಿಂಥ ರಸ್ತೆಗಳನ್ನು ಗುಡಿಸಬೇಕು ಅಂತ ಹೇಳ್ತಾರೆ. ತಳ್ಳುಗಾಡಿ ತಗೊಂಡು ಹೊರಡ್ತೀನಿ. ಗೆಳತಿಯರ ಜೊತೆಗೆ ಎರಡು ಕಿ.ಮೀ. ರಸ್ತೆಯ ಕಸ ಗುಡಿಸ್ತೀನಿ.

ನಾನೀಗ ಒಂದೂವರೆ ತಿಂಗಳ ಬಾಣಂತಿ. ಬೆಳಿಗ್ಗೆ ಬೇಗ ಎದ್ದು ಬರುವಾಗ ತುಂಬಾ ಚಳಿ ಅನ್ಸುತ್ತೆ. ಒಮ್ಮೆಮ್ಮೆ ಬಿಟ್ಟೂಬಿಡದೆ ಸೀನು, ಕೆಮ್ಮು ಬರುತ್ತೆ. ಎಂಥ ಥಂಡಿ ಇದ್ರೂ ಬೀದಿ ಗುಡಿಸೋದು ನಿಲ್ಲಿಸಲ್ಲ. ದೂಳು, ಮಣ್ಣು, ಹಸಿ–ಒಣ ಕಸ ಎಲ್ಲವನ್ನೂ ಬಳಿದು ಹಾಕಬೇಕು. ರಸ್ತೆ ಮೇಲೆ ಎಲ್ಲೆಂದರಲ್ಲಿ ಚೆಲ್ಲಾಡಿರುವ ಕಸವನ್ನು ಮೊದಲು ಒಂದೆಡೆ ಗುಡ್ಡೆ ಮಾಡ್ಕೊಂಡು, ಅದರಲ್ಲಿ ಹಸಿ ಮತ್ತು ಒಣ ಕಸ ಬೇರೆ ಮಾಡಿ ಗಾಡಿಗೆ ಹಾಕ್ತೀನಿ. ಉಗುಳು, ಎಲೆ ಅಡಿಕೆ, ಪಾನ್ ಬೀಡಾದ ಕೊಳಕು, ಉಚ್ಚೆ, ಕಕ್ಕಸು ಎಲ್ಲವೂ ನಮ್ಮ ಕಣ್ಣಿಗೆ ಕಸ ಮಾತ್ರ ಆಗಿ ಕಾಣಿಸುತ್ತೆ. ಕೆಲಸಕ್ಕೆ ಸೇರಿದ ಹೊಸತರಲ್ಲಿ ಇದನ್ನೆಲ್ಲಾ ನೋಡಿದರೆ ಬೇಸರ ಅನಿಸುತ್ತಿತ್ತು, ಕೆಟ್ಟ ವಾಸನೆಗೆ ವಾಂತಿ ಬಂದಂತೆ ಆಗ್ತಿತ್ತು. ಈಗ ಇದೆಲ್ಲಾ ರೂಢಿಯಾಗಿದೆ. ಅಸಹ್ಯ ಪಟ್ಟುಕೊಂಡ್ರೆ ಬದುಕು ನಡೀಯೋದಿಲ್ಲ ಅಲ್ವಾ?

ಮೊನ್ನೆ ತುಂಬಾ ಸುಸ್ತಾಗಿತ್ತು. ಡಾಕ್ಟರ್ ಗ್ಲುಕೋಸ್ ಹಾಕಬೇಕು ಅಂದ್ರು. ಅದೆಲ್ಲಾ ಹಾಕಿಸಿಕೊಳ್ಳಲು ಪುರುಸೊತ್ತು ಇರಲಿಲ್ಲ. ಗುಳಿಗೆ ಇಸ್ಕೊಂಡು ಬಂದೆ. ಕೆಲಸ ಬಿಟ್ಟು ಡಾಕ್ಟರ್ ಹತ್ತಿರ ಹೋದರೆ ಒಂದು ದಿನದ ಸಂಬಳ ಕಟ್ ಆಗುತ್ತೆ.

10.30ರಿಂದ 11
ಕೆಲಸ ಒಂದು ಹಂತಕ್ಕೆ ಬರುವ ಹೊತ್ತಿಗೆ ತಿಂಡಿ ಬರುತ್ತೆ. ಅನ್ನ ಸಾಂಬಾರ್ ಕೊಡ್ತಾರೆ. ವಾರಕ್ಕೆರಡು ದಿನ ತಿಂಡಿ ಕೊಡ್ತಾರೆ. ಅದರಲ್ಲಿ ಯಾವ ಪೌಷ್ಟಿಕಾಂಶವೂ ಇರಲ್ಲ. ಹಸಿವಾಗಿರುತ್ತೆ ಅಂತ ಸಿಕ್ಕಷ್ಟು ತಿಂತೀವಿ. ಮಗುಗೆ ಎದೆಹಾಲು ಕುಡಿಸ್ತಾ ಇರೋದರಿಂದ ನನಗೆ ಹಸಿವು ಜಾಸ್ತಿ. ಹಸಿವು ಜಾಸ್ತಿ ಆದ್ರೆ ನೀರು ಕುಡೀತೀನಿ. ತಡೆಯೋಕೆ ಆಗದಿದ್ರೆ ಒಂದು ಕಪ್ ಟೀ ಕುಡಿದು, ಬನ್ ತಿಂತೀನಿ. ಹೋಟೆಲ್‌ಗೆ ಹೋಗಿ ತಿನ್ನುವಷ್ಟು ಸಮಯ ಮತ್ತು ಹಣ ಎರಡೂ ಇಲ್ಲ ಹತ್ತಿರ ಬಳಿ.

ಬೆಳಿಗ್ಗೆ 11ರಿಂದ ಮಧ್ಯಾಹ್ನ 2
ತಿಂಡಿ ತಿಂದ ಮೇಲೆ ಬೇರೆ ರಸ್ತೆಗಳ ಕಸ ತೆಗೆಯೋಕೆ ಹೋಗಬೇಕು. ಕೆಲಸ ಮುಗಿಯೋದು ಮಧ್ಯಾಹ್ನ 2 ಗಂಟೆಗೆ.

ಮಧ್ಯಾಹ್ನ 3ರಿಂದ ಸಂಜೆ 6
ಕೆಲಸ ಮುಗಿಸಿದವಳು ಮನೆ ತಲುಪುವ ಹೊತ್ತಿಗೆ ಮಧ್ಯಾಹ್ನ 3 ಗಂಟೆ ಆಗಿರುತ್ತೆ. ಮನೆಗೆ ಹೋದಮೇಲೆ ಪಾತ್ರೆ ತೊಳೆದು, ಮಗುವಿನ ಬಟ್ಟೆ ಜಾಲಿಸಿ, ಸ್ವಲ್ಪ ಹೊತ್ತು ಮಲಗಬೇಕು ಅಂದ್ಕೊಳ್ತೀನಿ. ಅಷ್ಟೊತ್ತಿಗೆ ಮಗು ಎದ್ದುಬಿಡುತ್ತೆ. ಅದಕ್ಕೆ ಹಾಲು ಕುಡಿಸಿ ಮಲಗಿಸುವಷ್ಟರಲ್ಲಿ 5 ಗಂಟೆ ಆಗುತ್ತೆ. ಅಷ್ಟೊತ್ತಿಗೆ ಸ್ಕೂಲಿನಿಂದ ಮಕ್ಕಳು ಬರ್ತಾರೆ. ಅವರ ಜತೆ ಒಂದರ್ಧ ಗಂಟೆ ಆಟ ಆಡ್ತೀನಿ. 6 ಗಂಟೆಗೆ ಅವರೆಲ್ಲಾ ಟ್ಯೂಷನ್‌ಗೆ ಹೋಗ್ತಾರೆ.

ಸಂಜೆ 6.30ರಿಂದ ರಾತ್ರಿ 11
ಮಕ್ಕಳು ಟ್ಯೂಷನ್‌ಗೆ ಹೋದ ಮೇಲೆ, 6.30ಕ್ಕೆ ರಾತ್ರಿ ಅಡುಗೆಗೆ ಇಡ್ತೀನಿ. ಮಧ್ಯೆಮಧ್ಯೆ ಮಗುವಿಗೆ ಹಾಲು ಕುಡಿಸೋದು ಇದ್ದಿದ್ದೇ. ಒಂಬತ್ತು ಗಂಟೆ ಹೊತ್ತಿಗೆ ಅಡುಗೆ ಕೆಲಸ ಮುಗಿಯುತ್ತೆ. ಒಂಬತ್ತೂವರೆ ಹೊತ್ತಿಗೆ ಎಲ್ಲರೂ ಊಟ ಮಾಡ್ತೀವಿ. ಹತ್ತೂವರೆ ಒಳಗೆ ಅಡುಗೆ ಮನೆ ಸ್ವಚ್ಛ ಮಾಡಿ, ಪಾತ್ರೆ ತೊಳೆದಿಡ್ತೀನಿ. ಮಾರನೇ ದಿನದ ತಿಂಡಿಗೆ ಮತ್ತು ಸಾರಿಗೆ ಬೇಕಾದ ಸಾಮಗ್ರಿ ಜೋಡಿಸಿಟ್ಟು ಮಲಗುವ ಹೊತ್ತಿಗೆ ಹನ್ನೊಂದು ಗಂಟೆ ಆಗುತ್ತೆ. ಮಗು ಎದ್ದಾಗ ಹಾಲು ಕುಡಿಸಿ, ಕಕ್ಕ ಮಾಡಿದ್ರೆ ಬಟ್ಟೆ ಬದಲಿಸ್ತೀನಿ. ಮರುದಿನ ಬೆಳಿಗ್ಗೆ 5ರಿಂದ ಮತ್ತೆ ಅದೇ ಚಕ್ರ.

ಇದಿಷ್ಟೇ ನೋಡಮ್ಮ ನನ್ನ ಜೀವನ.
***
ನಮಗೆ ಬೇಕಾದ್ದು ಅವರು ಕೊಡಲಿಲ್ಲ

ಒಂದೇ ಕೈಲಿ ಗುಡಿಸಿದರೆ ಕೆಲಸ ಬೇಗ ಅಗಲ್ಲ. ಅದಕ್ಕೇ ಎರಡೂ ಕೈಗಳಲ್ಲಿ ಕಸ ಗುಡಿಸ್ತೀನಿ. ‘ಸರ್ಕಾರ ನಿಮಗೆ ಗ್ಲೌಸು, ಮುಖಗವಸು, ರಬ್ಬರ್ ಬೂಟು ಕೊಟ್ಟಿಲ್ವಾ’ ಅಂತ ನೀವು ಕೇಳಬಹುದು.

ಅವರು ಕೊಡ್ತಾರೋ ಇಲ್ವೋ ನನಗೆ ಗೊತ್ತಿಲ್ಲ. ನಮ್ಮಲ್ಲಿ ಬಹುತೇಕರಿಗೆ ಸಿಗಲ್ಲ. ನನಗೆ ಒಮ್ಮೆ ಸಿಕ್ಕಿತ್ತು, ಇಷ್ಟವಾಗಲಿಲ್ಲ. ಅಷ್ಟು ದಪ್ಪನೆ ಪ್ಲಾಸ್ಟಿಕ್‌ನ ಗ್ಲೌಸ್ ಹಾಕ್ಕೊಂಡ್ರೆ ಕೈ ಬೆರಳು ಆಡಿಸೋಕಾದ್ರೂ ಆಗುತ್ತಾ? ಸೆಖೆ ಕಿತ್ತುಕೊಂಡು ಕೈಯೆಲ್ಲಾ ನೀರುನೀರಾಯ್ತದೆ. ಕಸ ಹೇಗೆ ಗುಡಿಸೋದು? ಮಣಭಾರದ ರಬ್ಬರ್ ಬೂಟು ಹಾಕ್ಕೊಂಡ್ರೆ, ಕಾಲು ಎತ್ತಿಡೋಕೂ ಆಗಲ್ಲ. ಇನ್ನು ನಡೆಯೋದು ಹೇಗೆ? ಅದಕ್ಕೆ ಅದ್ಯಾವುದರ ಸಹವಾಸವೇ ಬೇಡ ಅಂತ ಬರೀ ಕೈಲಿ ಕಸ ಗುಡಿಸ್ತೀನಿ.

***
ಜನವರಿಯಿಂದ ಸಂಬಳವೇ ಆಗಿಲ್ಲ
ನಿಮಗೆ ಗೊತ್ತಾ, ಹೆರಿಗೆ ನೋವು ಬರುವ ತನಕ ನಾನು ಕಸ ಗುಡಿಸಿದ್ದೀನಿ, ಕಸ ಬಾಚಿದ್ದೀನಿ. ಹೆರಿಗೆ ನೋವು ಆಗ ತಾನೇ ಶುರುವಾಗಿತ್ತು. ಕೆಲಸ ಅರ್ಧ ಮುಗಿದಿತ್ತು. ಹೇಗಪ್ಪಾ ಕೇಳೋದು ಅಂತ ಸುಮ್ಮನಿದ್ದೆ. ಆದರೆ, ನಮ್ಮ ಮೇಸ್ತ್ರಿ ನಾಗರಾಜು ಅಣ್ಣ ನನ್ನ ನೋವು ಅರ್ಥ ಮಾಡಿಕೊಂಡು ‘ನೀನು ಹೋಗಮ್ಮ, ಪರವಾಗಿಲ್ಲ’ ಅಂತ ಕಳುಹಿಸಿಕೊಟ್ಟರು. ನಮಗೆ ಹೆರಿಗೆ ರಜಾ ಇಲ್ಲ. ವಾರದ ರಜೆಯೂ ಇಲ್ಲ. ಇತ್ತೀಚೆಗೆ ಸರ್ಕಾರದವರು ವಾರಕ್ಕೊಂದು ದಿನ ರಜೆ ಕೊಡಬೇಕು ಅಂತ ಮಾಡಿದ್ದಾರಂತೆ. ಅದು ಜಾರಿ ಆಗುತ್ತೋ ಇಲ್ವೋ ಗೊತ್ತಿಲ್ಲ. ಇನ್ಮೇಲೆ ಬಿಬಿಎಂಪಿಯಿಂದ ಸಂಬಳ ಆಗುತ್ತೆ  ಅಂತಾನೂ ಹೇಳಿದ್ದಾರೆ. ಜನವರಿಯಿಂದ ನಮಗೆ ಸಂಬಳವೇ ಆಗಿಲ್ಲ. ಅವರಿವರ ಹತ್ತಿರ ಸಾಲ ಪಡೆದು ಸಂಸಾರ ನಡೀಸ್ತಾ ಇದ್ದೀನಿ.
**
ನಾನು ಬಾಚುವ ಕಸದಲ್ಲಿ ಪುಟ್ಟ ಮಗುವಿನ ಡೈಪರ್ ನೋಡಿದ ತಕ್ಷಣ ನಾನು ಮನೆಯಲ್ಲಿ ಬಿಟ್ಟು ಬಂದಿರುವ ಒಂದೂವರೆ ತಿಂಗಳ ಮಗು ನೆನಪಾಗುತ್ತೆ. ಕಣ್ಣಲ್ಲಿ ನೀರು ಬರುತ್ತೆ. ಎದೆಯಲ್ಲಿ ಹಾಲು ಉಕ್ಕುತ್ತೆ. ಆದರೆ, ಎದೆಹಾಲು ಸೋರದಂತೆ ಬಿಗಿಯಾಗಿ ಬಟ್ಟೆ ಕಟ್ಟಿಕೊಂಡೇ ಕೆಲಸಕ್ಕೆ ಬಂದಿರ್ತೀನಿ. ಮನಸಿಗೆ ಸಮಾಧಾನ ಮಾಡಿಕೊಂಡು ಆ ಡೈಪರ್ ವಿಂಗಡಿಸ್ತೀನಿ.
– ಸುಶೀಲಾ, ಪೌರ ಕಾರ್ಮಿಕ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT