ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿದ ಭರವಸೆಯ ಬೆಳಕು

Last Updated 21 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯನ್‌ ಕ್ರೀಡಾಕೂಟ ಸೇರಿದಂತೆ ಪ್ರಮುಖ ಕ್ರೀಡಾ ಹಬ್ಬಗಳೆಲ್ಲ ಮುಗಿದಿವೆ. ಈಗ ಕ್ರೀಡಾ ಜಗತ್ತಿನ ಚಿತ್ತ ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನತ್ತ ನೆಟ್ಟಿದೆ. ವಿಶೇಷ ತರಬೇತಿ, ಅಭ್ಯಾಸ, ಆಯ್ಕೆ ಪ್ರಕ್ರಿಯೆಗಳಿಗೆ ವಿಶ್ವದ ಕ್ರೀಡಾಶಕ್ತಿ ಎನಿಸಿಕೊಂಡಿರುವ ರಾಷ್ಟ್ರಗಳಲ್ಲಿ ಆಗಲೇ ಚಾಲನೆ ಲಭಿಸಿದೆ.

ಇದೇ ಸಂದರ್ಭದಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಕಂಡುಬಂದ ಸಾಧನೆ ಕ್ರೀಡಾಜಗತ್ತಿನ ಭರವಸೆಯನ್ನು ಹೆಚ್ಚಿಸಿದೆ. ಭಾರತದ ಕ್ರೀಡಾಕ್ಷೇತ್ರಕ್ಕಂತೂ ಈ ಬಾರಿಯ ಯೂತ್ ಒಲಿಂಪಿಕ್ಸ್‌ ಮೆರುಗು ತುಂಬಿದೆ.

ಕಳೆದ ಎರಡು ಯೂತ್ ಒಲಿಂಪಿಕ್ಸ್‌ಗಳಲ್ಲಿ ಮಹತ್ವದ್ದೇನನ್ನೂ ಸಾಧಿಸಲು ಆಗದ ಭಾರತ ಈ ಬಾರಿ ಒಟ್ಟು 13 ಪದಕಗಳನ್ನು ಬಾಚಿದೆ. ಹೀಗಾಗಿ, ಯುವ ಪಡೆಯ ಸಾಧನೆ ಭರವಸೆಯ ಬೆಳಕಾಗಿ ಮೂಡಿದೆ.

ಯೂತ್‌ ಒಲಿಂಪಿಕ್ಸ್‌ಗೂ ಒಲಿಂಪಿಕ್ಸ್‌ಗೂ ನೇರ ಸಂಬಂಧವಿಲ್ಲ. ಇಲ್ಲಿನ ಸಾಧಕರೆಲ್ಲ ಒಲಿಂಪಿಕ್ಸ್ ಅಂಗಣದಲ್ಲಿ ಕಾಣಿಸಿಕೊಳ್ಳುವವರೂ ಅಲ್ಲ. 2014ರ ಯೂತ್ ಒಲಿಂಪಿಕ್ಸ್‌ನಲ್ಲಿ ಒಂದು ಬೆಳ್ಳಿ ಮತ್ತು ಒಂದು ಕಂಚು ಗಳಿಸಿಕೊಟ್ಟ ಕ್ರೀಡಾಪಟುಗಳು 2016ರ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದಿದ್ದ ವೆಂಕಟರಾಹುಲ್ ರಾಗಲಾ ಈ ವರ್ಷದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಬಾಕ್ಸಿಂಗ್‌ನಲ್ಲಿ ಮಿಂಚಿದ್ದ ಗೌರವ್ ಸೋಲಂಕಿ ಕೂಡ ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು.

ಆರ್ಚರಿಯಲ್ಲಿ ಹೇಮಲತಾ, ಅಥ್ಲೆಟಿಕ್ಸ್‌ನಲ್ಲಿ ಅಜಯ್‌ ಕುಮಾರ್‌ ಸರೋಜ್‌, ಕೆ.ಟಿ.ನೀನಾ, ಪುಷ್ಪಾ ಜಾಕರ್‌, ಬ್ಯಾಡ್ಮಿಂಟನ್‌ನಲ್ಲಿ ಆದಿತ್ಯ ಜೋಶಿ, ಋತ್ವಿಕಾ ಶಿವಾನಿ ಮುಂತಾದವರು ಹೆಸರು ಮಾಡಿದ್ದರು. ಆದರೆ ನಂತರ ಹೆಚ್ಚೇನೂ ಕಾಣಿಸಿಕೊಳ್ಳಲಿಲ್ಲ. ಆದರೆ ಈ ಬಾರಿಯ ಸಾಧಕರ ಪೈಕಿ ಕೆಲವರಾದರೂ ‘ಒಲಿಂಪಿಕ್ಸ್‌ ಗ್ರಾಮ’ದಲ್ಲಿ ಕಾಲೂರುವುದು ಖಚಿತ ಎಂಬ ನಿರೀಕ್ಷೆ ಮೂಡಿದೆ.

ಶೂಟಿಂಗ್‌, ವೇಟ್‌ಲಿಫ್ಟಿಂಗ್‌ ಮತ್ತು ಆರ್ಚರಿಯಲ್ಲಿ ಭಾರತದ ಕ್ರೀಡಾಪಟುಗಳು ಇತ್ತೀಚೆಗೆ ವಿಶ್ವದ ಗಮನ ಸೆಳೆಯುವ ಸಾಧನೆ ಮಾಡುತ್ತಿದ್ದಾರೆ. ಯೂತ್ ಒಲಿಂಪಿಕ್ಸ್‌ನಲ್ಲೂ ಇದು ಮುಂದುವರಿದಿತ್ತು. ಆದ್ದರಿಂದ ಒಲಿಂಪಿಕ್ಸ್‌ಈ ವಿಭಾಗಗಳಲ್ಲಿ ಪದಕಗಳ ಭರವಸೆಗೆ ಮತ್ತಷ್ಟು ಪುಷ್ಠಿ ಲಭಿಸಿದೆ.

ಚಿನ್ನ ‘ಎತ್ತಿದ’ ಜೆರೆಮಿ
ಯೂತ್ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಸದ್ದು ಮಾಡಿ ದವರು ಜೆರೆಮಿ ಲಾಲ್‌ರಿನ್ನುಂಗ. 62 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಮಿಜೋರಾಂನ ಈ ಬಾಲಕ ಇತಿಹಾಸವನ್ನೇ ನಿರ್ಮಿಸಿದರು. 124 ಕೆಜಿ ಸ್ನ್ಯಾಚ್‌ ಒಳಗೊಂಡಂತೆ ಒಟ್ಟು 274 ಕೆಜಿ ಭಾರ ಎತ್ತಿದ ಅವರು ಸೀನಿಯರ್‌ ವಿಭಾಗದ ರಾಷ್ಟ್ರೀಯ ದಾಖಲೆಗಿಂತ (ದೀಪಕ್ ಲಾಢರ್‌, 2015) ಕೇವಲ ಒಂದು ಕೆ.ಜಿ ಹಿಂದೆ ಉಳಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಟ್‌ಲಿ ಫ್ಟಿಂಗ್‌ನಲ್ಲಿ ಚಿನ್ನದ ಬೇಟೆಯಾಡಿ ಒಲಿಂಪಿಕ್ಸ್‌ನತ್ತ ದೃಷ್ಟಿ ನೆಟ್ಟಿರುವವರ ಸಾಲಿಗೆ ಜೆರೆಮಿಯೂ ಸೇರ್ಪಡೆಯಾದರು. ವಿಶ್ವಕಪ್‌ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಶೂಟರ್ ಮನು ಭಾಕರ್‌ ಯೂತ್‌ ಒಲಿಂಪಿಕ್ಸ್‌ನಲ್ಲೂ (10 ಮೀಟರ್ ಏರ್‌ ಪಿಸ್ತೂಲು) ಚಿನ್ನ ಗಳಿಸಿ ಸಂಭ್ರಮಿಸಿದರು. ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಅವರು ಬ್ಯೂನಸ್ ಐರಿಸ್‌ನಲ್ಲಿ ಮಾಡಿದ ಸಾಧನೆ ಒಲಿಂಪಿಕ್ಸ್‌ ಕಡೆಗೆ ನೋಟ ಹರಿಸಲು ನೆರವಾಗಿದೆ.

ಈ ಬಾರಿ ಏಷ್ಯನ್‌ ಕ್ರೀಡಾಕೂಟಕ್ಕೆ ಪದಾರ್ಪಣೆ ಮಾಡಿದ್ದ ಸೌರಭ್‌ ಚೌಧರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಯೂತ್ ಒಲಿಂಪಿಕ್ಸ್‌ನಲ್ಲೂ (10 ಮೀಟರ್ಸ್ ಏರ್‌ ಪಿಸ್ತೂಲು) ಚಿನ್ನ ಗೆದ್ದರು. 16 ವರ್ಷದ ಚೌಧರಿ ಏಷ್ಯನ್ ಕೂಟದಲ್ಲಿ ಪದಕ ಗೆದ್ದಾಗಲೇ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದರು. 10 ಮೀಟರ್ಸ್ ಏರ್ ರೈಫಲ್‌ನಲ್ಲಿ ಬೆಳ್ಳಿ ಗೆದ್ದ ತುಷಾರ್ ಶಾಹು ಮಾನೆ ಮತ್ತು ಮೆಹುಲಿ ಘೋಷ್‌ ಕೂಡ ‘ಒಲಿಂಪಿಕ್ಸ್‌ಗೆ ನಾವು ಸಿದ್ಧ’ ಎಂಬುದನ್ನು ಸಾಬೀತು ಮಾಡಿದರು.

ಯುವ ‘ಸೇನೆ’ಗೆ ಪದಕದ ‘ಲಕ್ಷ್ಯ’
ಭಾರತದ ಪ್ರಮುಖ ಬ್ಯಾಡ್ಮಿಂಟನ್ ತಾರೆಗಳು ಇತ್ತೀಚೆಗೆ ಸತತ ವೈಫಲ್ಯ ಕಾಣುತ್ತಿದ್ದಾರೆ. ಈ ಸಂದರ್ಭದಲ್ಲಿ ಉದಯಿಸಿದ್ದಾರೆ, ಲಕ್ಷ್ಯ ಸೇನ್ ಎಂಬ ಕುಡಿ ಮೀಸೆಯ ಆಟಗಾರ. ವಿಶ್ವ ರ‍್ಯಾಂಕಿಂಗ್‌ನ ಜೂನಿಯರ್ ವಿಭಾಗದಲ್ಲಿ ಈ ಹಿಂದೆ ಮೊದಲ ಸ್ಥಾನ ಗಳಿಸಿದ್ದ ಲಕ್ಷ್ಯ ಸೇನ್ ಅವರನ್ನು ಭವಿಷ್ಯದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ಆಟಗಾರ ಎಂದೇ ಬಿಂಬಿಸಲಾಗುತ್ತಿದೆ. ಯೂತ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿ ಬೆಳ್ಳಿ ಗೆಲ್ಲುವುದರ ಮೂಲಕ ಅವರು ತಮ್ಮ ಛಾಪನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಜೂಡೊದಲ್ಲೂ ಭಾರತ ಗಮನ ಸೆಳೆದಿದೆ. ಮಣಿಪುರದ ತಬಾಬಿ ದೇವಿ ತಂಗ್ಜಮ್‌ 44 ಕೆಜಿ ವಿಭಾಗದಲ್ಲಿ ಬೆಳ್ಳಿ ಮಿಂಚು ಮೂಡಿಸಿದ್ದಾರೆ. ಮಹಿಳೆಯರ 43 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಬೆಳ್ಳಿ ಗಳಿಸಿದ ಸಿಮ್ರಾನ್‌, 5000 ಮೀಟರ್ಸ್ ನಡಿಗೆಯಲ್ಲಿ ಬೆಳ್ಳಿ ಗೆದ್ದ ಸೂರಜ್ ಪನ್ವಾರ್, ಪುರುಷರ ಟ್ರಿಪಲ್ ಜಂಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಪ್ರವೀಣ್ ಚಿತ್ರವೇಲು, ಪುರುಷರ ಆರ್ಚರಿ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಆಕಾಶ್‌ ಮಲಿಕ್ ಮುಂತಾದವರಲ್ಲೂ ಒಲಿಂಪಿಕ್ಸ್ ಪೋಡಿಯಂನ ಕನಸು ಗರಿಗೆದರಿರುವ ಸಾಧ್ಯತೆ ಇದೆ.


ಇವರ ಮೇಲೆಯೂ ಇದೆ ನಿರೀಕ್ಷೆ
ಯೂತ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಾಗದಿದ್ದರೂ ಉತ್ತಮ ಸಾಧನೆ ಮಾಡಿ ದವರು ಇದ್ದಾರೆ. ಒಲಿಂಪಿ ಕ್ಸ್‌ಗೆ ಆಯ್ಕೆ ಮಾಡುವ ಸಂದ ರ್ಭದಲ್ಲಿ ಅವರ ಮೇಲೆಯೂ ಕಣ್ಣಿಡುವ ಸಾಧ್ಯತೆಗಳು ಇವೆ. ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಐದನೇ ಸ್ಥಾನ ಗಳಿಸಿದ ಸ್ನೇಹಾ ಸೊರೇನ್‌, ಪುರುಷರ ಈಜಿನ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಆರನೇ ಸ್ಥಾನ ಗಳಿಸಿದ ಶ್ರೀಹರಿ ನಟರಾಜ್‌, ಮಹಿಳೆಯರ ಟೇಬಲ್ ಟೆನಿಸ್‌ನಲ್ಲಿ ಸ್ವಲ್ಪದರಲ್ಲೇ ಕಂಚಿನ ಪದಕ ಕಳೆದುಕೊಂಡ ಅರ್ಚನಾ ಕಾಮತ್‌, ಮಹಿಳೆಯರ ಕ್ರಾಸ್‌ಕಂಟ್ರಿ ಓಟದಲ್ಲಿ ಒಟ್ಟು 57 ಮಂದಿಯಲ್ಲಿ 32ನೆಯವರಾಗಿ ಹೊರಹೊಮ್ಮಿದ ಸೀಮಾ, ಮಹಿಳೆಯರ 400 ಮೀಟರ್ಸ್ ಹರ್ಡಲ್ಸ್‌ನ ಹೀಟ್ಸ್‌ನಲ್ಲಿ ನಾಲ್ಕನೆಯವರಾದ ಜಯಪ್ರಕಾಶನ್‌ ವಿಷ್ಣು ಪ್ರಿಯಾ, ಪುರುಷರ 200 ಮೀಟರ್ಸ್ ಓಟದಲ್ಲಿ ಮಿಂಚಿದ ನಿಸಾರ್ ಅಹಮ್ಮದ್‌, ಜಾವೆಲಿನ್ ಥ್ರೋದಲ್ಲಿ ಗಮನ ಸೆಳೆದ ಕನ್ವರ್‌ರಾಜ್ ಸಿಂಗ್ ರಾಣಾ ಈ ಪಟ್ಟಿಯಲ್ಲಿರುವ ಪ್ರಮುಖರು.

ಯೂತ್ ಒಲಿಂಪಿಕ್ಸ್‌ ಕುರಿತು...
ಯೂತ್‌ ಒಲಿಂಪಿಕ್ಸ್ ಆಯೋಜಿಸುವ ಚಿಂತನೆ ಮೊತ್ತಮೊದಲು ಮೂಡಿದ್ದು ಆಸ್ಟ್ರಿಯಾದ ಜೊಹಾನ್‌ ರೋಜನ್‌ಸೋಫ್‌ ಎಂಬುವರಿಗೆ. 1998ರಲ್ಲಿ ಅವರು ಮುಂದಿಟ್ಟ ಪ್ರಸ್ತಾವಕ್ಕೆ 2007ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಒಪ್ಪಿಗೆ ನೀಡಿತು. ಕೂಟಕ್ಕೆ ತಗಲುವ ವೆಚ್ಚದ ಅರ್ಧದಷ್ಟನ್ನು ಐಒಸಿ ಮತ್ತು ಉಳಿದ ಅರ್ಧವನ್ನು ಆತಿಥೇಯ ರಾಷ್ಟ್ರ ಅಥವಾ ನಗರ ಭರಿಸಬೇಕೆಂಬ ಷರತ್ತಿಗೆ ಗ್ವಾಟೆಮಾಲಾದಲ್ಲಿ ಸೇರಿದ ಐಒಸಿ ಸಭೆಯಲ್ಲಿ ಅನುಮೋದನೆ ಲಭಿಸಿತು.

ಪ್ರತಿ ಬಾರಿ ಒಲಿಂಪಿಕ್ಸ್ ಮತ್ತು ಚಳಿಗಾಲದ ಒಲಿಂಪಿಕ್ಸ್‌ಗೆ ಎರಡು ವರ್ಷಗಳಿರುವಾಗ ಯೂತ್ ಒಲಿಂಪಿಕ್ಸ್ ನಡೆಯುತ್ತದೆ. 14ರಿಂದ 18 ವರ್ಷ ವಯೋಮಿತಿಯವರು ಯೂತ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಮೊದಲ ಯೂತ್ ಒಲಿಂಪಿಕ್ಸ್‌ 2010ರಲ್ಲಿ ಸಿಂಗಪುರದಲ್ಲಿ, ಮೊದಲ ಚಳಿಗಾಲದ ಯೂತ್ ಒಲಿಂಪಿಕ್ಸ್‌ 2012ರಲ್ಲಿ, ಆಸ್ಟ್ರಿಯಾದಲ್ಲಿ ನಡೆಯಿತು.

ಯೂತ್ ಒಲಿಂಪಿಕ್ಸ್‌ನಲ್ಲಿದ್ದ ಕ್ರೀಡೆಗಳು
ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌, ಬೀಚ್‌ ವಾಲಿಬಾಲ್‌, ಬಾಕ್ಸಿಂಗ್‌, ಕನೋಯಿಂಗ್‌, ಸೈಕ್ಲಿಂಗ್‌, ಡೈವಿಂಗ್‌, ಈಕ್ವೆಸ್ಟ್ರಿಯನ್, ಫೆನ್ಸಿಂಗ್‌, ಹಾಕಿ, ಫುಟ್‌ಬಾಲ್‌, ಗಾಲ್ಫ್‌, ಜಿಮ್ನಾಸ್ಟಿಕ್ಸ್‌, ಹ್ಯಾಂಡ್‌ಬಾಲ್‌, ಜೂಡೊ, ಮಾಡರ್ನ್‌ ಪೆಂಟಾಥ್ಲಾನ್‌, ರೋಯಿಂಗ್‌, ರಗ್ಬಿ, ಸೈಲಿಂಗ್‌, ಶೂಟಿಂಗ್‌, ಈಜು, ಟೇಬಲ್ ಟೆನಿಸ್‌, ಟೇಕ್ವಾಂಡೊ, ಟೆನಿಸ್, ಟ್ರಯಥ್ಲಾನ್‌, ವಾಲಿಬಾಲ್‌, ವೇಟ್‌ಲಿಫ್ಟಿಂಗ್‌, ಕುಸ್ತಿ.

ಚಳಿಗಾಲದ ಯೂತ್ ಒಲಿಂಪಿಕ್ಸ್‌ನ ಕ್ರೀಡೆಗಳು
ಸ್ಕೀಯಿಂಗ್‌, ಬಯಥ್ಲಾನ್‌, ಬಾಬ್ಸ್‌ಲೀಗ್‌, ಕ್ರಾಸ್ ಕಂಟ್ರಿ, ಕರ್ಲಿಂಗ್‌,ಫಿಗರ್ ಸ್ಕೇಟಿಂಗ್‌, ಫ್ರೀಸ್ಟೈಲ್ ಸ್ಕೀಯಿಂಗ್‌, ಐಸ್ ಹಾಕಿ, ಲೂಜ್‌, ನಾರ್ಡಿಕ್‌, ಸ್ಕೇಟಿಂಗ್‌, ಸ್ಕೈ ಜಂಪಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT