ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂತ್‌ ಒಲಿಂಪಿಕ್ಸ್‌ನ ಆರ್ಚರಿ: ಆಕಾಶ್‌ ಚಾರಿತ್ರಿಕ ಸಾಧನೆ

ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು
Last Updated 19 ಅಕ್ಟೋಬರ್ 2018, 18:38 IST
ಅಕ್ಷರ ಗಾತ್ರ

ಬ್ಯೂನಸ್‌ ಐರಿಸ್‌: ಅಮೋಘ ಸಾಮರ್ಥ್ಯ ತೋರಿದ ಆಕಾಶ್‌ ಮಲಿಕ್‌, ಯೂತ್‌ ಒಲಿಂಪಿಕ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಆರ್ಚರಿಪಟು ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. 2014ರಲ್ಲಿ ನಾನ್‌ಜಿಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಅತುಲ್‌ ವರ್ಮಾ ಕಂಚು ಗೆದ್ದಿದ್ದು ಇದುವರೆಗಿನ ಉತ್ತಮ ಸಾಧನೆ ಎನಿಸಿತ್ತು.

ಬುಧವಾರ ರಾತ್ರಿ ನಡೆದ ಫೈನಲ್‌ನಲ್ಲಿ 15 ವರ್ಷ ವಯಸ್ಸಿನ ಆಕಾಶ್‌ 0–6ರಲ್ಲಿ ಅಮೆರಿಕದ ಟ್ರೆಂಟನ್‌ ಕಾವಲೆಸ್‌ ವಿರುದ್ಧ ಪರಾಭವಗೊಂಡರು.ಅರ್ಹತಾ ಸುತ್ತಿನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಆಕಾಶ್‌, ಫೈನಲ್‌ನಲ್ಲಿ ನಿಖರ ಗುರಿ ಹಿಡಿಯಲು ವಿಫಲರಾದರು.

ಮೂರು ಸೆಟ್‌ಗಳ ಫೈನಲ್‌ ಹಣಾಹಣಿಯಲ್ಲಿ ಉಭಯ ಆಟಗಾರರು ತಲಾ ನಾಲ್ಕು ಬಾರಿ ‘ಪರ್ಫೆಕ್ಟ್‌ 10’ಗೆ ಗುರಿ ಇಟ್ಟರು. ಮೊದಲ ಸೆಟ್‌ನ ಮೊದಲ ಅವಕಾಶದಲ್ಲಿ 10 ಪಾಯಿಂಟ್ಸ್‌ ಸಂಗ್ರಹಿಸಿದ ಆಕಾಶ್‌ ನಂತರದ ಪ್ರಯತ್ನದಲ್ಲಿ ಆರು ಪಾಯಿಂಟ್ಸ್‌ ಸಂಗ್ರಹಿಸಲಷ್ಟೇ ಶಕ್ತರಾದರು. ಮೂರನೇ ಅವಕಾಶದಲ್ಲಿ ಮತ್ತೆ 10 ಪಾಯಿಂಟ್ಸ್‌ ಸಂಗ್ರಹಿಸಿದರು. ಕಾವಲೆಸ್‌, ಕ್ರಮವಾಗಿ 10, 9, 9 ಪಾಯಿಂಟ್ಸ್‌ ಗಳಿಸಿ 28–26ರಿಂದ ಮುನ್ನಡೆ ಪಡೆದರು.

ಎರಡನೇ ಸೆಟ್‌ನಲ್ಲೂ ಪಾರಮ್ಯ ಮೆರೆದ ಕಾವಲೆಸ್‌ 29–27ರ ಮುನ್ನಡೆ ತಮ್ಮದಾಗಿಸಿಕೊಂಡರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಆಕಾಶ್‌ ಮೂರನೇ ಸೆಟ್‌ನ ಮೊದಲ ಅವಕಾಶದಲ್ಲಿ ಗುರಿ ತಪ್ಪಿದ ಅವರು ಆರು ಪಾಯಿಂಟ್ಸ್‌ ಕಲೆಹಾಕಲಷ್ಟೇ ಶಕ್ತರಾದರು. ಹೀಗಾಗಿ ಚಿನ್ನದ ಪದಕದ ಕನಸು ಕಮರಿತು. 28–26ರಿಂದ ಸೆಟ್‌ ಗೆದ್ದ ಕಾವಲೆಸ್‌ ಸಂಭ್ರಮಿಸಿದರು.

ಕೃಷಿಕ ಕುಟುಂಬ: ಕೃಷಿಕ ಕುಟುಂಬದಲ್ಲಿ ಜನಿಸಿದ ಆಕಾಶ್‌, ಆರನೇ ವಯಸ್ಸಿನಲ್ಲಿ ಆರ್ಚರಿ ಕಲಿಯಲು ಶುರು ಮಾಡಿದ್ದರು. ಟ್ರಯಲ್ಸ್‌ವೊಂದರ ವೇಳೆ ಆಕಾಶ್‌ ಪ್ರತಿಭೆ ಗುರುತಿಸಿದ್ದ ಮಂಜೀತ್ ಮಲಿಕ್‌, ಅದಕ್ಕೆ ಸಾಣೆ ಹಿಡಿಯುವ ಕೆಲಸ ಮಾಡಿದ್ದರು.

ಮಂಜೀತ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಆಕಾಶ್‌ 2014ರಲ್ಲಿ ವಿಜಯವಾಡದಲ್ಲಿ ನಡೆದಿದ್ದ 14 ವರ್ಷದೊಳಗಿನವರ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ನ ರಿಕರ್ವ್‌ ತಂಡ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಹೋದ ವರ್ಷ ನಡೆದಿದ್ದ ಯೂತ್‌ ಒಲಿಂಪಿಕ್ಸ್‌ನ ಅರ್ಹತಾ ಕೂಟದಲ್ಲೂ ಚಿನ್ನದ ಪದಕ ಜಯಿಸಿದ್ದರು. ಜೊತೆಗೆ ಏಷ್ಯಾ ಕಪ್‌ ಸ್ಟೇಜ್‌–1ನಲ್ಲಿ ಚಿನ್ನ, ಏಷ್ಯಾಕಪ್‌ ಸ್ಟೇಜ್–2ನಲ್ಲಿ ಎರಡು ಕಂಚು ಮತ್ತು ದಕ್ಷಿಣ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.

ಒಲಿಂಪಿಕ್ಸ್‌ ಗೋಲ್ಡ್‌ ಕ್ವೆಸ್ಟ್‌ಗೆ (ಒಜಿಕ್ಯೂ) ಆಯ್ಕೆಯಾಗಿರುವ ಆಕಾಶ್‌, ಪುಣೆಯ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್‌ ಹಾಗ್ಯೊಂಗ್‌ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

‘ನಾನು ಚೆನ್ನಾಗಿ ಓದಿ ಸರ್ಕಾರಿ ನೌಕರಿಗೆ ಸೇರಬೇಕೆಂಬ ಆಸೆ ಅಪ್ಪ ಅಮ್ಮನಿಗಿತ್ತು. ಎಳೆಯ ವಯಸ್ಸಿನಿಂದಲೇ ಆರ್ಚರಿಯಲ್ಲಿ ಆಸಕ್ತಿ ಮೂಡಿದ್ದರಿಂದ ಇದರಲ್ಲೇ ಎತ್ತರದ ಸಾಧನೆ ಮಾಡಲು ನಿರ್ಧರಿಸಿದೆ. ಆರಂಭದಲ್ಲಿ ಪೋಷಕರು ವಿರೋಧಿಸಿದ್ದರು. ಟೂರ್ನಿಗಳಲ್ಲಿ ಪದಕ ಗೆಲ್ಲಲು ಶುರುಮಾಡಿದ ಮೇಲೆ ಬೆಂಬಲ ನೀಡಿದರು’ ಎಂದು 11ನೇ ತರಗತಿಯ ವಿದ್ಯಾರ್ಥಿ ಆಕಾಶ್‌ ತಿಳಿಸಿದ್ದಾರೆ.

ಕೂಟದಲ್ಲಿ ಭಾರತ ಮೂರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ಅಭಿಯಾನ ಮುಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT