ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂತ್‌ ಒಲಿಂಪಿಕ್ಸ್‌: ಬೆಳ್ಳಿಯ ಪದಕ ಗೆದ್ದ ಮಹಿಳಾ ಮತ್ತು ಪುರುಷರ ತಂಡ

ಭಾರತದ ತಂಡಗಳ ಐತಿಹಾಸಿಕ ಸಾಧನೆ
Last Updated 15 ಅಕ್ಟೋಬರ್ 2018, 19:06 IST
ಅಕ್ಷರ ಗಾತ್ರ

ಬ್ಯೂನಸ್‌ ಐರಿಸ್‌: ಭಾರತದ ಪುರುಷರ ಮತ್ತು ಮಹಿಳೆಯರ 5 ಎ ಸೈಡ್‌ ಹಾಕಿ ತಂಡದವರು ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಗಳನ್ನು ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಭಾರತ 2–4 ಗೋಲುಗಳಿಂದ ಮಲೇಷ್ಯಾ ಎದುರು ಸೋತಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಭಾರತ ಎರಡನೇ ನಿಮಿಷದಲ್ಲಿ ಖಾತೆ ತೆರೆಯಿತು. ನಾಯಕ ವಿವೇಕ್‌ ಸಾಗರ್‌ ಪ್ರಸಾದ್‌ ಚೆಂಡನ್ನು ಗುರಿ ಮುಟ್ಟಿಸಿದರು.

ನಾಲ್ಕನೇ ನಿಮಿಷದಲ್ಲಿ ಮಲೇಷ್ಯಾ ತಂಡದ ಫಿರಾದಸ್‌ ರೋಸ್ದಿ ಗೋಲು ದಾಖಲಿಸಿ 1–1ರ ಸಮಬಲಕ್ಕೆ ಕಾರಣರಾದರು. ಐದನೇ ನಿಮಿಷದಲ್ಲಿ ವಿವೇಕ್‌ ಮತ್ತೊಮ್ಮೆ ಕೈಚಳಕ ತೋರಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಚುರುಕಾಗಿ ಗುರಿ ತಲುಪಿಸಿದರು.

2–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಭಾರತ ತಂಡ ದ್ವಿಯಾರ್ಧದಲ್ಲಿ ಮಂಕಾಯಿತು. 13ನೇ ನಿಮಿಷದಲ್ಲಿ ಅಖಿಮುಲ್ಲಾ ಅನೌರ್‌ ಗೋಲು ಬಾರಿಸಿ 2–2ರ ಸಮಬಲಕ್ಕೆ ಕಾರಣರಾದರು. 16ನೇ ನಿಮಿಷದಲ್ಲಿ ಅಮೀರುಲ್‌ ಅಜಹರ್‌ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಮಲೇಷ್ಯಾ 3–2ರ ಮುನ್ನಡೆ ಪಡೆಯಿತು. ಪಂದ್ಯ ಮುಗಿಯಲು ಎರಡು ನಿಮಿಷ ಬಾಕಿ ಇದ್ದಾಗ ವೈಯಕ್ತಿಕ ಎರಡನೇ ಗೋಲು ಬಾರಿಸಿದ ಅಖಿಮುಲ್ಲಾ, ಮಲೇಷ್ಯಾ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ಮಹಿಳೆಯರ ವಿಭಾಗದ ಚಿನ್ನದ ಪದಕದ ಪೈಪೋಟಿಯಲ್ಲಿ ಭಾರತ 1–3 ಗೋಲುಗಳಿಂದ ಅರ್ಜೆಂಟೀನಾ ಎದುರು ಪರಾಭವಗೊಂಡಿತು.

ಮೊದಲನೇ ನಿಮಿಷದಲ್ಲಿ ಮುಮ್ತಾಜ್‌ ಖಾನ್‌ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆರನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದ ಗಿಯಾನೆಲ್ಲಾ ಪಲೆಟ್‌ 1–1ರ ಸಮಬಲಕ್ಕೆ ಕಾರಣರಾದರು.

ಸೋಫಿಯಾ ರಾಮಲ್ಲೊ ಒಂಬತ್ತನೇ ನಿಮಿಷದಲ್ಲಿ ಗೋಲು ಬಾರಿಸಿದ್ದರಿಂದ ಅರ್ಜೆಂಟೀನಾ 2–1ರ ಮುನ್ನಡೆ ಪಡೆಯಿತು. ದ್ವಿತೀಯಾರ್ಧದ ಆರಂಭದಲ್ಲಿ ಕೈಚಳಕ ತೋರಿದ ಬ್ರಿಷಾ ಬ್ರಗೆಸರ್‌ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿ ಗೆಲುವಿನ ಹಾದಿ ಸುಗಮ ಮಾಡಿದರು.

ಪುರುಷರ ವಿಭಾಗದಲ್ಲಿ ಅರ್ಜೆಂಟೀನಾ ಮತ್ತು ಮಹಿಳಾ ವಿಭಾಗದಲ್ಲಿ ಚೀನಾ ತಂಡಗಳು ಕಂಚಿನ ಪದಕ ಜಯಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT