ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಲೂ ಸೈ, ಕುಣಿಯಲೂ ಸೈ ಬ್ರಹ್ಮಾವರ ಲಿಟ್ಲ್ ರಾಕ್ ಆಂಗ್ಲ ಮಾಧ್ಯಮ ಶಾಲೆಯ ಈ ಪೋರಿ

Last Updated 17 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಪುಟಾಣಿ ಮಕ್ಕಳಲ್ಲಿರುವ ಆಸಕ್ತಿ, ಹವ್ಯಾಸಗಳು ಗೋಚರಕ್ಕೆ ಬಂದಾಗ ಹೆತ್ತವರು ತಕ್ಷಣವೇ ಜಾಗೃತಗೊಂಡು ಅವರ ಅಭಿರುಚಿಯನ್ನು ಪ್ರೋತ್ಸಾಹಿಸಲು ಮುಂದಾಗಬೇಕು. ಹೀಗೆ ಮಾಡಿದಲ್ಲಿ ‌ಮಕ್ಕಳಲ್ಲಿ ಹುದುಗಿರುವ ಅಜ್ಞಾತ ಪ್ರತಿಭೆ ಅರಳಲು, ಬೆಳಕಿನಡೆಗೆ ಬರಲು, ಸಾಧನೆಯ ಪಥದಲ್ಲಿ ಸಾಗಲು ಸಾಧ್ಯವಿದೆ.

ಈ ಬಗೆಯ ಪ್ರತಿಭಾ ಪೋಷಣೆಯ ಪ್ರಜ್ಞೆಯನ್ನು ಉಡುಪಿ ಕಿದಿಯೂರಿನ ವಿನೋದಾ ಕೆ ಸಾಮಗ, ಕೃಷ್ಣಮೂರ್ತಿ ಸಾಮಗ ದಂಪತಿ ಹೊಂದಿದ್ದು, ಮಗಳು ತೊದಲು ನುಡಿ ಆಡುವ ಸಂದರ್ಭದಲ್ಲಿಯೇ ಅವಳಲ್ಲಿರುವ ಪ್ರತಿಭೆ ಗುರುತಿಸಿದರು. ಪ್ರೋತ್ಸಾಹ, ಉತ್ತೇಜನ ನೀಡಿ ಮಗಳನ್ನು ಬಹುಮುಖ ಪ್ರತಿಭಾವಂತಳಾಗಿ ಸಜ್ಜುಗೊಳಿಸಿದ್ದಾರೆ.

ಬ್ರಹ್ಮಾವರ ಲಿಟ್ಲ್ ರಾಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ತರಗತಿ ಕಲಿಯುತ್ತಿರುವ ಎಂಟು ವರ್ಷದ ಬಾಲಕಿ ಯುಕ್ತಾ ಸಾಮಗ ಕಲಿಕೆಯಲ್ಲೂ ಜಾಣೆ ಆಗಿದ್ದಾಳೆ. ಶಾಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ ಪಡೆದುಕೊಂಡಿದ್ದಾಳೆ. ಯುಕ್ತಾ ಸಾಮಗ ಎಳವೆಯಲ್ಲಿಯೇ ಹೆತ್ತವರ ಪ್ರೋತ್ಸಾಹದಿಂದ ಬಹುಮುಖ ಬಾಲ ಪ್ರತಿಭೆಯಾಗಿ ಮೂಡಿಬಂದು, ಹೆತ್ತವರ ತುಟಿ ಅಂಚಿನಲ್ಲಿ ಸಂತೋಷದ ನಗೆ ಮೂಡಿಸಿದ್ದಾಳೆ. ಅಲ್ಲದೇ ಸಾರ್ವಜನಿಕ ವಲಯದಲ್ಲಿಯೂ ಭೇಷ್‌ ಎಂದು ಬೆನ್ನು ತಟ್ಟಿಸಿ ಕೊಂಡಿದ್ದಾಳೆ.

ಪುಟಾಣಿ ಯುಕ್ತಾಳ ಸಾಧನೆ ಅನನ್ಯವಾದುದು. ಈಕೆ ಕ್ರೀಡೆ ಮಾತ್ರವಲ್ಲದೇ ಸಾಂಸ್ಕೃತಿಕ ಕಲಾ ಪ್ರಕಾರಗಳಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾಳೆ. ಈಜುತಜ್ಞ ಗಂಗಾಧರ್ ಜಿ. ಕಡೆಕಾರ್ ಅವರಲ್ಲಿ ಈಜು ತರಬೇತಿ ಪಡೆದುಕೊಂಡು, ಅನುಭವಿ ಈಜುಪಟು ಆಗಿದ್ದಾಳೆ. ಸಾಲಿಗ್ರಾಮ ಈಜುಕೊಳದವರು ಸಾಲಿಗ್ರಾಮ ಉಗ್ರ ನರಸಿಂಹ ದೇವಾಸ್ಥನದ ಪುಷ್ಕರಣಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುಕ್ತಾ, ಅಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಪಡೆದಿದ್ದಾಳೆ. ಅಲ್ಲದೆ ಕಡೆಕಾರು ಜಯದುರ್ಗ ಸ್ವಿಮ್ಮಿಂಗ್‌ ಕ್ಲಬ್‌ನವರು ಉಡುಪಿ ಕಡೆಕಾರಿನ ದೇವರ ಕೆರೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಈಜು ಕೂಟದಲ್ಲಿ 3 ಚಿನ್ನದ ಪದಕ, 1 ಕಂಚಿನ ಪದಕ ಪಡೆದು ಭರವಸೆಯ ಈಜುಗಾರ್ತಿ ಮೂಡಿಬಂದು ಈಜುವ ಕೌಶಲ ಕಲಿಸಿದ ಗುರುವಿಗೂ ಗೌರವ ತಂದಿದ್ದಾಳೆ.

ಭರತ ನಾಟ್ಯ ಕಲೆಯನ್ನು ಮೂರನೇ ವಯಸ್ಸಿನಿಂದಲೇ ಕಲಿಯಲು ಪ್ರಾರಂಭಿಸಿದ ಯುಕ್ತಾ, ಈಗ ವಿದುಷಿ ರಶ್ಮಿ ಗುರುರಾಜ್ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಇದುವರೆಗೆ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾಳೆ. ಆಟ, ನೃತ್ಯದ ಜತೆಗೆ ಯುಕ್ತಾ ಸುಶ್ರಾವ್ಯವಾಗಿ ಹಾಡಬಲ್ಲಳು ಕೂಡ. ಶಾಸ್ತ್ರೀಯ ಸಂಗೀತವನ್ನು ವಿದುಷಿ ವಿದ್ಯಾಲಕ್ಷೀ ಕಡಿಯಾಳಿ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಯಕ್ಷಗಾನ ಕಲೆಯ ಮೇಲಿರುವ ಪ್ರೀತಿಯಿಂದ ಬಡಗುತಿಟ್ಟಿನ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಯಕ್ಷಗುರು ಕೆ.ಜೆ. ಕೃಷ್ಣ ಆಚಾರ್ಯ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಯುಕ್ತಾ ತನ್ನ 1ನೇ ವರ್ಷದ ಪ್ರಾಯದಿಂದ 5 ವರ್ಷ ತುಂಬುವವರೆಗೆ ಪ್ರತಿ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ನಡೆಯುವ ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ, 5 ಬಾರಿಯೂ ಪ್ರಥಮ ಸ್ಥಾನವನ್ನು ಪಡೆದಿರುವುದನ್ನು ತಾಯಿ ವಿನೋದಾ ಕೆ. ಸಾಮಗ ಅವರು ನೆನಪಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT