ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಂಬಾ ನೃತ್ಯವೂ..ಫಿಟ್‌ನೆಸ್‌ ಮಂತ್ರವೂ..

zumba fitness
Last Updated 16 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಜಾಗತಿಕವಾಗಿ ಯೋಗದಷ್ಟೇ ಜನಪ್ರಿಯವಾಗುತ್ತಿರುವ ಫಿಟ್‌ನೆಸ್ ಟ್ರೆಂಡ್‌ಗಳಲ್ಲಿ ಜುಂಬಾ ಫಿಟ್‌ನೆಸ್‌ ಮುಂಚೂಣಿಯಲ್ಲಿದೆ. ಅಲೆಅಲೆಯಾಗಿ ತೇಲಿಬರುವ ಪಾಶ್ಚಿಮಾತ್ಯ ಸಂಗೀತಕ್ಕೆ ಎಂಥವರಿಗೂ ಹೆಜ್ಜೆ ಹಾಕುವ ಹುಮ್ಮಸ್ಸು. ಅರಿವಿಲ್ಲದೇ ವ್ಯಾಯಾಮ ಮಾಡುವ ನಾಜೂಕುತನ ಜುಂಬಾ ಫಿಟ್‌ನೆಸ್‌ದ್ದು.

ಏರೋಬಿಕ್ಸ್‌ನ ಮತ್ತೊಂದು ಪ್ರಕಾರದಂತೆ ಕಾಣುವ ಜುಂಬಾ ಫಿಟ್‌ನೆಸ್ ಕೊಲಂಬಿಯನ್ ಡಾನ್ಸರ್ ಆಲ್ಬರ್ಟೊ ಬೆಟೊ ಅವರ ಆವಿಷ್ಕಾರ. ಜುಂಬಾ ಹೆಸರಿನಲ್ಲಿ ಕಂಪೆನಿಯನ್ನು ಸ್ಥಾಪಿಸಿರುವ ಬೆಟೊ ಈಗ ಜಾಗತಿಕ ಮಟ್ಟದ ಜುಂಬೊ ಮಾಸ್ಟರ್ ಟ್ರೈನರ್. ಬೆಟೊ ಭಾರತಕ್ಕೆ ಬಂದಾಗ ಅವರಿಂದ ಜುಂಬಾ ಕಲಿತಿರುವ ಬೆಂಗಳೂರಿನ ಜುಂಬಾ ಇನ್‌ಸ್ಟ್ರಕ್ಟರ್ ನಮ್ರತಾ ವರ್ಮಾ ‘ನುರಿತ ತರಬೇತುದಾರರಿಂದ ಜುಂಬಾ ಕಲಿಯುವುದು ಉತ್ತಮ. ಯಾವುದೇ ಕಾರಣಕ್ಕೂ ಯುಟ್ಯೂಬ್ ಮೊರೆ ಹೋಗದಿರಿ’ ಎನ್ನುವ ಸಲಹೆ ನೀಡುತ್ತಾರೆ.

‘ದೇಹವನ್ನು ಹುರಿಗೊಳಿಸಿ, ಇಷ್ಟದ ಆಕಾರಕ್ಕೆ ಒಗ್ಗಿಸಬೇಕೆನ್ನುವವರಿಗೆ ಜುಂಬಾ ಟೋನಿಂಗ್, ಹೃದಯ ಆರೋಗ್ಯ ಸೇರಿದಂತೆ ಒಟ್ಟಾರೆ ದೇಹದ ಆರೋಗ್ಯಕ್ಕಾಗಿ ಜುಂಬಾ ಫಿಟ್‌ನೆಸ್, 50 ವರ್ಷ ದಾಟಿದವರಿಗೆ ಜುಂಬಾ ಗೋಲ್ಡ್‌, ಮಂಡಿ ನೋವು ಇರುವವರಿಗೆ ಅಕ್ವಾ ಜುಂಬೊ, ಪುಟ್ಟ ಮಕ್ಕಳಿಗೆ ಜುಂಬಾ ಕಿಡ್ಸ್ ಹೇಳಿ ಮಾಡಿಸಿದಂಥದ್ದು’ ಎನ್ನುತ್ತಾರೆ ಅವರು.

‘ಲ್ಯಾಟೀನ್ ಅಮೆರಿಕದ ಸಂಗೀತ ಕೇಳುತ್ತಿದ್ದಂತೆ ಹೆಜ್ಜೆ ಹಾಕಬೇಕೆಂಬ ತುಡಿತ ತನ್ನಿಂದ ತಾನೇ ಬರುತ್ತದೆ. ತರಬೇತುದಾರರು ನೀಡುವ ನಿರ್ದಿಷ್ಟ ಸೂಚನೆಗಳನ್ನು ಪಾಲಿಸಿ ನೃತ್ಯ ಮಾಡುತ್ತಿದ್ದಂತೆ ಕಾರ್ಡಿಯೊ ಸೇರಿದಂತೆ ದೇಹಕ್ಕೆ ಬೇಕಾಗುವ ಸಮಗ್ರ ವರ್ಕೌಟ್ ನಿಮಗೆ ಗೊತ್ತಿಲ್ಲದಂತೆ ಮಾಡಿರುತ್ತೀರಿ. ಟೋನಿಂಗ್, ತೂಕ ಇಳಿಸುವಿಕೆ ಎಲ್ಲವೂ ಇದರಲ್ಲಿದೆ’ ಅನ್ನುವ ವಿವರಣೆ ಅವರದ್ದು.

‘ಇತ್ತೀಚೆಗೆ ಕಾರ್ಪೊರೇಟ್ ವಲಯದಲ್ಲಿ ಪ್ರಸಿದ್ಧವಾಗುತ್ತಿರುವ ಜುಂಬಾ ಸಿಂಥೌವ್‌ ನಲ್ಲಿ ಕುರ್ಚಿಯಲ್ಲಿ ಕುಳಿತೇ ವ್ಯಾಯಾಮ ಮಾಡಬಹುದು. ಕೈಕಾಲುಗಳನ್ನು ಆಡಿಸುತ್ತಲೇ ಹೃದಯದ ಆರೋಗ್ಯವನ್ನೂ ಕಾಪಾಡಬಹುದು. ಮುಖ್ಯವಾಗಿ ಕ್ಯಾಲೋರಿ ಕಳೆಯುವ ಕೆಲಸವನ್ನು ಜುಂಬಾ ಮಾಡುತ್ತದೆ. ಗರ್ಭಿಣಿಯರೂ ಜುಂಬಾ ಫಿಟ್‌ನೆಸ್‌ನಲ್ಲಿ ಪಾಲ್ಗೊಳ್ಳಬಹುದು. ಆದರೆ, ಒಬ್ಬೊಬ್ಬರ ದೇಹ ಪ್ರಕೃತಿಯೂ ಭಿನ್ನವಾಗಿರುವುದರಿಂದ ಜುಂಬಾ ಮಾಡಲು ವೈದ್ಯರ ಪ್ರಮಾಣಪತ್ರ ಅತ್ಯಗತ್ಯ. ಗರ್ಭಿಣಿಯರಿಗೆ ಅಕ್ವಾ ಜುಂಬಾ ಸೂಕ್ತ’ ಎನ್ನುತ್ತಾರೆ ನಮ್ರತಾ.

‘ವಾರದಲ್ಲಿ ಮೂರು ದಿನ ಮೂರು ತಾಸು ಜುಂಬಾ ಮಾಡಿದರೆ ಸಾಕು. ಫಿಟ್‌ನೆಸ್ ಮೋಹಿಗಳು ದಿನಕ್ಕೆ 60 ನಿಮಿಷ ಜುಂಬಾ ಮಾಡಿದರೆ ಸಾಕು. ಜುಂಬಾ ದೇಹಕ್ಕಷ್ಟೇ ಅಲ್ಲ ಮನಸಿಗೂ ಅಪ್ಯಾಯಮಾನ. ಒತ್ತಡರಹಿತವಾಗಿ ನಿಮ್ಮ ಕ್ಯಾಲೊರಿ ಇಳಿಸುವ ಕಲೆ ಜುಂಬಾಕ್ಕಿದೆ. ಕಾರ್ಡಿಯೊ ಮಾಡುವವರು ಖಾಲಿ ಹೊಟ್ಟೆಗಿಂತ ತುಸು ಆಹಾರ ಸೇವಿಸಿದರೆ ಉಳಿತು. ಸೂರ್ಯ ಮುಳುಗಿದ ಮೇಲೆ ಜುಂಬಾ ಮಾಡುವವರು, ಈ ಫಿಟ್‌ನೆಸ್ ಆರಂಭಕ್ಕೂ ಒಂದು ತಾಸು ಮುನ್ನ ಸ್ವಲ್ಪವೇ ಆಹಾರ ಸೇವಿಸಬೇಕು’ ಅನ್ನುವುದು ಅವರ ಸಲಹೆ.

ಹೆಚ್ಚಿನ ಮಾಹಿತಿಗೆ: www.zumba.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT