ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ವಾಟೆಮಾಲಾ ಆಟಗಾರನಿಗೆ ಕನಸು ಈಡೇರಿಸಿಕೊಳ್ಳುವ ತವಕ

ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌: ಕೆವಿನ್‌ ಕಾರ್ಡನ್‌ ಕನಸಿನ ಓಟ
Last Updated 31 ಜುಲೈ 2021, 11:59 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ ಆಡಬೇಕೆಂಬುದು ಆ ಬಾಲಕನ ಕನಸಾಗಿತ್ತು. ಇದಕ್ಕಾಗಿ ಗ್ವಾಟೆಮಾಲಾದ ಗ್ರಾಮೀಣ ಪ್ರದೇಶ ಜ್ಯಕಾಪಾದಿಂದ ರಾಜಧಾನಿಗೆ ವಾಸ್ತವ್ಯ ಬದಲಾಯಿಸಿದಾಗ ಕೆವಿನ್‌ ಕಾರ್ಡನ್‌ ವಯಸ್ಸು ಕೇವಲ 12.

ಆದರೆ ಅವರಿಗೆ ವರ್ಷಗಳ ಕಾಲ ಆ ಕನಸಿನ ಹಾದಿಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗಲಿಲ್ಲ. ಒಂದಾದ ಮೇಲೆ ಒಂದರಂತೆ ಗಾಯಗಳ ಸಮಸ್ಯೆ. ಹೀಗಾಗಿ ಕ್ರೀಡಾ ಬದುಕಿನ ಉತ್ತುಂಗವೇರಬೇಕೆಂಬ ಬಯಕೆ ಈಡೇರುತ್ತಿರಲಿಲ್ಲ. ಈಗ 34ರ ವಯಸ್ಸಿನಲ್ಲಿ ಕಾರ್ಡನ್‌ ತಮ್ಮ ಕನಸು ಈಡೇರಿಸಿಕೊಳ್ಳುವ ಕಡೆ ದಾಪುಗಾಲು ಹಾಕಿದ್ದಾರೆ. 59ನೇ ಕ್ರಮಾಂಕದ ಈ ಆಟಗಾರ ತಮಗಿಂತ ಮೇಲಿನ ಕ್ರಮಾಂಕದ ಆಟಗಾರರನ್ನು ಹಿಮ್ಮೆಟ್ಟಿಸಿ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಶನಿವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕಾರ್ಡನ್‌ 21–13, 21–18 ರಿಂದ ಕೊರಿಯಾದ ಹಿಯೊ ಕ್ವಾಂಗೀ ಅವರನ್ನು ಸೋಲಿಸಿ ಸೆಮಿಫೈನಲ್‌ ತಲುಪಿದ್ದಾರೆ.

ಗ್ವಾಟೆಮಾಲಾ ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದುವರೆಗೆ ಗೆದ್ದಿರುವುದು ಏಕೈಕ ಪದಕವನ್ನು. ಈಗ ಎರಡನೇ ಪದಕದ ನಿರೀಕ್ಷೆಯಲ್ಲಿ ಆ ಬಡ ದೇಶ ಇದೆ.‌

‘ನಾನು ಬರೇ ಆಟವಾಡುತ್ತಿಲ್ಲ. ಪ್ರತಿ ಪಂದ್ಯದಲ್ಲಿ ಹೃದಯ, ಮನಸ್ಸನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ನಮ್ಮ ದೇಶದಲ್ಲಿ ಈ ಕ್ರೀಡೆಗಿಂತ ಬೇರೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಗಳಿವೆ’ ಎನ್ನುತ್ತಾರೆ. ಇಂಗ್ಲೆಂಡ್‌ನ ಫುಟ್‌ಬಾಲ್ ದಂತಕತೆ ಕೆವಿನ್‌ ಕೀಗನ್‌ ಅವರ ನೆನಪಿಗೆ ಪೋಷಕರು ಮಗನಿಗೆ ಈ ಹೆಸರು ಇಟ್ಟಿದ್ದಾರೆ. ಗ್ವಾಟೆಮಾಲಾದಲ್ಲಿ ಫುಟ್‌ಬಾಲ್‌ ಪ್ರಮುಖ ಆಟ.

ರಿಯೊ ಒಲಿಂಪಿಕ್ಸ್‌ನಲ್ಲಿ (2016) ಕಾರ್ಡನ್‌ ಅವರು ಗಾಯದ ಸಮಸ್ಯೆಯಿಂದ ಮೊದಲ ಸುತ್ತಿನ ಪಂದ್ಯದ ಅರ್ಧದಲ್ಲೇ ಹಿಂದೆ ಸರಿದಿದ್ದರು. ಈಗ ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಅವರು ವಿಶ್ವದ ನಂಬರ್‌ ಎರಡನೇ ಆಟಗಾರ ವಿಕ್ಟರ್‌ ಆಕ್ಸೆಲ್‌ಸನ್‌ ಎದುರು ಸೆಣಸಬೇಕಾಗಿದೆ.

‘ಕೆವಿನ್‌ ಇಷ್ಟು ಉತ್ತಮ ನಿರ್ವಹಣೆ ತೋರುವರೆಂಬ ಅಂದಾಜು ಯಾರಿಗೂ ಇರಲಿಕ್ಕಿಲ್ಲ. ಅವರದು ಯಶೋಗಾಥೆ. ಆದರೆ ಅವರ ಯಶಸ್ಸಿನ ಓಟಕ್ಕೆ ಅಂತ್ಯ ಹಾಡಲು ನನ್ನಿಂದಾದಷ್ಟು ಸಾಮರ್ಥ್ಯ ತೋರುತ್ತೇನೆ’ ಎಂದಿದ್ದಾರೆ ಡೆನ್ಮಾರ್ಕ್‌ನ ಆಕ್ಸೆಲ್‌ಸನ್‌.

ಭರ್ಜರಿ ಸ್ಮ್ಯಾಶ್‌ಗಳನ್ನು ಸಿಡಿಸಿದ ಡೆನ್ಮಾರ್ಕಿನ ಆಟಗಾರ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಶಿ ಯು ಅವರನ್ನು 21–13, 21–13 ರಿಂದ ಸದೆಬಡಿದರು.

ಆದರೆ ಆಕ್ಸೆಲ್‌ಜನ್‌ ಜೊತೆಗಾರ, ಮೂರನೇ ಶ್ರೇಯಾಂಕದ ಆಂಡರ್ಸ್‌ ಅಂಟೊನ್ಸೆನ್‌ ಅವರು ಗಂಟುಮೂಟೆ ಕಟ್ಟಿಕೊಳ್ಳಬೇಕಾಯಿತು. ಇಂಡೊನೇಷ್ಯಾದ ಸಿನಿಸುಕ ಜಿಂಟಿಂಗ್‌ ಅವರು ಅಂಟೊನ್ಸೆನ್‌ ಎದುರು ಜಯಗಳಿಸಿದರು. ಜಿಂಟಿಂಗ್‌ ಸೆಮಿಫೈನಲ್‌ನಲ್ಲಿ ಚೀನಾದ ಚೆನ್‌ ಲಾಂಗ್‌ ಎದುರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT