ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನ’ ನಿರೀಕ್ಷೆಯಲ್ಲಿ ಜರೀನ್‌, ಲವ್ಲಿನಾ

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಮೇರಿ ಕೋಮ್ ಅಲಭ್ಯ
Last Updated 15 ಮಾರ್ಚ್ 2023, 12:41 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ನಿಖತ್ ಜರೀನ್ ಮತ್ತು ಲವ್ಲಿನಾ ಬೊರ್ಗೊಹೈನ್ ನೇತೃತ್ವದ ಭಾರತ ತಂಡದವರು ಗುರುವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಆರು ಬಾರಿಯ ಚಾಂಪಿಯನ್‌ ಮೇರಿ ಕೋಮ್‌ ಅವರು ಎಡ ಮೊಣಕಾಲು ಗಾಯದಿಂದ ಬಳಲುತ್ತಿದ್ದು ಈ ಚಾಂಪಿಯನ್‌ಷಿಪ್‌ಗೆ ಲಭ್ಯರಿಲ್ಲ. 12 ಸದಸ್ಯರ ಭಾರತ ತಂಡದಲ್ಲಿ ನಿಖತ್ ಮತ್ತು ಲವ್ಲಿನಾ ಪ್ರಮುಖ ಸ್ಪರ್ಧಿಗಳು ಎನಿಸಿದ್ದಾರೆ.

2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧರಾಗಲಿರುವ, ವಿಶ್ವ ಚಾಂಪಿಯನ್‌ ನಿಖತ್‌, 50 ಕೆಜಿ ವಿಭಾಗದಲ್ಲಿ ಮತ್ತು ಒಲಿಂಪಿಕ್‌ ಕಂಚು ವಿಜೇತೆ ಲವ್ಲಿನಾ 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ನಿಖತ್‌ಗೆ ಇದು ಎರಡನೇ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದೆ. ಇದಕ್ಕೂ ಮೊದಲು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕೂಟದಲ್ಲಿ ಅವರು ಚಿನ್ನ ಜಯಿಸಿದ್ದರು.

75 ಕೆಜಿ ವಿಭಾಗದಲ್ಲಿ ಏಷ್ಯಾ ಚಾಂಪಿಯನ್ ಆಗಿದ್ದ ಲವ್ಲಿನಾ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಜಯಿಸಿದ್ದಾರೆ. ಎದುರಾಳಿಗೆ ಬಲಿಷ್ಠ ಪಂಚ್‌ ನೀಡಿ ಚಿನ್ನ ಗೆಲ್ಲುವ ಕಾತರದಲ್ಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ ನೀತು ಗಂಗಾಸ್‌ (48 ಕೆಜಿ) ಮತ್ತು ಕಳೆದ ಆವೃತ್ತಿಯ ಕಂಚು ವಿಜೇತೆ ಮನೀಷಾ ಮೌನ್‌ (57 ಕೆಜಿ) ಅವರ ಮೇಲೂ ನಿರೀಕ್ಷೆ ಇದೆ.

ವಿವಾದಗಳ ಗೂಡು: ಭಾರತ ಮೂರನೇ ಬಾರಿ ಟೂರ್ನಿಗೆ ಆತಿಥ್ಯ ವಹಿಸಿದ್ದು, ವಿವಿಧ ದೇಶಗಳಿಂದ ಬಹಿಷ್ಕಾರ, ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಡುವಣ ಸಂಘರ್ಷ ಮತ್ತು ನ್ಯಾಯಾಲಯದ ಪ್ರಕರಣದಿಂದ ಚಾಂಪಿಯನ್‌ಷಿಪ್‌ನ ಹೊಳಪು ಸ್ವಲ್ಪ ಮಾಸಿದೆ.

ರಷ್ಯಾದ ಉಮರ್ ಕ್ರೆಮ್ಲೆವ್‌ ಅಧ್ಯಕ್ಷರಾಗಿರುವ ಐಬಿಎ, ರಷ್ಯಾ ಮತ್ತು ಬೆಲಾರೂಸ್ ಬಾಕ್ಸರ್‌ಗಳಿಗೆ ಅವರ ದೇಶಗಳ ಧ್ವಜದಡಿಯೇ ಸ್ಪರ್ಧಿಸಲು ಅನುಮತಿ ನೀಡಿದೆ. ಈ ನಿರ್ಧಾರವು ಐಒಸಿಯ ಶಿಫಾರಸಿಗೆ ವಿರುದ್ಧವಾಗಿದೆ. ಹೀಗಾಗಿ ಅಮೆರಿಕ, ಬ್ರಿಟನ್‌, ಐರ್ಲೆಂಡ್‌ ಸೇರಿದಂತೆ 10 ದೇಶಗಳು ಟೂರ್ನಿಯಿಂದ ಹಿಂದೆ ಸರಿದಿವೆ.

ಇದಲ್ಲದೆ, ಎರಡು ವಿಶ್ವಮಟ್ಟದ ಸಂಸ್ಥೆಗಳ ನಡುವೆ ನಡೆಯುತ್ತಿರುವ ಸಂಘರ್ಷವು ಗೊಂದಲ ಸೃಷ್ಟಿಸಿದೆ ಏಕೆಂದರೆ, 2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳ ಉಸ್ತುವಾರಿ ತಾನು ವಹಿಸಿಕೊಳ್ಳುತ್ತಿದ್ದು; ಐಬಿಎ ಅಲ್ಲ ಎಂದು ಐಒಸಿ ವಾದಿಸಿದೆ. 2019ರಿಂದ ಐಬಿಎ ಅಮಾನತಿನಲ್ಲಿದೆ ಎಂದು ಐಒಸಿ ಹೇಳುತ್ತಿದೆ. ಆದರೆ ಮಹಿಳಾ ಮತ್ತು ಪುರುಷರ ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ತಾನೇ ನಡೆಸುತ್ತಿರುವುದಾಗಿ ಐಬಿಎ ಹೇಳಿಕೊಂಡಿದೆ.

ಭಾರತ ತಂಡದಲ್ಲಿ ತಮಗೆ ಸ್ಥಾನ ನೀಡದಿರುವುದನ್ನು ಪ್ರಶ್ನಿಸಿ ಮೂವರು ಬಾಕ್ಸರ್‌ಗಳಾದ ಮಂಜು ರಾಣಿ, ಶಿಕ್ಷಾ ನರ್ವಾಲ್‌ ಮತ್ತು ಪೂನಂ ಅವರು ದೆಹಲಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದು ಮತ್ತೊಂದು ವಿವಾದ. ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್‌ ನಿರಾಕರಿಸಿತ್ತು.

ಪ್ರಮುಖ ಅಂ‌ಕಿ ಅಂಶಗಳು

ಆವೃತ್ತಿ: 13

ದೇಶಗಳು: 65

ಬಾಕ್ಸರ್‌ಗಳು: 300ಕ್ಕೂ ಹೆಚ್ಚು

ಚಿನ್ನ ವಿಜೇತರಿಗೆ: ₹ 82 ಲಕ್ಷ

ಬೆಳ್ಳಿ ಗೆದ್ದವರಿಗೆ: ₹ 41 ಲಕ್ಷ

ಕಂಚು ವಿಜೇತರಿಗೆ: ₹ 20.50 ಲಕ್ಷ

ಭಾರತ ತಂಡ: ನಿತು ಗಂಗಾಸ್‌ (48 ಕೆಜಿ ವಿಭಾಗ), ನಿಖತ್ ಜರೀನ್ (50 ಕೆಜಿ), ಸಾಕ್ಷಿ ಚೌಧರಿ (52 ಕೆಜಿ), ಪ್ರೀತಿ (54 ಕೆಜಿ), ಮನೀಷಾ ಮೌನ್ (57 ಕೆಜಿ), ಜಾಸ್ಮಿನ್‌ ಲಂಬೋರಿಯಾ (60 ಕೆಜಿ), ಶಶಿ ಚೋಪ್ರಾ (63 ಕೆಜಿ), ಮಂಜು ಬಂಬೋರಿಯಾ (66 ಕೆಜಿ), ಸನಮಚಾ ಚಾನು (70 ಕೆಜಿ), ಲವ್ಲಿನಾ ಬೊರ್ಗೊಹೈನ್ (75 ಕೆಜಿ), ಸ್ವೀಟಿ ಬೂರಾ (81 ಕೆಜಿ) ಮತ್ತು ನೂಪುರ್ ಶೆರಾನ್ (81+ ಕೆಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT