ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಪಿ ಮಾಸ್ಟರ್ಸ್‌: ಬೋಪಣ್ಣ ಜೋಡಿಗೆ ಪರಿಬಾಸ್‌ ಕಿರೀಟ

ಎಟಿಪಿ ಮಾಸ್ಟರ್ಸ್‌ ಜಯಿಸಿದ ಅತಿ ಹಿರಿಯ ಆಟಗಾರ
Last Updated 19 ಮಾರ್ಚ್ 2023, 12:35 IST
ಅಕ್ಷರ ಗಾತ್ರ

ಇಂಡಿಯನ್ ವೆಲ್ಸ್, ಅಮೆರಿಕ: ಕನ್ನಡಿಗ ರೋಹನ್ ಬೋಪಣ್ಣ ಅವರು ಬಿಎನ್‌ಪಿ ಪರಿಬಾಸ್‌ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಇದರೊಂದಿಗೆ ಎಟಿಪಿ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಚಾಂಪಿಯನ್ ಆದ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ 43 ವರ್ಷದ ಬೋಪಣ್ಣ ಮತ್ತು ಆಸ್ಟ್ರೇಲಿಯಾದ 35 ವರ್ಷದ ಮ್ಯಾಟ್‌ ಎಬ್ಡೆನ್ ಜೋಡಿಯು 6-3, 2-6, 10-8ರಿಂದ ನೆದರ್ಲೆಂಡ್ಸ್‌ನ ವೇಸ್ಲಿ ಕೂಲೊಫ್– ಬ್ರಿಟನ್‌ನ ನೀಲ್‌ ಸ್ಕುಪ್‌ಸ್ಕಿ ಅವರನ್ನು ಪರಾಭವಗೊಳಿಸಿದರು. ವೇಸ್ಲಿ ಮತ್ತು ನೀಲ್‌ ಇಲ್ಲಿ ಅಗ್ರಶ್ರೇಯಾಂಕ ಪಡೆದಿದ್ದರು.

‘ಇದು ನಿಜವಾಗಿಯೂ ವಿಶೇಷ ಕ್ಷಣ. ಇದನ್ನು ಟೆನಿಸ್‌ನ ಸ್ವರ್ಗ ಎಂದು ಕರೆಯುತ್ತಾರೆ. ಬಹಳ ವರ್ಷಗಳಿಂದ ನಾನು ಇಲ್ಲಿಗೆ ಬರುತ್ತಿದ್ದು, ಹಲವು ಚಾಂಪಿಯನ್‌ಗಳನ್ನು ನೋಡುತ್ತಿದ್ದೇನೆ. ನಾನು ಮತ್ತು ಮ್ಯಾಟ್‌ ಇಲ್ಲಿ ಪ್ರಶಸ್ತಿ ಜಯಿಸಿದ್ದು ಸಂತಸ ತಂದಿದೆ‘ ಎಂದು ತಮ್ಮ 10ನೇ ಎಟಿಪಿ ಮಾಸ್ಟರ್ಸ್ 1000 ಟೂರ್ನಿಯ ಫೈನಲ್ ಆಡಿದ ಬೋಪಣ್ಣ ಹೇಳಿದರು.

ಬೋಪಣ್ಣ ಅವರು ಇಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಕೆನಡಾದ ಡೇನಿಯಲ್‌ ನೆಸ್ಟರ್‌ ಅವರ ಸಾಧನೆ ಮೀರಿದ್ದಾರೆ. 2015ರಲ್ಲಿ ಡೇನಿಯಲ್ ಅವರು ಸಿನ್ಸಿನಾಟಿ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ ಜಯಿಸಿದಾಗ ಅವರ ವಯಸ್ಸು 42 ಆಗಿತ್ತು.

‘ನಾನು ಡ್ಯಾನಿ ನೆಸ್ಟರ್‌ ದಾಖಲೆ ಮೀರಿದ್ದಕ್ಕೆ ಅವರ ಕ್ಷಮೆ ಕೇಳಿದೆ‘ ಎಂದು ಬೋಪಣ್ಣ ನಗೆ ಚಟಾಕಿ ಹಾರಿಸಿದರು.

ಬೋಪಣ್ಣ ಅವರಿಗೆ ಇದು ಐದನೇ ಮಾಸ್ಟರ್ಸ್ 1000 ಡಬಲ್ಸ್ ಕಿರೀಟವಾಗಿದೆ. 2017ರಲ್ಲಿ ಕೊನೆಯ ಬಾರಿ ಜಯಿಸಿದ್ದು ಮಾಂಟೆ ಕಾರ್ಲೊ ಪ್ರಶಸ್ತಿ. ಸದ್ಯ ಅವರ ಬಳಿ 24 ಟೂರ್ ಮಟ್ಟದ ಟ್ರೋಫಿಗಳಿವೆ.

ಬೋಪಣ್ಣ ಮತ್ತು ಎಬ್ಡೆನ್‌ ಸೆಮಿಫೈನಲ್‌ನಲ್ಲಿ, ಕಳೆದ ಆವೃತ್ತಿಯ ಚಾಂಪಿಯನ್‌ಗಳಾದ ಅಮೆರಿಕದ ಜಾನ್ ಇಸ್ನೆರ್ ಮತ್ತು ಜಾಕ್ ಸಾಕ್ ಅವರನ್ನು ಸೋಲಿಸಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಫೆಲಿಕ್ಸ್ ಅಗರ್ ಅಲಿಯಾಸಿಮ್– ಡೆನಿಸ್‌ ಶಪವಲೊವ್ ಸವಾಲು ಮೀರಿದ್ದರು.

ಡಬಲ್ಸ್‌ ರ‍್ಯಾಂಕಿಂಗ್‌ನಲ್ಲಿ ಬೋಪಣ್ಣ ಈಗ 11ನೇ ಸ್ಥಾನಕ್ಕೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT