ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್: ರಾಲೆಂಡ್ ಗ್ಯಾರೋಸ್‌ ಮಣ್ಣಿನಂಕಣದ ಹೊಸ ಬಣ್ಣಗಳು

Last Updated 20 ಸೆಪ್ಟೆಂಬರ್ 2020, 2:47 IST
ಅಕ್ಷರ ಗಾತ್ರ
ADVERTISEMENT
""

ಪ್ರತಿ ವರ್ಷ ವಸಂತ ಋತುವನ್ನು ಸ್ವಾಗತಿಸಲು ಫ್ರಾನ್ಸ್‌ ನಾಗರಿಕರು ಸಜ್ಜಾಗುತ್ತಿದ್ದಂತೆ ಟೆನಿಸ್ ಪ್ರಿಯರ ಮನದಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ. ಅವರ ಚಿತ್ತವೆಲ್ಲವೂ ರಾಲೆಂಡ್ ಗ್ಯಾರೋಸ್ ಕಡೆಗೆ ನಾಟುತ್ತದೆ. ಜೂನ್–ಜುಲೈ ತಿಂಗಳಲ್ಲಿ ಅಲ್ಲಿನ ಮಣ್ಣಿನಂಕಣದಲ್ಲಿ ಚೆಂಡು ಪುಟದೇಳುತ್ತಿದ್ದಂತೆ ಗ್ಯಾಲರಿಗಳಲ್ಲಿ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟುತ್ತದೆ. 12 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕ್ರೀಡಾಸಂಕೀರ್ಣದ ತುಂಬೆಲ್ಲ ಆಟಗಾರರು, ಪ್ರೇಕ್ಷರಕರು, ಕ್ರೀಡಾ ಪತ್ರಕರ್ತರು ಮುಂತಾದವರದೇ ಕಲರವ ತುಂಬಿರುತ್ತದೆ. ಆದರೆ ಈ ಬಾರಿ ಅಲ್ಲಿನ ನೋಟ ಬದಲಾಗಿದೆ... ‌

ಸೆಪ್ಟೆಂಬರ್ 21ರಂದು ಆರಂಭವಾಗುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಸಂದರ್ಭದಲ್ಲಿ ಗ್ಯಾಲರಿಗಳಲ್ಲಿ ಪ್ರೇಕ್ಷಕರು ತುಂಬಿ ತುಳುಕುವುದಿಲ್ಲ, ವಸಂತಕಾಲದ ಸವಿಯ ರೋಮಾಂಚನವೂ ಅಲ್ಲಿ ಇರುವುದಿಲ್ಲ.

ವಿಂಬಲ್ಡನ್ ಮತ್ತು ಅಮೆರಿಕ ಓಪನ್ ಟೂರ್ನಿ ಹೊರತುಪಡಿಸಿದರೆ ಹಳೆಯ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಮೂರನೇ ಸ್ಥಾನದಲ್ಲಿರುವ ಫ್ರೆಂಚ್ ಓಪನ್‌ ಟೂರ್ನಿಯ 124ನೇ ಆವೃತ್ತಿಯು ವಿವಿಧ ಕಾರಣಗಳಿಂದ ಇತಿಹಾಸದ ಪುಟ ಸೇರಲಿದೆ. ಹೊಸ ಪರಿಸರ ಮತ್ತು ಹೊಸ ಕಾಲ, ಆಟಗಾರರಿಗೆ ಸವಾಲನ್ನೂ ಎಸೆಯಲಿದೆ.

129 ವರ್ಷಗಳ ಇತಿಹಾಸವಿರುವ ಫ್ರೆಂಚ್ ಓಪನ್ ಟೂರ್ನಿ ಇದೇ ಮೊದಲ ಬಾರಿ ಮುಂದೂಡಿಕೆಗೆ ಒಳಗಾಗಿದೆ. ಮೊದಲ ಮತ್ತು ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಆದರೆ ಮುಂದೂಡಿದ ಇತಿಹಾಸವಿಲ್ಲ. ಆದ್ದರಿಂದ ಇದೇ ಮೊದಲ ಹೊಸ ಋತುವಿನಲ್ಲಿ ಟೂರ್ನಿ ನಡೆಯಲಿದೆ.ಟೆನಿಸ್‌ನ ಅತಿದೊಡ್ಡ ಉತ್ಸವಗಳಲ್ಲಿ ಒಂದಾದ ಈ ಟೂರ್ನಿಯನ್ನು ಸ್ವಾಗತಿಸಲುಶರತ್ಕಾಲ ಸಜ್ಜಾಗಿದೆ. ಕಾಲ ಬದಲಾದಂತೆ ಅಂಗಣದ ಗುಣವೂ ಬದಲಾಗಲಿದೆ. ಹೀಗಾಗಿ ಇಷ್ಟು ವರ್ಷ ಆಧಿಪತ್ಯ ಸಾಧಿಸಿದವರು ಈ ವರ್ಷವೂ ಪಾರಮ್ಯ ಉಳಿಸಿಕೊಳ್ಳುವರೇ ಎಂಬ ಕುತೂಹಲ ಪ್ರೇಕ್ಷಕರದು.

ಜನವರಿ ತಿಂಗಳಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿ ನಡೆದ ನಂತರ ವಿಶ್ವ ಟೆನಿಸ್ ಅಂಗಣಗಳು ಮೌನ ಹೊದ್ದು ಮಲಗಿವೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 14ರ ವರೆಗೆ ನಡೆದ ಅಮೆರಿಕ ಓಪನ್ ಟೂರ್ನಿಯ ಮೂಲಕ ಟೆನಿಸ್ ಋತುವಿಗೆ ಮರುಚಾಲನೆ ಲಭಿಸಿತ್ತು. ಆದರೆ ಅಮೆರಿಕ ಓಪನ್ ಟೂರ್ನಿಗೆ ಪ್ರೇಕ್ಷಕರಿಗೆ ಪ್ರವೇಶ ಇರಲಿಲ್ಲ. ಫ್ರೆಂಚ್ ಓಪನ್‌ಗೆ 11,500 ಮಂದಿ ಪ್ರೇಕ್ಷಕರಿಗೆ ಅವಕಾಶ ನೀಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಟೂರ್ನಿ ಆರಂಭವಾಗಲು ಮೂರು ದಿನ ಬಾಕಿ ಇರುವಾಗ ಆಯೋಜಕರು ನಿರ್ಧಾರ ಬದಲಿಸಿದ್ದು ಕೇವಲ 5,000 ಮಂದಿಯನ್ನು ಒಳಗೆ ಬಿಡುವುದಾಗಿ ಹೇಳಿದ್ದಾರೆ. ಅಮೆರಿಕ ಓಪನ್ ಟೂರ್ನಿ ಪ್ರೇಕ್ಷಕರೇ ಇಲ್ಲದೆ ನಡೆದಿದ್ದರೆ, ಫ್ರೆಂಚ್‌ ಓಪನ್ ಟೂರ್ನಿ ವೇಳೆ ಗ್ಯಾಲರಿಗಳಲ್ಲಿ ಇಷ್ಟು ಸಂಖ್ಯೆಯ ಜನರಾದರೂ ಇರುವುದು ಆಟಗಾರರಲ್ಲಿ ಹುರುಪು ತುಂಬಲಿದೆ.

ಫ್ರೆಂಚ್ ಯುದ್ಧದಲ್ಲಿ ಕಾದಾಡಿದ ರಾಲೆಂಡ್ ಗ್ಯಾರೋಸ್ ಹೆಸರಿನಲ್ಲಿ ರಾಜಧಾನಿ ಪ್ಯಾರಿಸ್‌ನಲ್ಲಿ ನಿರ್ಮಿಸಿರುವ ಟೆನಿಸ್ ಸಂಕೀರ್ಣದ ಫಿಲಿ‍‍ಪ್ ಚಾಟ್ರಿಯರ್ ಅಂಗಣದ ಛಾವಣಿಯನ್ನು ಈಗ ನವೀಕರಿಸಲಾಗಿದೆ. ಹೊಸ ಋತುವಿನಲ್ಲಿ ನಡೆಯುವ ಟೂರ್ನಿಗೆ ಈ ಹೊಸ ವಿನ್ಯಾಸವೂ ಹೊಸತನ ತುಂಬುವ ನಿರೀಕ್ಷೆ ಇದೆ.

ಪ್ಯಾರಿಸ್‌ನಲ್ಲಿ ವಸಂತ ಮತ್ತು ಶರತ್ಕಾಲದಲ್ಲಿ ವಾತಾವರಣ ವಿಭಿನ್ನವಾಗಿರುತ್ತದೆ. ‘ಸೂರ್ಯ ಮುಳುಗುತ್ತಿದ್ದಂತೆ ಸಮೀಪದ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳು ಉರಿಯತೊಡಗಿದಾಗ ಕ್ರೀಡಾಂಗಣ ಚಿನ್ನದ ಹೊಳಪಿನಲ್ಲಿ ಮಿಂದೇಳುತ್ತದೆ. ಕ್ರೀಡಾಂಗಣದ ಹಸಿರು ಈಗಾಗಲೇ ಬಣ್ಣ ಬದಲಿಸಿಕೊಂಡಿದೆ. ಹೀಗಾಗಿ ಸಂಜೆಯ ವೇಳೆ ಇಲ್ಲಿ ಇನ್ನಷ್ಟು ಹೊಸತನ ಎದ್ದು ಕಾಣುತ್ತಿದೆ’ ಎಂದು ಟೂರ್ನಿಯ ವೆಬ್‌ಸೈಟ್‌ನಲ್ಲಿ ವರ್ಣಿಸಲಾಗಿದೆ. ಈ ಹೊಸತನ ಟೆನಿಸ್ ತಾರೆಯರ ಮೇಲೆ ಬೀರಲಿರುವ ಪರಿಣಾಮವೇನು ಎಂಬುದಕ್ಕೆ ಪಂದ್ಯಗಳಲ್ಲೇ ಉತ್ತರ ಸಿಗಬೇಕಿದೆ.

ಪುರುಷರ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿ ಗೆದ್ದವರು

1–ರಫೆಲ್ ನಡಾಲ್–ಸ್ಪೇನ್ (12), ಮ್ಯಾಕ್ಸ್ ಡೆಗಿಸ್–ಫ್ರಾನ್ಸ್‌ (8), ಹೆನ್ರಿ ಕೋಚೆಟ್–ಫ್ರಾನ್ಸ್‌ (4).

ಮಹಿಳೆಯರ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿ ಗೆದ್ದವರು

ಕ್ರಿಸ್ ಎವರ್ಟ್‌–ಅಮೆರಿಕ (7), ಸೂಸೇನ್ ಲೆಂಗ್ಲೆನ್‌–ಫ್ರಾನ್ಸ್‌ (6)


ಈ ಬಾರಿಯ ಅಗ್ರ 10 ಆಟಗಾರರು (ಆವರಣದಲ್ಲಿ ರ‍್ಯಾಂಕ್‌)

ನೊವಾಕ್‌ ಜೊಕೊವಿಚ್‌–ಸರ್ಬಿಯಾ (1); ರಫೆಲ್ ನಡಾಲ್–ಸ್ಪೇನ್ (2); ಡೊಮಿನಿಕ್ ಥೀಮ್–ಆಸ್ಟ್ರಿಯಾ (3); ಡ್ಯಾನಿಲ್ ಮೆಡ್ವೆಡೆವ್–ರಷ್ಯಾ (5); ಸ್ಟೆಫನೊಸ್ ಸಿಸಿಪಸ್–ಗ್ರೀಸ್ (6); ಅಲೆಕ್ಸಾಂಡರ್ ಜ್ವೆರೆವ್–ಜರ್ಮನಿ (7); ಮಟಿಯೊ ಬೆರೆಟಿನಿ–ಇಟೆಲಿ (8); ಗೇಲ್ ಮೊನ್ಫಿಲ್ಸ್‌–ಫ್ರಾನ್ಸ್ (9); ರೋಬರ್ಟೊ ಬೌಟಿಸ್ಟಾ ಅಗೂಟ್–ಸ್ಪೇನ್ (10) ಡೇವಿಡ್ ಗೊಫಿನ್–ಬೆಲ್ಜಿಯಂ (11).

ಈ ಬಾರಿಯ ಅಗ್ರ 10 ಆಟಗಾರ್ತಿಯರು(ಆವರಣದಲ್ಲಿ ರ‍್ಯಾಂಕ್‌)

ಸಿಮೋನಾ ಹಲೆಪ್–ರೊಮೇನಿಯಾ (2); ಕರೊಲಿನಾ ಪ್ಲಿಸ್ಕೋವ–ಜೆಕ್ ಗಣರಾಜ್ಯ (4); ಸೋಫಿಯಾ ಕೆನಿನ್–ಅಮೆರಿಕಾ (5); ಎಲಿನಾ ಸ್ವಿಟೋಲಿನಾ–ಉಕ್ರೇನ್‌ (6); ಬಿಯಾಂಕಾ ಆ್ಯಂಡ್ರ್ಯೂಸ್–ಕೆನಡಾ (7); ಕಿಕಿ ಬೆರ್ಟೆನ್ಸ್‌–ನೆದರ್ಲೆಂಡ್ಸ್‌ (8); ಸೆರೆನಾ ವಿಲಿಯಮ್ಸ್ –ಅಮೆರಿಕಾ (9); ಬೆಲಿಂಡಾ ಬೆನ್ಸಿಕ್– ಸ್ವಿಟ್ಜರ್ಲೆಂಡ್‌ (10); ಪೆಟ್ರಾ ಕ್ವಿಟೋವ–ಜೆಕ್ ಗಣರಾಜ್ಯ (11); ಅರಿನಾ ಸಬಲೆಂಕಾ–ಬೆಲಾರಸ್ (12).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT