ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌ ಟೆನಿಸ್‌ :19ರ ಸಭೆಯಲ್ಲಿ ಅಂತಿಮ ನಿರ್ಧಾರ- ಚಟರ್ಜಿ

ಪಾಕಿಸ್ತಾನದಲ್ಲಿ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ
Last Updated 15 ಆಗಸ್ಟ್ 2019, 17:26 IST
ಅಕ್ಷರ ಗಾತ್ರ

ಮುಂಬೈ (ರಾಯಿಟರ್ಸ್‌): ‘ಪಾಕಿಸ್ತಾನದಲ್ಲಿ ಡೇವಿಸ್‌ ಕಪ್‌ ಏಷ್ಯಾ ಒಸೀನಿಯಾ ಒಂದನೇ ಗುಂಪಿನ ಟೆನಿಸ್‌ ಪಂದ್ಯ ಆಡಬೇಕೆ, ಬೇಡವೇ ಎಂಬುದರ ಬಗ್ಗೆ ಸೋಮವಾರ ನಡೆಯುವ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆಯ (ಎಐಟಿಎ) ಕಾರ್ಯದರ್ಶಿ ಹಿರೋಣ್ಮಯ್‌ ಚಟರ್ಜಿ ತಿಳಿಸಿದ್ದಾರೆ.

ಭಾರತ ಮತ್ತು ಪಾಕ್‌ ನಡುವಣ ಪಂದ್ಯ ಸೆಪ್ಟೆಂಬರ್‌ 14 ಮತ್ತು 15ರಂದು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದೆ.

‘ಸೋಮವಾರದ ಸಭೆಯಲ್ಲಿ ಭಾರತ ತಂಡದ ಆಟವಾಡದ ನಾಯಕ ಮಹೇಶ್‌ ಭೂಪತಿ ಭಾಗವಹಿಸಲಿದ್ದಾರೆ. ಐಟಿಎಫ್‌ ಮತ್ತು ಎಐಟಿಎಯ ಭದ್ರತಾ ಸಲಹೆಗಾರರು ದೂರವಾಣಿಯ ಮೂಲಕ ಮಾತನಾಡಲಿದ್ದಾರೆ. ಅವರ ಅಭಿಪ್ರಾಯಗಳನ್ನು ಆಲಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದಿದ್ದಾರೆ.

‘ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಂದೂಡಿ ಇಲ್ಲವೇ ತಟಸ್ಥ ಸ್ಥಳದಲ್ಲಿ ನಡೆಸಿ ಎಂದು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ಗೆ (ಐಟಿಎಫ್‌) ಮನವಿ ಮಾಡಿದ್ದೇವೆ. ಭಾರತ ತಂಡಕ್ಕೆ ಬಿಗಿ ಭದ್ರತೆ ಒದಗಿಸುವುದಾಗಿ ಐಟಿಎಫ್‌ ಹೇಳಿದೆ. ಆಗಸ್ಟ್‌ 19ರೊಳಗೆ ಅಂತಿಮ ನಿರ್ಧಾರ ತಿಳಿಸುವಂತೆ ಸೂಚಿಸಿದೆ. ಹೀಗಾಗಿ ಸಭೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

‘ಜನರ ಭಾವನೆಗಳನ್ನು ಗೌರವಿಸುವ ನೆಪವೊಡ್ಡಿ ಪಾಕಿಸ್ತಾನ ಸರ್ಕಾರವು ಭಾರತ ತಂಡಕ್ಕೆ ನೀಡುವ ಭದ್ರತೆಯನ್ನು ಅಂತಿಮ ಕ್ಷಣದಲ್ಲಿ ಹಿಂಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡಬೇಕು. ಇದನ್ನು ಐಟಿಎಫ್‌ ಅರ್ಥ ಮಾಡಿಕೊಳ್ಳಬೇಕು. ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ನಾವು ಸಿದ್ಧರಿಲ್ಲ. ಕ್ರೀಡಾಪಟುಗಳ ಹಿತ ಕಾಯುವುದು ನಮ್ಮ ಆದ್ಯ ಕರ್ತವ್ಯ’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT