ಸೆರೆನಾ ವಿಲಿಯಮ್ಸ್‌ ಶುಭಾರಂಭ: ರಫೆಲ್‌ ನಡಾಲ್‌, ಆ್ಯಂಡಿ ಮರ‍್ರೆಗೆ ಗೆಲುವು

7

ಸೆರೆನಾ ವಿಲಿಯಮ್ಸ್‌ ಶುಭಾರಂಭ: ರಫೆಲ್‌ ನಡಾಲ್‌, ಆ್ಯಂಡಿ ಮರ‍್ರೆಗೆ ಗೆಲುವು

Published:
Updated:
Deccan Herald

ನ್ಯೂಯಾರ್ಕ್‌ : ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಸೆರೆನಾ ವಿಲಿಯಮ್ಸ್‌, ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಸೆರೆನಾ 6–4, 6–0ರಿಂದ ಪೋಲೆಂಡ್‌ನ ಮಗ್ದಾ ಲಿನೆಟ್ಟೆ ಅವರನ್ನು ಪರಾಭವಗೊಳಿಸಿದರು.

ಟೂರ್ನಿಯಲ್ಲಿ 17ನೇ ಶ್ರೇಯಾಂಕ ಹೊಂದಿರುವ ಸೆರೆನಾ ಮತ್ತು ವಿಶ್ವ ಕ್ರಮಾಂಕ‍ ಪಟ್ಟಿಯಲ್ಲಿ 68ನೇ ಸ್ಥಾನದಲ್ಲಿರುವ ಮಗ್ದಾ ಅವರು ಮೊದಲ ಸೆಟ್‌ನ ಆರಂಭದ ಆರು ಗೇಮ್‌ಗಳಲ್ಲಿ ಸರ್ವ್‌ ಉಳಿಸಿಕೊಂಡರು. ಹೀಗಾಗಿ 3–3ರ ಸಮಬಲ ಕಂಡುಬಂತು.

ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ಸೆರೆನಾ ಮೇಲುಗೈ ಸಾಧಿಸಿದರು. ಅವರು ನಂತರದ ಗೇಮ್‌ಗಳಲ್ಲೂ ಚುರುಕಾಗಿ ಆಡಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಸೆಟ್‌ನಲ್ಲಿ ಮಗ್ದಾ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. 23 ಗ್ರ್ಯಾನ್‌ಸ್ಲಾಮ್‌ ‍ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ, ಸೆಟ್‌ನ ಆರಂಭದಿಂದಲೂ ಆಧಿಪತ್ಯ ಸಾಧಿಸಿದರು.

ಅಮೋಘ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅಮೆರಿಕದ ಸೆರೆನಾ ಏಕಪಕ್ಷೀಯವಾಗಿ ಪಂದ್ಯ ಗೆದ್ದರು.

ಸೆರೆನಾ ಅವರ ಸಹೋದರಿ ವೀನಸ್‌ ವಿಲಿಯಮ್ಸ್‌ ಕೂಡಾ ಎರಡನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನ ಹಣಾಹಣಿಯಲ್ಲಿ ವೀನಸ್‌ 6–3, 5–7, 6–3ರಲ್ಲಿ ಸ್ವೆಟ್ಲಾನ ಕುಜ್ನೆತ್ಸೊವಾ ಅವರನ್ನು ಸೋಲಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಕ್ಯಾರೋಲಿನಾ ಡೊಲೆಹೈಡ್‌ 6–3, 7–6ರಲ್ಲಿ ಕ್ಯಾರಿನಾ ವಿಥೊಪ್ಟ್‌ ಎದುರೂ, ವಿಕ್ಟೋರಿಯಾ ಅಜರೆಂಕಾ 6–3, 7–5ರಲ್ಲಿ ವಿಕ್ಟೋರಿಯಾ ಕುಜಮೊವಾ ಮೇಲೂ, ಡೇರಿಯಾ ಗ್ಯಾವರಿಲೋವಾ 6–0, 6–0ರಲ್ಲಿ ಸಾರಾ ಸೊರಿಬೆಸ್‌ ಟೊರ್ಮೊ ವಿರುದ್ಧವೂ, ಅನಾ ಬೊಗ್ದಾನ್‌ 6–4, 6–2ರಲ್ಲಿ ಮೇರಿ ಬೌಜಕೋವಾ ಎದುರೂ, ಜೂಲಿಯಾ ಜಾರ್ಜಸ್‌ 6–2, 6–7, 6–2ರಲ್ಲಿ ಅನಾ ಕಲಿನ್‌ಸ್ಕಯಾ ವಿರುದ್ಧವೂ, ಸೋಫಿಯಾ ಕೆನಿನ್‌ 6–0, 4–6, 7–6ರಲ್ಲಿ ಮ್ಯಾಡಿಸನ್‌ ಬ್ರೆಂಗಲ್ಸ್‌ ವಿರುದ್ಧವೂ, ಮರಿಯಾ ಸಕ್ಕಾರಿ 6–3, 6–3ರಲ್ಲಿ ಆಸಿಯಾ ಮಹಮ್ಮದ್‌ ವಿರುದ್ಧವೂ, ಲೂಸಿ ಸಫರೋವಾ 6–4, 6–4ರಲ್ಲಿ ಪೆಟ್ರಾ ಮಾರ್ಟಿಕ್‌ ಎದುರೂ, ಸ್ಲೋನ್‌ ಸ್ಟೀಫನ್ಸ್‌ 6–1, 7–5ರಲ್ಲಿ ಎವಜೆನಿಯಾ ರೊಡಿನಾ ವಿರುದ್ಧವೂ ಗೆದ್ದರು.

ನಡಾಲ್‌ಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿರುವ ರಫೆಲ್‌ ನಡಾಲ್‌ ಎರಡನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನ ಹೋರಾಟದಲ್ಲಿ ಸ್ಪೇನ್‌ನ ನಡಾಲ್‌ 6–3, 3–4ರಿಂದ ಡೇವಿಡ್‌ ಫೆರರ್‌ ವಿರುದ್ಧ ಗೆದ್ದರು.

ಎರಡನೇ ಸೆಟ್‌ನ ವೇಳೆ ಗಾಯಗೊಂಡ ಫೆರರ್‌ ಅಂಗಳ ತೊರೆದರು.

ಮತ್ತೊಂದು ಪಂದ್ಯದಲ್ಲಿ ಬ್ರಿಟನ್‌ನ ಆ್ಯಂಡಿ ಮರ‍್ರೆ 6–7, 6–3, 7–5, 6–3ರಲ್ಲಿ ಆಸ್ಟ್ರೇಲಿಯಾದ ಜೇಮ್ಸ್‌ ಡಕ್ವರ್ಥ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ವಸೆಲ್‌ ಪೊಸ್ಪಿಸಿಲ್‌ 7–5, 6–3, 6–2ರಲ್ಲಿ ಲುಕಾಸ್‌ ಲ್ಯಾಕೊ ಎದುರೂ, ಜ್ಯಾಕ್‌ ಸಾಕ್‌ 6–0, 7–6, 6–2ರಲ್ಲಿ ಗುಯಿಡೊ ಆ್ಯಂಡ್ರೆಯೊಜಿ ಮೇಲೂ, ಡಾಮಿನಿಕ್‌ ಥೀಮ್‌ 6–3, 6–1, 6–4ರಲ್ಲಿ ಮಿರ್ಜಾ ಬೆಸಿಕ್‌ ವಿರುದ್ಧವೂ, ಸ್ಟೀವ್‌ ಜಾನ್ಸನ್‌ 6–3, 7–6, 6–3ರಲ್ಲಿ ಡೆನಿಸ್‌ ಇಸ್ತೋಮಿನ್‌ ಮೇಲೂ, ಜೆರೆಮಿ ಚಾರ್ಡಿ 6–1, 4–6, 6–4, 6–1ರಲ್ಲಿ ಆ್ಯಂಡ್ರೆ ರುಬಲೆವ್‌ ವಿರುದ್ಧವೂ, ಕೆವಿನ್‌ ಆ್ಯಂಡರ್‌ಸನ್‌ 7–6, 5–7, 4–6, 6–3, 6–4ರಲ್ಲಿ ರ‍್ಯಾನ್‌ ಹ್ಯಾರಿಸನ್‌ ಮೇಲೂ, ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ 6–0, 6–3, 6–4ರಲ್ಲಿ ಡೊನಾಲ್ಡ್‌ ಯಂಗ್‌ ವಿರುದ್ಧವೂ, ಬೊರ್ನಾ ಕೊರಿಕ್‌ 6–2, 6–2, 5–7, 6–4ರಲ್ಲಿ ಫ್ಲೋರಿಯನ್‌ ಮೇಯರ್‌ ಎದುರೂ, ಜಾನ್‌ ಇಸ್ನರ್‌ 7–6, 6–3, 6–4ರಲ್ಲಿ ಬ್ರಾಡ್ಲಿ ಕ್ಲಾನ್‌ ವಿರುದ್ಧವೂ, ಟೇಲರ್‌ ಫ್ರಿಟ್ಜ್‌ 4–6, 2–6, 6–4, 7–6, 6–2ರಲ್ಲಿ ಮಿಶಾ ಜ್ವೆರೆವ್‌ ವಿರುದ್ಧವೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !