ಶುಕ್ರವಾರ, ಮಾರ್ಚ್ 5, 2021
24 °C
ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಡೆಲ್‌ ಪೊಟ್ರೊಗೆ ಜಯ

ಕ್ವಾರ್ಟರ್‌ಗೆ ಸೆರೆನಾ, ನಡಾಲ್

ಎಎಫ್‌‍ಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಆರು ಬಾರಿಯ ಚಾಂ‍ಪಿಯನ್‌ ಸೆರೆನಾ ವಿಲಿಯಮ್ಸ್‌ ಮತ್ತು ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ಸೆರೆನಾ 6–0, 4–6, 6–3ರಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಕಯಿಯಾ ಕನೆಪಿ ವಿರುದ್ಧ ಗೆದ್ದರು.

ಗ್ರ್ಯಾಂಡ್‌ಸ್ಲಾಮ್‌ನಲ್ಲಿ 23 ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ ಮೊದಲ ಸೆಟ್‌ನಲ್ಲಿ ಆಧಿಪತ್ಯ ಸಾಧಿಸಿದರು. ಮೂರು ಸರ್ವ್‌ಗಳನ್ನು ಕಾಪಾಡಿಕೊಂಡ ಅವರು ಎದುರಾಳಿಯ ಎಲ್ಲಾ ಸರ್ವ್‌ಗಳನ್ನು ಮುರಿದು ಏಕಪಕ್ಷೀಯವಾಗಿ ಸೆಟ್‌ ಜಯಿಸಿದರು.

ಎರಡನೇ ಸೆಟ್‌ನಲ್ಲಿ ಕನೆಪಿ ತಿರುಗೇಟು ನೀಡಿದರು. ಹೀಗಾಗಿ ಮೂರನೇ ಸೆಟ್‌ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಉಭಯ ಆಟಗಾರ್ತಿಯರು ಆರಂಭದಿಂದಲೇ ಅಬ್ಬರಿಸಿದರು. ಆದ್ದರಿಂದ 3–3ರ ಸಮಬಲ ಕಂಡುಬಂತು. ನಂತರ ಸೆರೆನಾ ಆಟ ರಂಗೇರಿತು. ಶರವೇಗದ ಸರ್ವ್‌ಗಳನ್ನು ಮಾಡಿದ ಅವರು ದೀರ್ಘ ರ‍್ಯಾಲಿಗಳನ್ನು ಆಡಿ ಗೆಲುವಿನ ತೋರಣ ಕಟ್ಟಿದರು.

ಈ ಪಂದ್ಯದಲ್ಲಿ ಸೆರೆನಾ 18 ಏಸ್‌ ಮತ್ತು 47 ವಿನ್ನರ್‌ಗಳನ್ನು ಸಿಡಿಸಿದರು.


ಅಮೆರಿಕದ ಸೆರೆನಾ ವಿಲಿಯಮ್ಸ್‌ ಆಟದ ವೈಖರಿ -ಎಎಫ್‌ಪಿ ಚಿತ್ರ

ಕ್ವಾರ್ಟರ್ ‍ಫೈನಲ್‌ನಲ್ಲಿ ಸೆರೆನಾ ಅವರು ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ ಸೆಣಸಲಿದ್ದಾರೆ.

ಜೆಕ್‌ ಗಣರಾಜ್ಯದ ಎಂಟನೇ ಶ್ರೇಯಾಂಕದ ಆಟಗಾರ್ತಿ ಪ್ಲಿಸ್ಕೋವಾ ನಾಲ್ಕನೇ ಸುತ್ತಿನ ಹೋರಾಟದಲ್ಲಿ 6–4, 6–4ರ ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಆ್ಯಷ್ಲೆಗ್‌ ಬಾರ್ಟಿ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌ 6–3, 6–3ರಲ್ಲಿ ಆಸ್ಟ್ರೇಲಿಯಾದ ಆ್ಯಷ್ಲೆಗ್‌ ಬಾರ್ಟಿ ಎದುರೂ, ಲಾಟ್ವಿಯಾದ ಅನಸ್ತೇಸಿಜಾ ಸೆವಾಸ್ಟೋವಾ 6–3, 1–6, 6–0ರಲ್ಲಿ ಎಲಿನಾ ಸ್ವಿಟೋಲಿನಾ ವಿರುದ್ಧವೂ ವಿಜಯಿಯಾದರು.

ನಡಾಲ್‌ ಮಿಂಚು: ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ 6–3, 6–3, 6–7, 6–4ರಲ್ಲಿ ನಿಕೊಲಸ್‌ ಬಸಿಲಶ್ವಿಲಿ ಅವರನ್ನು ಪರಾಭವಗೊಳಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಡಾಲ್‌, ಮೊದಲ ಎರಡು ಸೆಟ್‌ಗಳಲ್ಲಿ ನಿರಾಯಾಸವಾಗಿ ಗೆದ್ದರು. ಮೂರನೇ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ‘ಟೈ ಬ್ರೇಕರ್‌’ನಲ್ಲಿ ನಿಕೊಲಸ್‌ ಗೆದ್ದರು. ನಾಲ್ಕನೇ ಸೆಟ್‌ನಲ್ಲಿ ನಡಾಲ್‌ ಪರಾಕ್ರಮ ಮೆರೆದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಡಾಮಿನಿಕ್‌ ಥೀಮ್‌ 7–5, 6–2, 7–6ರಲ್ಲಿ ಕೆವಿನ್‌ ಆ್ಯಂಡರ್ಸನ್‌ ಎದುರೂ, ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ 6–4, 6–3, 6–1ರಲ್ಲಿ ಬೊರ್ನಾ ಕೊರಿಕ್‌ ಎದುರೂ, ಜಾನ್‌ ಇಸ್ನರ್ 3–6, 6–3, 6–4, 3–6, 6–2ರಲ್ಲಿ ಮಿಲೊಸ್‌ ರಾನಿಕ್‌ ವಿರುದ್ಧವೂ ಗೆದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು