ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಫೆಡರರ್‌ಗೆ ಆಘಾತ ನೀಡಿದ ಮಿಲ್‌ಮ್ಯಾನ್‌

7
ನಾಲ್ಕನೇ ಸುತ್ತಿನಲ್ಲಿ ಸೋತ ಶರಪೋವಾ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಫೆಡರರ್‌ಗೆ ಆಘಾತ ನೀಡಿದ ಮಿಲ್‌ಮ್ಯಾನ್‌

Published:
Updated:
Deccan Herald

ನ್ಯೂಯಾರ್ಕ್‌: ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಂಗಳವಾರ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಐದು ಬಾರಿಯ ಚಾಂಪಿಯನ್‌ ರೋಜರ್‌ ಫೆಡರರ್‌‍ ಪುರುಷರ ಸಿಂಗಲ್ಸ್‌ ವಿಭಾಗದ ನಾಲ್ಕನೇ ಸುತ್ತಿನಲ್ಲಿ ಆಘಾತ ಕಂಡಿದ್ದಾರೆ.

ಆಸ್ಟ್ರೇಲಿಯಾದ ಜಾನ್‌ ಮಿಲ್‌ಮ್ಯಾನ್‌ 3–6, 7–5, 7–6, 7–6ರಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ವಿರುದ್ಧ ಗೆದ್ದಿದ್ದಾರೆ.

ಗ್ರ್ಯಾಂಡ್‌ಸ್ಲಾಮ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವ ಫೆಡರರ್‌ ಮೊದಲ ಸೆಟ್‌ನಲ್ಲಿ ಅಮೋಘ ಆಟ ಆಡಿದರು. ಶರವೇಗದ ಸರ್ವ್‌, ಚುರುಕಿನ ಡ್ರಾಪ್ ಮತ್ತು ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಆರಂಭಿಕ ನಿರಾಸೆಯಿಂದ 29 ವರ್ಷ ವಯಸ್ಸಿನ ಮಿಲ್‌ಮ್ಯಾನ್‌ ಎದೆಗುಂದಲಿಲ್ಲ. ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಅವರು 1–1ರಲ್ಲಿ ಸಮಬಲ ಮಾಡಿಕೊಂಡರು.

ಬಿಸಿಲಿನ ತಾಪ ಹೆಚ್ಚಾಗಿ ಇದ್ದುದರಿಂದ 37 ವರ್ಷ ವಯಸ್ಸಿನ ‍ಫೆಡರರ್‌ ಸಾಕಷ್ಟು ದಣಿದಂತೆ ಕಂಡರು. ಹೀಗಾಗಿ ಮೂರು ಮತ್ತು ನಾಲ್ಕನೇ ಸೆಟ್‌ಗಳಲ್ಲಿ ಅವರಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರಲಿಲ್ಲ. ಈ ಸೆಟ್‌ಗಳಲ್ಲಿ ಅವರು ‘ಟೈ ಬ್ರೇಕರ್‌’ನಲ್ಲಿ ಎದುರಾಳಿಗೆ ಶರಣಾದರು.

ಎರಡನೇ ಶ್ರೇಯಾಂಕದ ಆಟಗಾರ ಫೆಡರರ್‌ ಈ ಪಂದ್ಯದಲ್ಲಿ 77 ಸ್ವಯಂಕೃತ ತಪ್ಪುಗಳನ್ನು ಮಾಡಿದರು. 10 ಡಬಲ್‌ ಫಾಲ್ಟ್‌ಗಳನ್ನು ಎಸಗಿದರು. ಮಿಲ್‌ಮ್ಯಾನ್‌ ಒಂದು ಡಬಲ್‌ ಫಾಲ್ಟ್‌ ಮಾತ್ರ ಮಾಡಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಮಿಲ್‌ಮ್ಯಾನ್‌, ಸರ್ಬಿಯಾದ ನೊವಾಕ್ ಜೊಕೊವಿಚ್‌ ವಿರುದ್ಧ ಸೆಣಸಲಿದ್ದಾರೆ.

ನಾಲ್ಕನೇ ಸುತ್ತಿನ ಇನ್ನೊಂದು ಹೋರಾಟದಲ್ಲಿ ಆರನೇ ಶ್ರೇಯಾಂಕದ ಆಟಗಾರ ನೊವಾಕ್‌ 6–3, 6–4, 6–3ರಲ್ಲಿ ಜಾವೊ ಸೌಸಾ ಅವರನ್ನು ಸೋಲಿಸಿದರು.

ಪಂದ್ಯದ ಮೂರು ಸೆಟ್‌ಗಳಲ್ಲೂ ನೊವಾಕ್‌ ಪ್ರಾಬಲ್ಯ ಮೆರೆದರು.

ಇತರ ಪಂದ್ಯಗಳಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ 7–6, 6–2, 6–4ರಲ್ಲಿ ಡೇವಿಡ್‌ ಗೊಫಿನ್‌ ಎದುರೂ, ಜಪಾನ್‌ನ ಕೀ ನಿಶಿಕೋರಿ 6–3, 6–2, 7–5ರಲ್ಲಿ ಫಿಲಿಪ್‌ ಕೊಹ್ಲ್‌ಶ್ರೀಬರ್‌ ವಿರುದ್ಧವೂ ಗೆದ್ದರು.

ಶರಪೋವಾಗೆ ಸೋಲು: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ರಷ್ಯಾದ ಮರಿಯಾ ಶರಪೋವಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ವಿಫಲರಾದರು.

ನಾಲ್ಕನೇ ಸುತ್ತಿನ ಪೈಪೋಟಿಯಲ್ಲಿ ಸ್ಪೇನ್‌ನ ಕಾರ್ಲಾ ಸ್ವಾರೆಜ್‌ ನವಾರೊ 6–4, 6–3ರ ನೇರ ಸೆಟ್‌ಗಳಿಂದ 22ನೇ ಶ್ರೇಯಾಂಕದ ಆಟಗಾರ್ತಿ ಶರಪೋವಾ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಮ್ಯಾಡಿಸನ್‌ ಕೀಸ್‌ 6–1, 6–3ರಲ್ಲಿ ಸ್ಲೊವೇಕಿಯಾದ ಡಾಮಿನಿಕಾ ಸಿಬುಲ್ಕೋವಾ ವಿರುದ್ಧ ಗೆದ್ದರು.

ಇತರ ಪಂದ್ಯಗಳಲ್ಲಿ ನವೊಮಿ ಒಸಾಕ 6–3, 2–6, 6–4ರಲ್ಲಿ ಆರ್ಯನ ಸಬಲೆಂಕಾ ಎದುರೂ, ಲೆಸ್ಯಾ ಸುರೆಂಕೊ 6–7, 7–5, 6–2ರಲ್ಲಿ ಮಾರ್ಕೆಟಾ ವೊಂಡ್ರೌಸೊವಾ ವಿರುದ್ಧವೂ ವಿಜಯಿಯಾದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !