ಬುಧವಾರ, ಅಕ್ಟೋಬರ್ 23, 2019
21 °C
ಪ್ರಜ್ಞೇಶ್‌ ಗುಣೇಶ್ವರನ್‌ಗೆ ನಿರಾಸೆ

ಅಮೆರಿಕ ಓಪನ್‌ ಟೆನಿಸ್‌: ಸೋತರೂ ಮನ ಗೆದ್ದ ಸುಮಿತ್‌ ಆಟ

Published:
Updated:
Prajavani

ನ್ಯೂಯಾರ್ಕ್‌: ಬಲಿಷ್ಠ ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್‌ ಅವರಲ್ಲಿ ಅಕ್ಷರಶಃ ಭಯ ಹುಟ್ಟಿಸಿದ್ದ ಭಾರತದ ಸುಮಿತ್‌ ನಗಾಲ್‌ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುಮಿತ್‌ ಛಲದ ಆಟಕ್ಕೆ ಸ್ವಿಟ್ಜರ್ಲೆಂಡ್‌ನ ಫೆಡರರ್‌ ಅವರೇ ಮನಸೋತಿದ್ದಾರೆ.

ಆರ್ಥರ್‌ ಆ್ಯಷೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನ ಹೋರಾಟದಲ್ಲಿ ಫೆಡರರ್‌ 4–6, 6–1, 6–2, 6–4ರಿಂದ ಗೆದ್ದರು. 2 ಗಂಟೆ 29 ನಿಮಿಷ ನಡೆದ ಈ ಹಣಾಹಣಿಯಲ್ಲಿ 22ರ ಹರೆಯದ ಸುಮಿತ್‌, ಅಂಗಳದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಫೆಡರರ್‌ ಅವರನ್ನು ಹೈರಾಣಾಗಿಸಿದರು.

ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಪುರುಷರ ಸಿಂಗಲ್ಸ್‌ನಲ್ಲಿ ಮುಖ್ಯ ಸುತ್ತಿಗೆ ಲಗ್ಗೆ ಇಟ್ಟಿದ್ದ ಸುಮಿತ್‌, ಮೊದಲ ಸೆಟ್‌ ಗೆದ್ದು ಭರವಸೆ ಮೂಡಿಸಿದ್ದರು. ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಪ್ರಧಾನ ಹಂತದಲ್ಲಿ ಸೆಟ್‌ವೊಂದನ್ನು ಜಯಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಭಾಜನರಾದರು. ಸೋಮದೇವ್‌ ದೇವವರ್ಮನ್‌, ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಅವರು ಮೊದಲು ಈ ಸಾಧನೆ ಮಾಡಿದ್ದರು.

ಟೂರ್ನಿಯಲ್ಲಿ ಐದು ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ ಫೆಡರರ್‌, ಎರಡನೇ ಸೆಟ್‌ನಲ್ಲಿ ಲಯ ಕಂಡುಕೊಂಡರು. ಶರವೇಗದ ಸರ್ವ್‌ಗಳ ಮೂಲಕ ಭಾರತದ ಆಟಗಾರನನ್ನು ತಬ್ಬಿಬ್ಬುಗೊಳಿಸಿದ ಅವರು 1–1ರಲ್ಲಿ ಸಮಬಲ ಮಾಡಿಕೊಂಡರು. ನಂತರದ ಎರಡು ಸೆಟ್‌ಗಳಲ್ಲೂ ಫೆಡರರ್‌ ಪ್ರಾಬಲ್ಯ ಮೆರೆದರು. ಅವರು 12 ಏಸ್‌ಗಳನ್ನು ಸಿಡಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 190ನೇ ಸ್ಥಾನದಲ್ಲಿರುವ ಸುಮಿತ್‌, ನಾಲ್ಕನೇ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ಫೆಡರರ್‌ ಎದುರು ಸೋತರೂ ಕೂಡ ಸುಮಿತ್‌ ₹41.46 ಲಕ್ಷ ಜೇಬಿಗಿಳಿಸಿಕೊಂಡರು. ಅಮೆರಿಕ ಓಪನ್‌ನ ಮೊದಲ ಸುತ್ತಿನಲ್ಲಿ ಸೋತವರಿಗೆ ಇಷ್ಟು ಮೊತ್ತ ನೀಡಲಾಗುತ್ತದೆ.

ಪ್ರಜ್ಞೇಶ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ವಿಭಾಗದ ಮತ್ತೊಂದು ಪಂದ್ಯದಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ ನಿರಾಸೆ ಕಂಡರು.

ರಷ್ಯಾದ ಡೇನಿಯಲ್‌ ಮೆಡ್ವೆಡೇವ್‌ 6–4, 6–1, 6–2 ನೇರ ಸೆಟ್‌ಗಳಿಂದ ಭಾರತದ ಆಟಗಾರನನ್ನು ಮಣಿಸಿದರು. ಈ ಪಂದ್ಯದಲ್ಲಿ ಪ್ರಜ್ಞೇಶ್‌ ಎಂಟು ‘ಡಬಲ್‌ ಫಾಲ್ಟ್‌’ಗಳನ್ನು ಮಾಡಿದರು.‌‌

ಜೊಕೊವಿಚ್‌ ಶುಭಾರಂಭ
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌ ಜೊಕೊವಿಚ್‌ ಶುಭಾರಂಭ ಮಾಡಿದರು.

ಮೊದಲ ಸುತ್ತಿನಲ್ಲಿ ಸರ್ಬಿಯಾದ ಜೊಕೊವಿಚ್‌ 6–4, 6–1, 6–4ರಲ್ಲಿ ಸ್ಪೇನ್‌ನ ರಾಬರ್ಟೊ ಕಾರ್ಬಲ್ಲಸ್‌ ಬಯೆನಾ ಎದುರು ಗೆದ್ದರು.

ಇತರ ಪ್ರಮುಖ ಪಂದ್ಯಗಳಲ್ಲಿ ಸ್ಟಾನ್‌ ವಾವ್ರಿಂಕ 6–3, 7–6, 4–6, 6–3ರಲ್ಲಿ ಜಾನ್ನಿಕ್‌ ಸಿನ್ನರ್‌ ಎದುರೂ, ಡೇವಿಡ್‌ ಗೊಫಿನ್‌ 6–3, 3–6, 6–4, 6–0ರಲ್ಲಿ ಕೊರೆಂಟಿನ್‌ ಮೌಟೆಟ್‌ ಮೇಲೂ, ಗ್ರಿಗರ್‌ ಡಿಮಿಟ್ರೊವ್‌ 6–1, 6–7, 6–4, 6–3ರಲ್ಲಿ ಆ್ಯಂಡ್ರೆಸ್‌ ಸೆಪ್ಪಿ ವಿರುದ್ಧವೂ, ವುವಾನ್‌ ಇಗ್ನಾಷಿಯೊ ಲೊಂಡೆರೊ 3–6, 6–1, 7–6, 7–5ರಲ್ಲಿ ಸ್ಯಾಮ್‌ ಕ್ವೆರಿ ಎದುರೂ, ಲುಕಾಸ್‌ ಪೌವಿಲ್‌ 6–3, 4–6, 6–4, 6–4ರಲ್ಲಿ ಫಿಲಿಪ್‌ ಕೊಹ್ಲಿಶ್ರಿಬರ್‌ ವಿರುದ್ಧವೂ ವಿಜಯಿಯಾದರು.

ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ 6–1, 6–1 ನೇರ ಸೆಟ್‌ಗಳಿಂದ ರಷ್ಯಾದ ಮರಿಯಾ ಶರಪೋವಾ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ವೀನಸ್‌ ವಿಲಿಯಮ್ಸ್‌ 6–1, 6–0ರಲ್ಲಿ ಜೆಂಗ್‌ ಸಾಸೈ ಎದುರೂ, ಎಲಿನ ಸ್ವಿಟೋಲಿನಾ 6–1, 7–5ರಲ್ಲಿ ವಿಟ್ನಿ ಒಸುಯಿಗ್ವೆ ಮೇಲೂ, ಕ್ರಿಸ್ಟಿನಾ ಮ್ಲಾಡೆನೊವಿಚ್‌ 7–5, 0–6, 6–4ರಲ್ಲಿ ಏಂಜಲಿಕ್‌ ಕೆರ್ಬರ್‌ ವಿರುದ್ಧವೂ, ಮ್ಯಾಡಿಸನ್‌ ಕೀಸ್‌ 7–5, 6–0ರಲ್ಲಿ ಮಿಸಾಕಿ ಡೊಯಿ ವಿರುದ್ಧವೂ ಗೆದ್ದರು.

*
ನಗಾಲ್‌ ತುಂಬಾ ಚೆನ್ನಾಗಿ ಆಡಿದರು. ಪಾದರಸದಂತಹ ಚಲನೆಯ ಮೂಲಕ ಚೆಂಡನ್ನು ರಿಟರ್ನ್‌ ಮಾಡುತ್ತಿದ್ದುದು ಗಮನ ಸೆಳೆಯಿತು. ಅವರಿಗೆ ಉಜ್ವಲ ಭವಿಷ್ಯವಿದೆ.
-ರೋಜರ್‌ ಫೆಡರರ್‌, ಸ್ವಿಟ್ಜರ್ಲೆಂಡ್‌ನ ಆಟಗಾರ 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)