ನ್ಯೂಯಾರ್ಕ್: ಸ್ಪೇನ್‌ನ ಟೆನಿಸ್ ತಾರೆ ಕಾರ್ಲೋಸ್ ಅಲ್ಕರಾಜ್ ಅವರು ಮಂಗಳವಾರ ತಡರಾತ್ರಿ ಅಮೆರಿಕ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು. ಈ ಮೂಲಕ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಸತತ 15 ಪಂದ್ಯಗಳಿಗೆ ಗೆಲುವಿನ ಸರಣಿಯನ್ನು ವಿಸ್ತರಿಸಿದರು.
ಮೂರನೇ ಶ್ರೇಯಾಂಕದ ಅಲ್ಕರಾಜ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 6-2, 4-6, 6-3, 6-1ರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಲೀ ಟು ಅವರನ್ನು ಹಿಮ್ಮೆಟ್ಟಿಸಿ 64ರ ಘಟ್ಟಕ್ಕೆ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಗುರುವಾರ ನೆದರ್ಲೆಂಡ್ಸ್‌ನ ಬೋಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್ ಅವರನ್ನು ಎದುರಿಸಲಿದ್ದಾರೆ.
ಪ್ರಸ್ತುತ ಋತುವಿನ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಸ್ಪೇನ್ 21 ವರ್ಷ ವಯಸ್ಸಿನ ಆಟಗಾರ ಐದನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ. 2022ರ ಚಾಂಪಿಯನ್ ಆಗಿರುವ ಅಲ್ಕರಾಜ್ ಈ ಬಾರಿಯೂ ಪ್ರಶಸ್ತಿ ಗೆದ್ದರೆ ಓಪನ್ ಯುಗದಲ್ಲಿ ಒಂದೇ ವರ್ಷ ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ ವಿಶ್ವದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗುವರು. ಈ ಹಿಂದೆ ರಾಡ್ ಲೇವರ್ ಮತ್ತು ರಫೆಲ್ ನಡಾಲ್ ಈ ಸಾಧನೆ ಮಾಡಿದ್ದರು.
ಆರಂಭಿಕ ಹಿನ್ನಡೆಯಿಂದ ಚೇತರಿಸಿ ಕೊಂಡ ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್ ಎರಡನೇ ಸುತ್ತಿಗೆ ಮುನ್ನಡೆದರು. ಆರಂಭಿಕ ಸುತ್ತಿನಲ್ಲಿ ಇಟಲಿಯ ಆಟಗಾರ 2-6, 6-2, 6-1, 6-2ರಿಂದ ಆತಿಥೇಯ ಅಮೆರಿಕದ ಮೆಕೆಂಜಿ ಮೆಕ್ ಡೊನಾಲ್ಡ್ ಅವರನ್ನು ಹಿಮ್ಮೆಟ್ಟಿಸಿದರು.
ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿರುವ 23 ವರ್ಷ ವಯಸ್ಸಿನ ಸಿನ್ನರ್ ವಾರದ ಹಿಂದೆ ಸಿನ್ಸಿನಾಟಿ ಓಪನ್ ಎಟಿಪಿ ಮಾಸ್ಟರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು. ಡೋಪಿಂಗ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಇಂಟೆಗ್ರಿಟಿ ಏಜೆನ್ಸಿಯಿಂದ (ಐಟಿಐಎ) ನಿರ್ದೋಷಿ ಎಂದು ತೀರ್ಪು ಪ್ರಕಟವಾದ ಬಳಿಕ ಇಲ್ಲಿ ಕಣಕ್ಕೆ ಇಳಿದಿದ್ದಾರೆ. ಅವರು ಮುಂದಿನ ಸುತ್ತಿನಲ್ಲಿ ಅಮೆರಿಕದ ಅಲೆಕ್ಸ್ ಮೈಕೆಲ್‌ಸೆನ್ ರನ್ನು ಎದುರಿಸಲಿದ್ದಾರೆ.
ಐದನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೇವ್ (ರಷ್ಯಾ) 6-3, 3-6, 6-3, 6-1ರಿಂದ ದುಸಾನ್ ಲಾಜೊವಿಕ್ ವಿರುದ್ಧ; 10ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ (ಆಸ್ಟ್ರೇಲಿಯಾ) 6-3, 6-4, 5-7, 6-4ರಿಂದ ಅಮೆರಿಕದ ಮಾರ್ಕೋಸ್ ಗಿರಾನ್ ವಿರುದ್ಧ, ಆತಿಥೇಯ ದೇಶದ ಟಾಮಿ ಪೌಲ್ 6-4, 6-2, 5-7, 6-2ರಿಂದ ಇಟಲಿಯ ಲೊರೆಂಜೊ ಸೋನೆಗೊ ವಿರುದ್ಧ ಗೆಲುವು ಸಾಧಿಸಿದರು.
ಗ್ರೀಸ್‌ನ ಸ್ಟೆಫಾನೊಸ್ ಸಿಟ್ಸಿಪಾಸ್ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಆಸ್ಟ್ರೇಲಿಯಾದ ಥಾನಾಸಿ ಕೊಕ್ಕಿ ನಾಕಿಸ್ ಅವರು 7-6 (7/5), 4-6, 6-3, 7-5ರಿಂದ 11ನೇ ಶ್ರೇಯಾಂಕದ ಸಿಟ್ಸಿಪಾಸ್‌ಗೆ ಆಘಾತ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.