ಅಮೆರಿಕ ಓಪನ್ ಟೆನಿಸ್ ಟೂರ್ನಿ: ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಒಸಾಕ

ನ್ಯೂಯಾರ್ಕ್ (ಎಎಫ್ಪಿ/ರಾಯಿಟರ್ಸ್): ಜಪಾನ್ನ ಆಟಗಾರ್ತಿ ನವೊಮಿ ಒಸಾಕ, ಭಾನುವಾರ ಆ್ಯರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.
ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದ ಅವರು, ಈ ಸಾಧನೆ ಮಾಡಿದ ಜಪಾನ್ನ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದರು.
ಫೈನಲ್ನಲ್ಲಿ 20 ವರ್ಷ ವಯಸ್ಸಿನ ಒಸಾಕ, ಅಮೆರಿಕದ ಸೆರೆನಾ ವಿಲಿಯಮ್ಸ್ಗೆ ಆಘಾತ ನೀಡಿದರು. ಸೆರೆನಾ ಸಾಧನೆಗಳಿಂದ ಪ್ರೇರಿತಗೊಂಡು ಟೆನಿಸ್ ಕಲಿಯಲು ಮುಂದಾಗಿದ್ದ ಒಸಾಕ, ಮಹತ್ವದ ಹೋರಾಟದಲ್ಲಿ ತನ್ನ ನೆಚ್ಚಿನ ಆಟಗಾರ್ತಿಯನ್ನು ಸೋಲಿಸಿ ಟ್ರೋಫಿಗೆ ಮುತ್ತಿಕ್ಕಿದಾಗ ಕ್ರೀಡಾಂಗಣದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು. ಮಗಳ ಸಾಧನೆ ಕಂಡು ಒಸಾಕ ಪೋಷಕರು ಖುಷಿಯಿಂದ ಬಿಕ್ಕಿ ಬಿಕ್ಕಿ ಅತ್ತರು. ಗ್ಯಾಲರಿಯಲ್ಲಿ ಕುಳಿತಿದ್ದ ಜಪಾನ್ನ ಟೆನಿಸ್ ಪ್ರಿಯರ ಕಣ್ಣುಗಳೂ ತೇವಗೊಂಡವು.
ಒಸಾಕ ಗೆದ್ದಿದ್ದು ಹೀಗೆ...
ಮೊದಲ ಸೆಟ್: 6–2
* ಆರಂಭದ ಎರಡು ಗೇಮ್ಗಳಲ್ಲಿ ಉಭಯ ಆಟಗಾರ್ತಿಯರು ಸರ್ವ್ ಕಾಪಾಡಿಕೊಂಡರು.
* ಮೂರನೇ ಗೇಮ್ನ ವೇಳೆ ಸೆರೆನಾ ‘ಡಬಲ್ ಫಾಲ್ಟ್’ ಎಸಗಿದರು. ಹೀಗಾಗಿ ಒಸಾಕ 2–1ರ ಮುನ್ನಡೆ ಗಳಿಸಿದರು. ನಾಲ್ಕನೇ ಗೇಮ್ನಲ್ಲಿ ಅಮೋಘ ಏಸ್ಗಳನ್ನು ಸಿಡಿಸಿದ ಜಪಾನ್ನ ಆಟಗಾರ್ತಿ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿಕೊಂಡರು.
* ಐದನೇ ಗೇಮ್ನಲ್ಲಿ ಸೆರೆನಾ ಹಲವು ತಪ್ಪುಗಳನ್ನು ಮಾಡಿದರು. ಎದುರಾಳಿಯ ಸರ್ವ್ ಮುರಿದ ಒಸಾಕ ಗೆಲುವಿನ ಹಾದಿ ಸುಗಮ ಮಾಡಿಕೊಂಡರು.
* ಆರನೇ ಗೇಮ್ನಲ್ಲಿ ಅಮೋಘ ಸರ್ವ್ಗಳ ಮೂಲಕ ಒಸಾಕ ಪ್ರಾಬಲ್ಯ ಮೆರೆದರು.
* ಏಳನೇ ಗೇಮ್ನಲ್ಲಿ ಸರ್ವ್ ಕಾಪಾಡಿಕೊಂಡ ಸೆರೆನಾ ಹಿನ್ನಡೆಯನ್ನು 2–5ಕ್ಕೆ ತಗ್ಗಿಸಿಕೊಂಡರು.
* ಎಂಟನೇ ಗೇಮ್ನಲ್ಲಿ ಶರವೇಗದ ಸರ್ವ್ ಮತ್ತು ಫೋರ್ಹ್ಯಾಂಡ್ ಹೊಡೆತಗಳ ಮೂಲಕ ಅಮೆರಿಕದ ಆಟಗಾರ್ತಿಯನ್ನು ತಬ್ಬಿಬ್ಬುಗೊಳಿಸಿದ ಒಸಾಕ ಸಂಭ್ರಮಿಸಿದರು.
ಎರಡನೇ ಸೆಟ್ 6–4
* ಮೊದಲ ಗೇಮ್ನಲ್ಲಿ ಸರ್ವ್ ಉಳಿಸಿಕೊಂಡ ಸೆರೆನಾ 1–0 ಮುನ್ನಡೆ ಗಳಿಸಿದರು.
* ಎರಡನೇ ಗೇಮ್ನಲ್ಲಿ ಮೋಡಿ ಮಾಡಿದ ಒಸಾಕ 1–1ರ ಸಮಬಲಕ್ಕೆ ಕಾರಣರಾದರು.
* ಮೂರನೇ ಗೇಮ್ನಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಇದರ ನಡುವೆಯೂ 40–30ರಿಂದ ಮುನ್ನಡೆ ಪಡೆದ ಸೆರೆನಾ ನಂತರ ಚುರುಕಿನ ಡ್ರಾಪ್ ಮೂಲಕ ಪಾಯಿಂಟ್ ಗಳಿಸಿ ಗೇಮ್ ಜಯಿಸಿದರು.
* ನಾಲ್ಕನೇ ಗೇಮ್ನಲ್ಲಿ ಎದುರಾಳಿಯ ಸರ್ವ್ ಮುರಿದ ಸೆರೆನಾ 3–1ರ ಮುನ್ನಡೆ ಪಡೆದರು.
* ಐದನೇ ಗೇಮ್ನಲ್ಲಿ ತಿರುಗೇಟು ನೀಡಿದ ಒಸಾಕ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿಕೊಂಡರು.
* ಆರನೇ ಗೇಮ್ನಲ್ಲೂ ಒಸಾಕ ಅಬ್ಬರಿಸಿದರು. ಹೀಗಾಗಿ 3–3ರ ಸಮಬಲ ಕಂಡುಬಂತು.
* ಏಳನೇ ಗೇಮ್ನಲ್ಲಿ ನವೊಮಿ, ಸೆರೆನಾ ಸರ್ವ್ ಮುರಿದು 4–3ರ ಮುನ್ನಡೆ ಪಡೆದರು.
* ಎಂಟನೇ ಗೇಮ್ ವೇಳೆ ಸೆರೆನಾ, ಹತಾಶೆಯಿಂದ ರ್ಯಾಕೆಟ್ ಅನ್ನು ನೆಲಕ್ಕೆ ಬಡಿದು ಅದನ್ನು ಮುರಿದು ಹಾಕಿದರು. ಅಶಿಸ್ತು ತೋರಿದ ಕಾರಣ ಅಂಗಳದ ಅಂಪೈರ್, ಸೆರೆನಾಗೆ ‘ಗೇಮ್ ಪೆನಾಲ್ಟಿ’ ವಿಧಿಸಿದರು. ಹೀಗಾಗಿ ಒಸಾಕ ಮುನ್ನಡೆ 5–3ಕ್ಕೆ ಹೆಚ್ಚಿತು.
* ಒಂಬತ್ತನೇ ಗೇಮ್ನಲ್ಲಿ ಸೆರೆನಾ, ಸರ್ವ್ ಕಾಪಾಡಿಕೊಂಡು ಹಿನ್ನಡೆಯನ್ನು 4–5ಕ್ಕೆ ತಗ್ಗಿಸಿಕೊಂಡರು.
* 10ನೇ ಗೇಮ್ನಲ್ಲಿ ಮಿಂಚಿದ ಒಸಾಕ ಖುಷಿಯ ಕಡಲಲ್ಲಿ ತೇಲಿದರು.
ನವೊಮಿ ಪರಿಚಯ
ಜನನ: ಅಕ್ಟೋಬರ್ 16, 1997
ಸ್ಥಳ: ಒಸಾಕ, ಜಪಾನ್
ವಾಸವಾಗಿರುವುದು: ಬೋಕಾ ರ್ಯಾಟನ್, ಫ್ಲೋರಿಡಾ.
ಡಬ್ಲ್ಯುಟಿಎ ರ್ಯಾಂಕಿಂಗ್: 19
ವೃತ್ತಿಬದುಕಿನಲ್ಲಿ ಗೆದ್ದ ಪ್ರಶಸ್ತಿಗಳು: 2 (ಅಮೆರಿಕ ಓಪನ್ ಮತ್ತು ಇಂಡಿಯನ್ ವೆಲ್ಸ್).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.