ಸೆಮಿಫೈನಲ್‌ಗೆ ಮುನ್ನಡೆದ ಅಂಕಿತಾ

ಶುಕ್ರವಾರ, ಮೇ 24, 2019
25 °C
ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿ

ಸೆಮಿಫೈನಲ್‌ಗೆ ಮುನ್ನಡೆದ ಅಂಕಿತಾ

Published:
Updated:
Prajavani

ನವದೆಹಲಿ: ಆರಂಭಿಕ ಸೆಟ್‌ನಲ್ಲಿ ನಿರಾಸೆ ಕಂಡರೂ ಎದೆಗುಂದದೆ ಛಲದಿಂದ ಹೋರಾಡಿದ ಭಾರತದ ಅಂಕಿತಾ ರೈನಾ, ಚೀನಾದ ಲುವಾನ್‌ನಲ್ಲಿ ಆಯೋಜನೆಯಾಗಿರುವ ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಅಂಕಿತಾ 2–6, 6–4, 7–5ರಲ್ಲಿ ಹಾಂಕಾಂಗ್‌ನ ಯುಡೈಸ್‌ ವಾಂಗ್ ಚೊಂಗ್‌ ಅವರನ್ನು ಸೋಲಿಸಿದರು. ಈ ಹೋರಾಟ ಸುಮಾರು ಎರಡು ಗಂಟೆ ಕಾಲ ನಡೆಯಿತು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಅಂಕಿತಾ ಮೊದಲ ಸೆಟ್‌ನಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲರಾದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 497ನೇ ಸ್ಥಾನದಲ್ಲಿರುವ ಚೊಂಗ್‌, ಶರವೇಗದ ಸರ್ವ್‌ ಮತ್ತು ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಭಾರತದ ಆಟಗಾರ್ತಿಗೆ ಆಘಾತ ನೀಡಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 175ನೇ ಸ್ಥಾನದಲ್ಲಿರುವ ಅಂಕಿತಾ ಎರಡನೇ ಸೆಟ್‌ನಲ್ಲಿ ಪುಟಿದೆದ್ದರು. ಚೊಂಗ್‌ ಕೂಡಾ ಗುಣಮಟ್ಟದ ಆಟ ಆಡಿದರು. ಹೀಗಾಗಿ 4–4 ಸಮಬಲ ಕಂಡುಬಂತು. ಒಂಬತ್ತನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ಭಾರತದ ಆಟಗಾರ್ತಿ, ಮರು ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡು ಸಂಭ್ರಮಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲೂ ಉಭಯ ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಒಂದು ಹಂತದಲ್ಲಿ ಇಬ್ಬರೂ 5–5ರಲ್ಲಿ ಸಮಬಲ ಹೊಂದಿದ್ದರು. ನಂತರ ಅಂಕಿತಾ ಮೇಲುಗೈ ಸಾಧಿಸಿದರು. 11 ಮತ್ತು 12ನೇ ಗೇಮ್‌ಗಳಲ್ಲಿ ಮಿಂಚಿನ ಸಾಮರ್ಥ್ಯ ತೋರಿದ ಭಾರತದ ಆಟಗಾರ್ತಿ ಗೆಲುವಿನ ತೋರಣ ಕಟ್ಟಿದರು. ಈ ಪಂದ್ಯದಲ್ಲಿ ಅಂಕಿತಾ ಒಟ್ಟು 88 ಪಾಯಿಂಟ್ಸ್‌ ಗೆದ್ದರು.

ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಅಂಕಿತಾ, ಚೀನಾದ ಏಳನೇ ಶ್ರೇಯಾಂಕದ ಆಟಗಾರ್ತಿ ಶುಯೂ ಮಾ ಎದುರು ಸೆಣಸಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !