ಏಷ್ಯಾಕಪ್‌ ಸುತ್ತ ವಿಶ್ವಕಪ್‌ ಚಿತ್ತ

ಮಂಗಳವಾರ, ಏಪ್ರಿಲ್ 23, 2019
32 °C

ಏಷ್ಯಾಕಪ್‌ ಸುತ್ತ ವಿಶ್ವಕಪ್‌ ಚಿತ್ತ

Published:
Updated:
Prajavani

ಚೀನಾ, ಜಪಾನ್‌, ದಕ್ಷಿಣ ಕೊರಿಯಾ ಮುಂತಾದ ಪ್ರಬಲ ರಾಷ್ಟ್ರಗಳ ಜೊತೆಯಲ್ಲಿ ಆಸ್ಟ್ರಿಯಾ, ಈಜಿಪ್ಟ್‌, ಹಾಂಕಾಂಗ್‌ ಮುಂತಾದ ರಾಷ್ಟ್ರಗಳು ಕೂಡ ವಿಶ್ವಕಪ್‌ ಟೇಬಲ್‌ ಟೆನಿಸ್ ಟೂರ್ನಿಯ ಸಾಧಕ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. ಈ ಪಟ್ಟಿಯಲ್ಲಿ ಹೆಸರಿಲ್ಲದ ಭಾರತ ಈಗ ಮರಳಿ ಯತ್ಮ ಮಾಡಲು ಮುಂದಾಗಿದೆ.

ವಿಶ್ವಕಪ್‌ನಲ್ಲಿ ಸ್ಪರ್ಧಿಸಬೇಕಾದರೆ ಏಷ್ಯಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಭಾರತ ಏಷ್ಯಾಕಪ್‌ನಲ್ಲೇ ಪ್ರತಿ ಬಾರಿ ಮುಗ್ಗರಿಸುತ್ತಿದೆ. ಹೀಗಾಗಿ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಗಳಿಸುವುದೇ ದೊಡ್ಡ ಸಾಹಸವಾಗಿ ಪರಿಣಮಿಸುತ್ತಿದೆ. ಏಪ್ರಿಲ್‌ 21ರಿಂದ 28ರ ವರೆಗೆ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಏಷ್ಯಾಕಪ್‌ ಬುನಾದಿಯಾಗುವುದೇ ಎಂಬ ಕುತೂಹಲ ಗರಿಗೆದರಿದೆ.

ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಜಪಾನ್‌ನ ಯೊಕೊಹಮಾದಲ್ಲಿ ಆತಿಥ್ಯ. ಅಲ್ಲಿ ಭಾರತದ ಸವಾಲನ್ನು ಎತ್ತಿಹಿಡಿಯಲು ಸಜ್ಜಾದವರು ಗಣಶೇಖರನ್‌ ಸತ್ಯನ್‌, ಅಚಂತಾ ಶರತ್ ಕಮಲ್‌ ಮತ್ತು ಮಣಿಕಾ ಭಾತ್ರಾ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಗುಣಶೇಖರನ್‌ 28ನೇ ಸ್ಥಾನದಲ್ಲಿದ್ದರೆ, ಅಚಂತಾ ಶರತ್ ಕಮಲ್ ಅವರ ಸ್ಥಾನ 37. ಮೊದಲ ಸ್ಥಾನದಲ್ಲಿರುವ ಚೀನಾದ ಫಾನ್ ಜೆಂಡೊಂಗ್‌, ನಾಲ್ಕನೇ ಸ್ಥಾನದಲ್ಲಿರುವ ಜಪಾನ್‌ನ ಹರಿಮೊಟೊ ತೊಮೊಕಜು, ಆರನೇ ಸ್ಥಾನ ಕೊರಿಯಾದ ಲೀ ಸಂಗ್ಜು ಮತ್ತು ಎಂಟನೇ ಸ್ಥಾನ ಜಪಾನ್‌ನ ನಿವಾ ಕೊಕಿ ಏಷ್ಯಾಕಪ್‌ನ ಪ್ರಮುಖ ಆಟಗಾರರು. ‌‌‌‌‌‌‌‌‌‌‌‌‌‌

ಮಹಿಳಾ ಸಿಂಗಲ್ಸ್‌ನಲ್ಲಿ ಮಣಿಕಾ ಭಾತ್ರ 56ನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಚೀನಾದ ಜೂ ಯೂಲಿಂಗ್‌, ಮೂರನೇ ಸ್ಥಾನದಲ್ಲಿರುವ ಚೀನಾದ ಚೆನ್ ಮೆಂಗ್‌ ಅವರೊಂದಿಗೆ ಆರನೇ ಸ್ಥಾನದಲ್ಲಿರುವ ಜಪಾನ್‌ನ ಇಶಿಕಾವ ಕಸುಮಿ ಅವರಿಗೂ ವಿಶ್ವಕಪ್‌ ಟೂರ್ನಿ ಮೇಲೆಯೇ ಕಣ್ಣು.

ವಿಶ್ವಕಪ್ ಟೂರ್ನಿ ಮೊದಲ ಕೆಲವು ವರ್ಷ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಾತ್ರ ನಡೆಯುತ್ತಿತ್ತು. ಈ ವಿಭಾಗದಲ್ಲಿ 1980ರಿಂದ ಸ್ಪರ್ಧೆಗಳು ನಡೆಯುತ್ತಿದ್ದು ಈವರೆಗೆ 39 ಬಾರಿ ಪದಕಗಳನ್ನು ಬೇಟೆಯಾಡಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗ 1996ರಲ್ಲಿ ಆರಂಭಗೊಂಡಿತು. ಈ ವಿಭಾಗದ ಸ್ಪರ್ಧೆಗಳು ಇಲ್ಲಿಯವರೆಗೆ 22 ಬಾರಿ ನಡೆದಿವೆ. 1990ರಲ್ಲಿ ಪುರುಷರ ಮತ್ತು ಮಹಿಳೆಯರ ಡಬಲ್ಸ್, ತಂಡ ವಿಭಾಗದಲ್ಲೂ ಸ್ಪರ್ಧೆಗಳು ಆರಂಭಗೊಂಡವು.

ಈ ಎಲ್ಲ ಸಂದರ್ಭದಲ್ಲೂ ಭಾರತದ ಸಾಧನೆ ಶೂನ್ಯವಾಗಿತ್ತು. ವಿಶ್ವಕಪ್‌ಗೆ ಅರ್ಹತೆ ಗಳಿಸಬೇಕಾದರೆ ಏಷ್ಯಾಕಪ್‌ನಲ್ಲಿ ಸಾಧನೆ ಮಾಡಬೇಕು. ಈ ಟೂರ್ನಿಯಲ್ಲೂ ಭಾರತದ ಸಾಧನೆ ನಗಣ್ಯ. ಚೀನಾ, ಉತ್ತರ ಕೊರಿಯಾ, ಹಾಂಕಾಂಗ್‌, ಜಪಾನ್, ದಕ್ಷಿಣ ಕೊರಿಯಾ ಮುಂತಾದ ಕಡೆಗಳ ಆಟಗಾರರು ಪದಕಗಳನ್ನು ಬಾಚುತ್ತಿದ್ದರೆ ಭಾರತಕ್ಕೆ ಈ ವರೆಗೆ ಬಂದದ್ದು ಎರಡೇ ಎರಡು ಪದಕಗಳು. ಒಂದು ಬೆಳ್ಳಿ, ಒಂಚು ಕಂಚು.

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪುರುಷರ ತಂಡ ಐತಿಹಾಸಿಕ ಕಂಚಿನ ಪದಕ ಗಳಿಸಿದ್ದು, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮೂರು ಚಿನ್ನ ಗದ್ದಿರುವುದು, ಒಲಿಂಪಿಕ್ಸ್‌ನಲ್ಲಿ ಗಳಿಸಿರುವ ಅನುಭವ ಇತ್ಯಾದಿ ಈ ಬಾರಿ ಭಾರತದ ಭರವಸೆಗೆ ಊರುಗೋಲಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಗೆದ್ದ ಮಣಿಕಾ ಭಾತ್ರಾ ಹಾಗೂ ತಲಾ ಒಂದೊಂದು ಚಿನ್ನ ಮತ್ತು ಬೆಳ್ಳಿ ಗಳಿಸಿದ ಅಚಂತಾ ಶರತ್ ಕಮಲ್‌ ಈಗ ದೇಶದ ಭರವಸೆಯ ಮಿಂಚಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !