ಏಷ್ಯನ್‌ ಕ್ರೀಡಾಕೂಟ ಟೆನಿಸ್‌: ರೋಹನ್‌–ದಿವಿಜ್‌ಗೆ ಚಿನ್ನ

7

ಏಷ್ಯನ್‌ ಕ್ರೀಡಾಕೂಟ ಟೆನಿಸ್‌: ರೋಹನ್‌–ದಿವಿಜ್‌ಗೆ ಚಿನ್ನ

Published:
Updated:
Deccan Herald

ಪಲೆಂಬಂಗ್‌ : ಅಪೂರ್ವ ಆಟ ಆಡಿದ ಭಾರತದ ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಅವರು ಶುಕ್ರವಾರ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಜೆಎಸ್‌ಸಿ ಟೆನಿಸ್‌ ಅಂಗಳದಲ್ಲಿ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಕರ್ನಾಟಕದ ರೋಹನ್‌ ಮತ್ತು ದಿವಿಜ್‌ 6–3, 6–4ರ ನೇರ ಸೆಟ್‌ಗಳಿಂದ ಕಜಕಸ್ತಾನದ ಅಲೆಕ್ಸಾಂಡರ್‌ ಬಬ್ಲಿಕ್‌ ಮತ್ತು ಡೆನಿಸ್‌ ಯೆವಸೆಯೆವ್‌ ಅವರನ್ನು ಮಣಿಸಿದರು. ಈ ಹೋರಾಟ 52 ನಿಮಿಷ ನಡೆಯಿತು.

ಕೂಟದ ಪುರುಷರ ಡಬಲ್ಸ್‌ನಲ್ಲಿ ಭಾರತ ಜಯಿಸಿದ ನಾಲ್ಕನೆ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ (2002 ಮತ್ತು 2006) ಹಾಗೂ ಸೋಮದೇವ್‌ ದೇವವರ್ಮನ್‌ ಮತ್ತು ಸನಮ್‌ ಸಿಂಗ್‌ (2010) ಚಿನ್ನದ ಸಾಧನೆ ಮಾಡಿದ್ದರು.

2014ರಲ್ಲಿ ಇಂಚೆನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಸಾಕೇತ್‌ ಮೈನೇನಿ ಮತ್ತು ಸನಮ್‌ ಸಿಂಗ್‌ ಬೆಳ್ಳಿಯ ಪದಕ ಜಯಿಸಿದ್ದರು.

ಕೂಟದಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ರೋಹನ್‌ ಮತ್ತು ದಿವಿಜ್‌ ಮೊದಲ ಸೆಟ್‌ನಲ್ಲಿ ಅಬ್ಬರಿಸಿದರು. ಶರವೇಗದ ಸರ್ವ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಗಳನ್ನು ಕಂಗೆಡಿಸಿ 4–1ರಿಂದ ಮುನ್ನಡೆ ಗಳಿಸಿದರು. ನಂತರ ಪುಟಿದೆದ್ದ ಕಜಕಸ್ತಾನದ ಜೋಡಿ ಹಿನ್ನಡೆಯನ್ನು 3–5ಕ್ಕೆ ತಗ್ಗಿಸಿಕೊಂಡಿತು.

ಇದರಿಂದ ಭಾರತದ ಆಟಗಾರರು ವಿಚಲಿತರಾಗಲಿಲ್ಲ. ಒಂಬತ್ತನೆ ಗೇಮ್‌ನಲ್ಲಿ ರೋಹನ್‌ ಮಿಂಚಿನ ಸರ್ವ್‌ ಮಾಡಿದರು. ಇದರೊಂದಿಗೆ ಭಾರತದ ಜೋಡಿ 25 ನೇ ನಿಮಿಷದಲ್ಲಿ ಸೆಟ್‌ ಗೆದ್ದಿತು.

ಎರಡನೆ ಸೆಟ್‌ನ ಆರಂಭದಲ್ಲಿ ಬಬ್ಲಿಕ್‌ ಮತ್ತು ಡೆನಿಸ್‌ ಗುಣಮಟ್ಟದ ಆಟ ಆಡಿದರು. ಹೀಗಾಗಿ 3–3ರಲ್ಲಿ ಸಮಬಲ ಕಂಡುಬಂತು. ಈ ಹಂತದಲ್ಲಿ ರೋಹನ್‌ ಮತ್ತು ದಿವಿಜ್‌ ಅಬ್ಬರಿಸಿದರು. ಏಳನೆ ಗೇಮ್‌ನಲ್ಲಿ ಎದುರಾಳಿಗಳ ಸರ್ವ್‌ ಮುರಿದ ಭಾರತದ ಆಟಗಾರರು ಮರು ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡು 5–3ರ ಮುನ್ನಡೆ ಪಡೆದರು. ಈ ಮೂಲಕ ಚಿನ್ನದ ಪದಕದ ಹಾದಿಯನ್ನು ಸುಗಮ ಮಾಡಿಕೊಂಡರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಬಬ್ಲಿಕ್‌ ಮತ್ತು ಡೆನಿಸ್‌ ಹಲವು ತಪ್ಪುಗಳನ್ನು ಮಾಡಿದರು. ಬಳಿಕ ಮತ್ತೆ ಪುಟಿದೆದ್ದ ಅವರು ಒಂಬತ್ತನೆ ಗೇಮ್‌ ಜಯಿಸಿ ಹಿನ್ನಡೆಯನ್ನು 4–5ಕ್ಕೆ ಇಳಿಸಿಕೊಂಡರು.

10ನೆ ಗೇಮ್‌ನಲ್ಲಿ ರೋಹನ್‌ ಮತ್ತು ದಿವಿಜ್‌ ಆಕ್ರಮಣಕಾರಿ ಆಟ ಆಡಿದರು. ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ ಮತ್ತು ಚುರುಕಿನ ಡ್ರಾಪ್‌ಗಳ ಮೂಲಕ ಗೇಮ್‌ ಕೈವಶ ಮಾಡಿಕೊಂಡು ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !