ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವೆರೆವ್‌ ಮುಡಿಗೆ ಚೊಚ್ಚಲ ಕಿರೀಟ

ಎಟಿಪಿ ಫೈನಲ್ಸ್‌ ಟೆನಿಸ್‌: ಜೊಕೊವಿಚ್‌ಗೆ ಆಘಾತ ನೀಡಿದ ಜರ್ಮನಿಯ ಆಟಗಾರ
Last Updated 19 ನವೆಂಬರ್ 2018, 19:52 IST
ಅಕ್ಷರ ಗಾತ್ರ

ಲಂಡನ್‌ : ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಎಟಿಪಿ ಫೈನಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಭಾನುವಾರ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 21 ವರ್ಷ ವಯಸ್ಸಿನ ಜ್ವೆರೆವ್‌ 6–4, 6–3 ನೇರ ಸೆಟ್‌ಗಳಿಂದ ಸರ್ಬಿಯಾದ ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿದರು.

ಸೆಮಿಫೈನಲ್‌ನಲ್ಲಿ ಆರು ಬಾರಿಯ ಚಾಂಪಿಯನ್‌ ರೋಜರ್‌ ಫೆಡರರ್‌ ಅವರನ್ನು ಸೋಲಿಸಿದ್ದ ಮೂರನೇ ಶ್ರೇಯಾಂಕದ ಆಟಗಾರ ಜ್ವೆರೆವ್‌, ಫೈನಲ್‌ನಲ್ಲೂ ಮೋಡಿ ಮಾಡಿದರು. ನಾಲ್ಕು ಬಾರಿ ಜೊಕೊವಿಚ್‌ ಸರ್ವ್‌ ಮುರಿದ ಜ್ವೆರೆವ್‌, ಸರ್ಬಿಯಾದ ಆಟಗಾರನ ಎದುರು ರೌಂಡ್‌ ರಾಬಿನ್‌ ಲೀಗ್‌ನಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

ಟೂರ್ನಿಯಲ್ಲಿ ಆರನೇ ಪ್ರಶಸ್ತಿ ಗೆದ್ದು ಫೆಡರರ್‌ ದಾಖಲೆ ಸರಿಗಟ್ಟುವ ಕನಸು ಕಂಡಿದ್ದ ಜೊಕೊವಿಚ್‌ಗೆ ಆರಂಭದಲ್ಲೇ ಹಿನ್ನಡೆ ಎದುರಾಯಿತು. ಮೊದಲ ಸೆಟ್‌ನಲ್ಲಿ ಮೂರು ‘ಏಸ್‌’ಗಳನ್ನು ಸಿಡಿಸಿದ ಜ್ವೆರೆವ್‌, ಒಮ್ಮೆ ಎದುರಾಳಿಯ ಸರ್ವ್‌ ಮುರಿದು ಸುಲಭವಾಗಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಸೆಟ್‌ನ ಮೊದಲ ಗೇಮ್‌ನಲ್ಲಿ ಜೊಕೊವಿಚ್‌ ಸರ್ವ್‌ ಮುರಿದ ಜರ್ಮನಿಯ ಆಟಗಾರ, ಮರು ಗೇಮ್‌ನಲ್ಲಿ ‘ಡಬಲ್‌ ಫಾಲ್ಟ್‌’ ಎಸಗಿ‌ದರು. ಹೀಗಾಗಿ 1–1ರ ಸಮಬಲ ಕಂಡುಬಂತು. ಅಗ್ರ ಶ್ರೇಯಾಂಕದ ಆಟಗಾರ ಜೊಕೊವಿಚ್‌ ಮೂರನೇ ಗೇಮ್‌ನಲ್ಲೂ ಸರ್ವ್‌ ಕಳೆದುಕೊಂಡು 1–2ರಲ್ಲಿ ಹಿನ್ನಡೆ ಕಂಡರು.

ನಂತರದ ಐದು ಗೇಮ್‌ಗಳಲ್ಲಿ ಸಮಬಲದ ಪೈಪೋಟಿ ಕಂಡುಬಂತು. ಆದರೆ ಒಂಬತ್ತನೇ ಗೇಮ್‌ನಲ್ಲಿ ಜೊಕೊವಿಚ್‌ ಮತ್ತೊಮ್ಮೆ ಮುಗ್ಗರಿಸಿದರು. ಸರ್ವ್‌ ಉಳಿಸಿಕೊಳ್ಳಲು ವಿಫಲರಾದ ಅವರು ಸುಲಭವಾಗಿ ಸೋಲೊಪ್ಪಿಕೊಂಡರು. ಬಲಿಷ್ಠ ‘ಬ್ಯಾಕ್‌ ಹ್ಯಾಂಡ್‌’ ಹೊಡೆತದ ಮೂಲಕ ‘ಚಾಂಪಿಯನ್‌ಷಿಪ್‌ ಪಾಯಿಂಟ್‌’ ಕಲೆಹಾಕಿದ ಜ್ವೆರೆವ್‌ ಖುಷಿಯ ಕಡಲಲ್ಲಿ ತೇಲಿದರು.

‘ನನಗಾಗುತ್ತಿರುವ ಖುಷಿ ಪದಗಳಿಗೆ ನಿಲುಕದ್ದು. ಇದು ಅವಿಸ್ಮರಣೀಯ ಗೆಲುವು. ಜೊಕೊವಿಚ್‌ ಅವರಂತಹ ಬಲಿಷ್ಠ ಆಟಗಾರನನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದು ಹೆಮ್ಮೆಯಿಂದ ಬೀಗುವಂತೆ ಮಾಡಿದೆ’ ಎಂದು ಜ್ವೆರೆವ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಫೈನಲ್‌ನಲ್ಲಿ ಜ್ವೆರೆವ್‌ ತುಂಬಾ ಚೆನ್ನಾಗಿ ಆಡಿದರು. ಅವರಿಗೆ ಅಭಿನಂದನೆಗಳು. ಎರಡು ಸೆಟ್‌ಗಳಲ್ಲೂ ಕೆಲ ತಪ್ಪುಗಳನ್ನು ಮಾಡಿದ್ದರಿಂದ ಸೋಲು ಎದುರಾಯಿತು’ ಎಂದು ಜೊಕೊವಿಚ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT