ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ನಡಾಲ್‌, ಕ್ವಿಟೋವಾ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಸಿಟ್ಸಿಪಸ್‌ ಗೆಲುವಿನ ಓಟ: ಬಾರ್ಟಿಗೆ ನಿರಾಸೆ
Last Updated 22 ಜನವರಿ 2019, 16:58 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರು ಈ ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ರಾಡ್‌ ಲೇವರ್‌ ಅರೆನಾದಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ನಡಾಲ್‌ 6–3, 6–4, 6–2 ನೇರ ಸೆಟ್‌ಗಳಿಂದ ಅಮೆರಿಕದ ಫ್ರಾನ್ಸೆಸ್‌ ತಿಯಾಫೊ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ ಒಂದು ಗಂಟೆ 47 ನಿಮಿಷ ನಡೆಯಿತು.

ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ 18ನೇ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ನಡಾಲ್‌, ಸೆಮಿಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ ವಿರುದ್ಧ ಸೆಣಸಲಿದ್ದಾರೆ.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ನಡಾಲ್‌, ಮೊದಲ ಸೆಟ್‌ನ ಆರಂಭದಲ್ಲೇ ಎದುರಾಳಿಯ ಸರ್ವ್‌ ಮುರಿದು ಮುನ್ನಡೆ ಗಳಿಸಿದರು. ನಂತರ ತಾವು ಮಾಡಿದ ಸರ್ವ್‌ ಉಳಿಸಿಕೊಂಡು ಮುನ್ನಡೆಯನ್ನು 2–0ಗೆ ಹೆಚ್ಚಿಸಿಕೊಂಡರು.

ನಂತರವೂ ನಡಾಲ್‌ ಅಬ್ಬರಿಸಿದರು. ಶರವೇಗದ ಸರ್ವ್‌ ಮತ್ತು ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ಸೆಟ್‌ ಕೈವಶ ಮಾಡಿಕೊಂಡರು.

ಎರಡನೇ ಸೆಟ್‌ನ ಆರಂಭದಲ್ಲೂ ತಿಯಾಫೊ ಅವರ ಸರ್ವ್‌ ಮುರಿದ ನಡಾಲ್‌, ನಂತರ ಆಕ್ರಮಣಕಾರಿ ಆಟಕ್ಕೆ ಅಣಿಯಾದರು. ಆಕರ್ಷಕ ಕ್ರಾಸ್‌ಕೋರ್ಟ್‌ ಮತ್ತು ಬಲಿಷ್ಠ ಹಿಂಗೈ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಎಂಟು ಗೇಮ್‌ಗಳಲ್ಲಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಬಳಿಕ ಪಾರಮ್ಯ ಮೆರೆದ ನಡಾಲ್‌ ಗೆಲುವಿನ ತೋರಣ ಕಟ್ಟಿದರು.

ಮೂರನೇ ಸೆಟ್‌ನಲ್ಲೂ ಸ್ಪೇನ್‌ನ ಆಟಗಾರ ಮೋಡಿ ಮಾಡಿದರು. ನಡಾಲ್‌ ಅವರ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಬೇಸ್‌ಲೈನ್‌ ಸ್ಮ್ಯಾಷ್‌ಗಳಿಗೆ ತಿಯಾಫೊ ನಿರುತ್ತರರಾದರು. ಈ ಸೆಟ್‌ನಲ್ಲಿ ಎರಡು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಕಲೆಹಾಕಿದ ಸ್ಪೇನ್‌ನ ಆಟಗಾರ ‘ರಫಾ’ ನಿರಾಯಾಸವಾಗಿ ಗೆದ್ದರು.

ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಗ್ರೀಸ್‌ನ ಸಿಟ್ಸಿಪಸ್‌ 7–5, 4–6, 6–4, 7–6ರಲ್ಲಿ ಸ್ಪೇನ್‌ನ ರಾಬರ್ಟೊ ಬಟಿಸ್ಟಾ ಅವರನ್ನು ಸೋಲಿಸಿದರು. ಈ ಮೂಲಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಗ್ರೀಸ್‌ನ ಮೊದಲ ಆಟಗಾರ ಎಂಬ ಹಿರಿಮೆಗೆ ಭಾಜನರಾದರು.

14ನೇ ಶ್ರೇಯಾಂಕದ ಆಟಗಾರ ಸಿಟ್ಸಿಪಸ್‌, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ಗೆ ಆಘಾತ ನೀಡಿದ್ದರು.

ಬಟಿಸ್ಟಾ ಎದುರಿನ ಹೋರಾಟದಲ್ಲಿ ಮೊದಲ ಸೆಟ್‌ ಗೆದ್ದ ಅವರು ನಂತರ ಎಡವಿದರು. ಹೀಗಾಗಿ 1–1 ಸಮಬಲ ಕಂಡುಬಂತು. ಬಳಿಕ ಪರಿಣಾಮಕಾರಿ ಸಾಮರ್ಥ್ಯ ತೋರಿದ ಗ್ರೀಸ್‌ನ ಆಟಗಾರ ಪಂದ್ಯ ಗೆದ್ದು ಸಂಭ್ರಮಿಸಿದರು.

ನಾಲ್ಕರ ಘಟ್ಟಕ್ಕೆ ಕ್ವಿಟೋವಾ: ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ವಿಟೋವಾ 6–1, 6–4 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ಅವರನ್ನು ಪರಾಭವಗೊಳಿಸಿದರು.

ಎಂಟನೇ ಶ್ರೇಯಾಂಕದ ಆಟಗಾರ್ತಿ ಕ್ವಿಟೋವಾ ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದರು. ಎರಡನೇ ಸೆಟ್‌ನಲ್ಲಿ ಬಾರ್ಟಿ ಅವರಿಂದ ಎದುರಾದ ಕಠಿಣ ಸವಾಲನ್ನು ಅವರು ದಿಟ್ಟತನದಿಂದ ಮೆಟ್ಟಿನಿಂತರು.

ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಡೇನಿಯಲ್‌ ಕೊಲಿನ್ಸ್‌ 2–6, 7–5, 6–1ರಲ್ಲಿ ರಷ್ಯಾದ ಅನಸ್ತೇಸಿಯಾ ಪವಲ್ಯುಚೆಂಕೋವಾ ಅವರನ್ನು ಮಣಿಸಿದರು.

ಶ್ರೇಯಾಂಕ ರಹಿತ ಆಟಗಾರ್ತಿ ಡೇನಿಯೆಲ್‌ ಮೊದಲ ಸೆಟ್‌ನಲ್ಲಿ ಸೋತರು. ಇದರಿಂದ ಎದೆಗುಂದದ ಅವರು ನಂತರದ ಎರಡು ಸೆಟ್‌ಗಳಲ್ಲೂ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT