ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರರ್‌, ಕೆರ್ಬರ್‌ಗೆ ಆಘಾತ: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ರಫೆಲ್‌ ನಡಾಲ್‌

Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ಮೆಲ್ಬರ್ನ್‌ : ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾನುವಾರ ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕುವ ನೆಚ್ಚಿನ ತಾರೆಗಳೆನಿಸಿದ್ದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಮತ್ತು ರಷ್ಯಾದ ಮರಿಯಾ ಶರಪೋವಾ ಅವರು ನಾಲ್ಕನೇ ಸುತ್ತಿನಲ್ಲಿ ಆಘಾತ ಕಂಡಿದ್ದಾರೆ.

ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಲಗ್ಗೆ ಇಟ್ಟಿದ್ದಾರೆ.

ರಾಡ್‌ ಲೇವರ್‌ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ಫೆಡರರ್ 7–6, 6–7, 5–7, 6–7ರಿಂದ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ಗೆ ಶರಣಾದರು. ಈ ಸೋಲಿನೊಂದಿಗೆ ರೋಜರ್‌ ಅವರ 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯದ ಕನಸು ಭಗ್ನಗೊಂಡಿತು.

ಈ ಗೆಲುವಿನೊಂದಿಗೆ 20 ವರ್ಷ ವಯಸ್ಸಿನ ಸಿಟ್ಸಿಪಸ್‌, ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಗ್ರೀಸ್‌ನ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

ಮುಂದಿನ ಸುತ್ತಿನಲ್ಲಿ ಸಿಟ್ಸಿಪಸ್‌, ಟೂರ್ನಿಯಲ್ಲಿ 22ನೇ ಶ್ರೇಯಾಂಕ ಹೊಂದಿರುವ ರಾಬರ್ಟೊ ಬಟಿಸ್ಟಾ ಅಗತ್‌ ಅವರ ಸವಾಲು ಎದುರಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಸಿಟ್ಸಿಪಸ್‌ ಮೊದಲ ಸೆಟ್‌ನ ಶುರುವಿನಿಂದಲೇ 37 ವರ್ಷ ವಯಸ್ಸಿನ ಆಟಗಾರ ಫೆಡರರ್‌ಗೆ ಕಠಿಣ ಸ್ಪರ್ಧೆ ಒಡ್ಡಿದರು. ಇಬ್ಬರೂ ಸರ್ವ್‌ ಉಳಿಸಿಕೊಂಡು ಸಾಗಿದ್ದರಿಂದ 6–6ರ ಸಮಬಲ ಕಂಡುಬಂತು. ‘ಟೈ ಬ್ರೇಕರ್‌’ನಲ್ಲಿ ಫೆಡರರ್‌ ದಿಟ್ಟ ಆಟ ಆಡಿ ಗೆದ್ದರು.

ಇದರಿಂದ ಸಿಟ್ಸಿಪಸ್‌ ವಿಶ್ವಾಸ ಕಳೆದುಕೊಳ್ಳಲಿಲ್ಲ. ಆರಂಭಿಕ ನಿರಾಸೆಯನ್ನು ಮರೆತು ಗುಣಮಟ್ಟದ ಆಟ ಆಡುವತ್ತ ಚಿತ್ತ ನೆಟ್ಟ ಅವರು ಎರಡನೇ ಸೆಟ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿ 1–1 ಸಮಬಲ ಸಾಧಿಸಿದರು.

ರೋಚಕ ಹೋರಾಟ ಕಂಡುಬಂದ ಮೂರನೇ ಸೆಟ್‌ನಲ್ಲೂ ಅನುಭವಿ ಆಟಗಾರ ಫೆಡರರ್‌ಗೆ ನಿರಾಸೆ ಎದುರಾಯಿತು. ಸತತ ಎರಡು ಸೆಟ್‌ ಜಯಿಸಿ ವಿಶ್ವಾಸದಿಂದ ಬೀಗುತ್ತಿದ್ದ ಸಿಟ್ಸಿಪಸ್‌, ನಾಲ್ಕನೇ ಸೆಟ್‌ನಲ್ಲೂ ಮಿಂಚಿದರು. ಉಭಯ ಆಟಗಾರರೂ ಸರ್ವ್‌ ಉಳಿಸಿಕೊಂಡಿದ್ದರಿಂದ ಈ ಸೆಟ್‌ ಕೂಡಾ ‘ಟೈ ಬ್ರೇಕರ್‌’ಗೆ ಸಾಗಿತು. ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ 20 ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸಿರುವ ಫೆಡರರ್‌, ನಿರ್ಣಾಯಕ ಹಂತದಲ್ಲಿ ಅನಗತ್ಯ ತಪ್ಪು ಮಾಡಿ ಪಂದ್ಯ ಕೈಚೆಲ್ಲಿದರು.

ನಡಾಲ್‌ ಮೋಡಿ: ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ 18ನೇ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿರುವ ನಡಾಲ್‌ ಸುಲಭವಾಗಿ ಜಯದ ಸಿಹಿ ಸವಿದರು.

ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ನಡಾಲ್‌ 6–0, 6–1, 7–6 ನೇರ ಸೆಟ್‌ಗಳಿಂದ ಜೆಕ್‌ ಗಣರಾಜ್ಯದ ಥಾಮಸ್‌ ಬರ್ಡಿಕ್‌ ಅವರನ್ನು ಸೋಲಿಸಿದರು.

ಮೊದಲ ಎರಡು ಸೆಟ್‌ಗಳಲ್ಲಿ ಸುಲಭವಾಗಿ ಗೆದ್ದ ಸ್ಪೇನ್‌ನ ಆಟಗಾರ, ಮೂರನೇ ಸೆಟ್‌ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ‘ಟೈ ಬ್ರೇಕರ್‌’ನಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಸಂಭ್ರಮಿಸಿದರು.

ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಬಟಿಸ್ಟಾ 6–7, 6–3, 6–2, 4–6, 6–4ರಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ಗೆ ಆಘಾತ ನೀಡಿದರು.

ಅಮೆರಿಕದ ಫ್ರಾನ್ಸೆಸ್‌ ತಿಯಾಫೊ 7–5, 7–6, 6–7, 7–5ರಲ್ಲಿ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು ಮಣಿಸಿದರು.

ಕೆರ್ಬರ್‌ಗೆ ನಿರಾಸೆ: ಮಹಿಳಾ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಹಣಾಹಣಿಯಲ್ಲಿ ಏಂಜಲಿಕ್‌ ಕೆರ್ಬರ್‌ 0–6, 2–6 ನೇರ ಸೆಟ್‌ಗಳಿಂದ ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತಿ ಡೇನಿಯೆಲ್‌ ಕಾಲಿನ್ಸ್‌ ಎದುರು ಪರಾಭವಗೊಂಡರು.

ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಆ್ಯಷ್ಲೆಗ್‌ ಬಾರ್ಟಿ 4–6, 6–1, 6–4ರಲ್ಲಿ ಶರಪೋವಾಗೆ ಸೋಲಿನ ರುಚಿ ತೋರಿಸಿದರು.

ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ 6–2, 6–1ರಲ್ಲಿ ಅಮೆರಿಕದ ಅಮಂಡಾ ಅನಿಸಿಮೋವಾ ಎದುರು ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT