ಶನಿವಾರ, ಮೇ 15, 2021
26 °C
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಮಹಿಳಾ ಡಬಲ್ಸ್‌ನಲ್ಲಿ ಕ್ರಿಸ್ಟಿನಾ–ಬಾಬೊಸ್‌ಗೆ ಕಿರೀಟ

ಥೀಮ್‌ ಎದುರು ತಬ್ಬಿಬ್ಬಾದ ಜ್ವೆರೆವ್‌

ರಾಯಿಟರ್ಸ್‌/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಹೊಸ ತಲೆಮಾರಿನ ಆಟಗಾರರ ಹೋರಾಟಕ್ಕೆ ಸಾಕ್ಷಿಯಾಗಿದ್ದ ಮೆಲ್ಬರ್ನ್‌ ಪಾರ್ಕ್‌ನಲ್ಲಿ  ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌, ಆಧಿಪತ್ಯ ಸಾಧಿಸಿದರು.

ಆರಂಭಿಕ ಸೆಟ್‌ನಲ್ಲಿ ಸೋತರೂ ಎದೆಗುಂದದೇ ಛಲದಿಂದ ಆಡಿದ ಥೀಮ್‌, ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿದರು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ 26 ವರ್ಷ ವಯಸ್ಸಿನ ಥೀಮ್‌ 3–6, 6–4, 7–6, 7–6ರಲ್ಲಿ ಜರ್ಮನಿಯ 22ರ ಹರೆಯದ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಅವರ ಸವಾಲು ಮೀರಿದರು. ಈ ಹೋರಾಟ 3 ಗಂಟೆ 42 ನಿಮಿಷ ನಡೆಯಿತು.

ಭಾನುವಾರ ನಡೆಯುವ ಫೈನಲ್‌ನಲ್ಲಿ ಥೀಮ್‌ಗೆ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಸವಾಲು ಎದುರಾಗಲಿದೆ.

ಪಂದ್ಯದ ವೇಳೆ ಮಳೆ ಸುರಿದ ಕಾರಣ ರಾಡ್‌ ಲೇವರ್‌ ಅರೇನಾ ಅಂಗಳದ ಮೇಲ್ಛಾವಣಿಯನ್ನು ಮುಚ್ಚಲಾಗಿತ್ತು. ಮೊದಲ ಸೆಟ್‌ನ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಜ್ವೆರೆವ್‌ 4–3 ಮುನ್ನಡೆ ಗಳಿಸಿದ್ದರು. ಬಳಿಕ ಎದುರಾಳಿಯ ಸರ್ವ್‌ ಮುರಿದ ಜರ್ಮನಿಯ ಆಟಗಾರ ಸುಲಭವಾಗಿ ಸೆಟ್‌ ಗೆದ್ದರು. 13 ಬಾರಿ ತಪ್ಪುಗಳನ್ನು ಮಾಡಿದ ಥೀಮ್‌ ನಿರಾಸೆ ಕಂಡರು.

ಇದರಿಂದ ಎದೆಗುಂದದ ಥೀಮ್‌, ಎರಡನೇ ಸೆಟ್‌ನಲ್ಲಿ ಪುಟಿದೆದ್ದರು. 4–3ರಿಂದ ಮುನ್ನಡೆ ಪಡೆದ ಅವರು ನಂತರದ ಮೂರು ಗೇಮ್‌ಗಳಲ್ಲೂ ಗುಣಮಟ್ಟದ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ಮೂರು ಮತ್ತು ನಾಲ್ಕನೇ ಸೆಟ್‌ಗಳಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನಿಂದ ಸೆಣಸಿದರು. ಹೀಗಾಗಿ ಎರಡು ಸೆಟ್‌ಗಳೂ ‘ಟೈ ಬ್ರೇಕರ್‌’ಗೆ ಸಾಗಿದವು. ಮೂರನೇ ಸೆಟ್‌ನ ‘ಟೈ ಬ್ರೇಕರ್‌’ನಲ್ಲಿ ಥೀಮ್‌, ಅಮೋಘ ವಿನ್ನರ್‌ಗಳನ್ನು ಸಿಡಿಸಿದರು. ನಾಲ್ಕನೇ ಸೆಟ್‌ನಲ್ಲಿ ‘ಡಬಲ್‌ ಫಾಲ್ಟ್‌’ಗಳನ್ನು ಎಸಗಿದ್ದರಿಂದ ಜ್ವೆರೆವ್‌ ಅವರ ಫೈನಲ್‌ ಕನಸು ಕಮರಿತು.

ಬಾಬೊಸ್‌–ಕ್ರಿಸ್ಟಿನಾಗೆ ಪ್ರಶಸ್ತಿ: ಮಹಿಳಾ ಡಬಲ್ಸ್‌ನಲ್ಲಿ ಟೈಮಿ ಬಾಬೊಸ್‌ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಚ್‌ ಜೋಡಿ ಪ್ರಶಸ್ತಿ ಗೆದ್ದಿತು. ಫೈನಲ್‌ನಲ್ಲಿ ಇವರು 6–2, 6–1ರಲ್ಲಿ ಹ್ಸಿ ಸು ವೀ ಮತ್ತು ಬಾರ್ಬರಾ ಸ್ಟ್ರೈಕೊವಾ ಅವರನ್ನು ಮಣಿಸಿದರು.

ಇಂದು ಫೈನಲ್‌: ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯ ಶನಿವಾರ ನಡೆಯಲಿದ್ದು, ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಮತ್ತು ಅಮೆರಿಕದ ಸೋಫಿಯಾ ಕೆನಿನ್‌ ಅವರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು