ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಂಗಣದಲ್ಲಿ ಜೊಕೊವಿಚ್‌ಗೆ ಗೆಲುವು

ಆಸ್ಟ್ರೇಲಿಯದಲ್ಲಿ ಉಳಿಯಲು ಅಭ್ಯಂತರವಿಲ್ಲ; ಆಸ್ಟ್ರೇಲಿಯನ್ ಓಪನ್‌ನಲ್ಲಿ ಕಣಕ್ಕೆ ಇಳಿಯಲು ಅಡ್ಡಿ ಸಾಧ್ಯತೆ
Last Updated 10 ಜನವರಿ 2022, 14:40 IST
ಅಕ್ಷರ ಗಾತ್ರ

ಮೆಲ್ಬರ್ನ್‌: ವಿಶ್ವದ ಒಂದನೇ ನಂಬರ್ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಕೋವಿಡ್ ಲಸಿಕೆ ಪ್ರಕರಣಕ್ಕೆ ಸಂಬಂಧಿಸಿ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಜಯ ಸಾಧಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಉಳಿದುಕೊಳ್ಳಲು ಮತ್ತು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅವರಿಗೆ ಅವಕಾಶ ನೀಡುವಂತೆ ನ್ಯಾಯಾಧೀಶರು ಸೋಮವಾರ ಸೂಚಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಪಡೆದಿರುವುದು ಕಡ್ಡಾಯ. ಆದರೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದ ಜೊಕೊವಿಚ್‌ ವೈದ್ಯಕೀಯ ವಿನಾಯಿತಿ ಪಡೆದುಕೊಂಡು ಬಂದಿದ್ದರು. ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವಿಸಾ ತಡೆ ಹಿಡಿದು ಹೋಟೆಲ್‌ನಲ್ಲಿ ಇರಿಸಿದ್ದರು. ಇದರ ವಿರುದ್ಧ ಜೊಕೊವಿಚ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ‌

ಫೆಡರಲ್ ಸರ್ಕಿಟ್ ಕೋರ್ಟ್‌ನ ನ್ಯಾಯಾಧೀಸ ಆ್ಯಂಟನಿ ಕೆಲಿ ಅವರು ವಿಸಾ ಮರಳಿಸುವಂತೆ ಸೂಚಿಸಿದರು. ತೀರ್ಪು ನೀಡಿದ 30 ನಿಮಿಷಗಳ ಒಳಗೆ ಅವರನ್ನು ಹೋಟೆಲ್‌ನಿಂದ ಬಿಡುಗಡೆ ಮಾಡುವಂತೆಯೂ ತಿಳಿಸಿತು. ವಿಶ್ವದ ಶ್ರೇಷ್ಠ ಆಟಗಾರನಿಗೆ ತಮ್ಮ ವಕೀಲರ ಜೊತೆ ಮಾತನಾಡುವುದಕ್ಕೂ ಸಾಕಷ್ಟು ಅವಕಾಶ ನೀಡಿರಲಿಲ್ಲ ಎಂದು ಅವರು ಖಾರವಾಗಿ ನುಡಿದರು.

ಜೊಕೊವಿಚ್ ಲಸಿಕೆ ಹಾಕಿಸಿಕೊಂಡಿರಲಿಲ್ಲ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಆಸ್ಟ್ರೇಲಿಯನ್ನರು ಅವರ ಮೇಲೆ ಕುಪಿತರಾಗಿದ್ದಾರೆ. ಲಸಿಕೆ ಹಾಕಿಸಿಕೊಳ್ಳದ ಆಸ್ಟ್ರೇಲಿಯನ್ನರ ಓಡಾಟಕ್ಕೆ ಕಠಿಣ ನಿರ್ಬಂಧಗಳು ಇವೆ. ಹೀಗಿರುವಾಗ ಜೊಕೊವಿಚ್ ಅವರಿಗೆ ವಿಶೇಷ ರಿಯಾಯಿತು ನೀಡಿರುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಅವರನ್ನು ನಡೆಸಿಕೊಂಡ ವಿಧಾನದ ಬಗ್ಗೆ ತಾಯ್ನಾಡಿನಲ್ಲೂ ಆಸ್ಟ್ರೇಲಿಯಾದಲ್ಲೂ ಪ್ರತಿಭಟನೆಗಳು ನಡೆದಿವೆ. ನ್ಯಾಯಾಲಯದ ಆದೇಶ ಹೊರಬಿದ್ದ ನಂತರ ಮಾತನಾಡಿದ ಸಹೋದರ ಜೊರ್ಡಿ ಜೊಕೊವಿಚ್‌ ‘ಇದು ಆಸ್ಟ್ರೇಲಿಯಾದ ಅಧಿಕಾರಿ ವರ್ಗಕ್ಕಾದ ದೊಡ್ಡ ಸೋಲು. ಅಲ್ಲಿ ನಡೆಯುತ್ತಿರುವುದು ಅಪ್ಪಟ ರಾಜಕೀಯ’ ಎಂದು ಹೇಳಿದ್ದಾರೆ.

ವಕೀಲರ ಕಚೇರಿ ಮುಂದೆ ಸೋಮವಾರ ಗುಂಪುಗೂಡಿದ ಅಭಿಮಾನಿಗಳು ಜೊಕೊವಿಚ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಆಟ ಇನ್ನೂ ಬಾಕಿ ಇದೆ

ನ್ಯಾಯಾಲಯದ ಆದೇಶ ಹೊರಬಿದ್ದರೂ ಜೊಕೊವಿಚ್ ಪ್ರಕರಣಕ್ಕೆ ಸದ್ಯ ತೆರೆ ಬೀಳುವ ಸಾಧ್ಯತೆಗಳು ಇಲ್ಲ. ಆದ್ದರಿಂದ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡುವುದರ ಮೇಲೆಯೂ ಕರಿನೆರಳು ಬಿದ್ದಿದೆ. ಅವರ ವಿಸಾವನ್ನು ಎರಡನೇ ಬಾರಿ ರದ್ದುಪಡಿಸುವುದಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಬಗ್ಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದೆ. ವಿಸಾ ವಿಷಯದಲ್ಲಿ ಇಮಿಗ್ರೇಷನ್ ಸಚಿವರು ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ಕ್ರಿಸ್ಟೋಫರ್ ಟ್ರಾನ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿಸಾವನ್ನು ಮತ್ತೊಮ್ಮೆ ರದ್ದು ಮಾಡಿದರೆ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. 9 ಬಾರಿಯ ಚಾಂಪಿಯನ್‌ಗೆ ಈ ಸಲ ಮಾತ್ರವಲ್ಲ, ಇನ್ನೂ ಮೂರು ವರ್ಷ ಇಲ್ಲಿ ಆಡಲು ಸಾಧ್ಯವಾಗಲಾರದು. 3 ವರ್ಷ ಟೂರ್ನಿ ಇದೇ 17ರಂದು ಆರಂಭವಾಗಲಿದೆ.

ಜೊಕೊವಿಚ್ ಪ್ರಕರಣದಲ್ಲಿ ಇಮಿಗ್ರೇಷನ್ ಸಚಿವರು ವೈಯಕ್ತಿಕ ಆಸಕ್ತಿ ತೋರಿರುವುದು ಬೇಸರದ ವಿಷಯ ಎಂದು ಮಾಜಿ ಟೆನಿಸ್ ಆಟಗಾರನೂ ಆಗಿರುವ ವಕೀಲ್ ಜಾನ್ ಅಲೆಕ್ಸಾಂಡರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಜೊಕೊವಿಚ್ ಅವರನ್ನು ಈ ವರೆಗೆ ಬಂಧಿಸಿಲ್ಲ ಎಂದು ಗೃಹ ಸಚಿವ ಕರೇನ್ ಆ್ಯಂಡ್ರ್ಯೂಸ್ ಸ್ಟಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT