ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಸ್ಥಾನಗಳಿಗೆ ಪ್ರಮುಖರ ಪೈಪೋಟಿ

ಬೆಂಗಳೂರು ಓಪನ್ ಟೆನಿಸ್‌ ಟೂರ್ನಿ: ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ
Last Updated 9 ನವೆಂಬರ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮುಂದಿನ ವಾರ ಆರಂಭವಾಗಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಶನಿವಾರ ಆರಂಭವಾಗಲಿವೆ. ಅರ್ಹತಾ ಸುತ್ತಿನಲ್ಲಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಲು ನಾಲ್ವರು ಆಟಗಾರರಿಗೆ ಅವಕಾಶವಿದೆ. ಈ ನಾಲ್ಕು ಸ್ಥಾನಗಳಿಗಾಗಿ ಪ್ರಮುಖ ಆಟಗಾರರು ಪೈಪೋಟಿ ನಡೆಸಲಿದ್ದಾರೆ.

ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿರುವ ಅಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಮುಖ್ಯ ಸುತ್ತಿನಲ್ಲಿ 32 ಮಂದಿ ಆಟಗಾರರು ಆಡಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಪ್ರಮುಖ ಸ್ಥಾನಗಳಲ್ಲಿರುವ 22 ಮಂದಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಲ್ವರಿಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ನೀಡಿದ್ದು ಇಬ್ಬರಿಗೆ ವಿಶೇಷವಾಗಿ ಅವಕಾಶ ನೀಡಲಾಗಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 89ನೇ ಸ್ಥಾನದಲ್ಲಿರುವ ಮೊಲ್ಡೊವಾದ ರಾಡು ಆಲ್ಬೋಟ್‌ ಮತ್ತು 99ನೇ ಸ್ಥಾನದಲ್ಲಿರುವ ರಷ್ಯಾದ ಎವ್ಜಿನಿ ಡಾನ್‌ಸ್ಕೊಯ್‌ ಅವರು ಟೂರ್ನಿಯಲ್ಲಿ ಆಡಲಿರುವ ಪ್ರಮುಖ ಆಟಗಾರರಾಗಿದ್ದಾರೆ.

ಪ್ರಜ್ಞೇಶ್ ಗುಣೇಶ್ವರನ್‌ (146ನೇ ರ‍್ಯಾಂಕ್) ಮುಖ್ಯ ಸುತ್ತಿನಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಆಟಗಾರ ಆಗಿದ್ದಾರೆ. ಜೋರ್ಡನ್ ಥಾಮ್ಸನ್‌ (ಆಸ್ಟ್ರೇಲಿಯಾ–101ನೇ ರ‍್ಯಾಂಕ್‌), ರಿಕಾರ್ಡಸ್‌ ಬೆರಂಕಿಯ (ಲಿಥುವಾನಿಯಾ–131), ಇಲಿಯಾಸ್‌ ಎಮರ್‌ (ಸ್ವೀಡನ್‌–133), ಮಾರ್ಕ್ ಪೊಲ್ಮನ್ಸ್‌ (ಆಸ್ಟ್ರೇಲಿಯಾ–145) ಮತ್ತು ಸಿಮೋನ್‌ ಬೊಲೆಲಿ (ಇಟಲಿ–147) ಅವರು ಕೂಡ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಂಪಿಯನ್ ಆದವರಿಗೆ 125 ಎಟಿಪಿ ಪಾಯಿಂಟ್‌ಗಳು ಲಭಿಸಲಿವೆ.

ಹಾಲಿ ಚಾಂಪಿಯನ್‌ ಸುಮಿತ್ ನಗಾಲ್‌ ಶುಕ್ರವಾರವೇ ಅಭ್ಯಾಸ ಆರಂಭಿಸಿದ್ದಾರೆ. ಈ ಬಾರಿಯೂ ಉತ್ತಮ ಸಾಮರ್ಥ್ಯ ತೋರುವ ಭರವಸೆ ವ್ಯಕ್ತಪಡಿಸಿದ ನಗಾಲ್‌ ‘ಇಂಥ ಮಹತ್ವದ ಟೂರ್ನಿಯಲ್ಲಿ ಆಡಲು ಖುಷಿ ಎನಿಸುತ್ತದೆ’ ಎಂದರು.

‘ಈ ಬಾರಿ ನಿರೀಕ್ಷೆಗೆ ತಕ್ಕ ಫಲಿತಾಂಶ ಮೂಡಿಬರಲಿಲ್ಲ. ಆ ನೋವನ್ನು ಮರೆಯಲು ಇಲ್ಲಿ ಪ್ರಯತ್ನಿಸಲಿದ್ದೇನೆ. ವೈಲ್ಡ್ ಕಾರ್ಡ್ ಪ್ರವೇಶ ಲಭಿಸಿರುವುದು ನನ್ನ ವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT