ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಪ್ರಜ್ಞೇಶ್‌ಗೆ ಸಾಟಿಯಾಗದ ನೆಡೆಲ್ಕೊ

7
ಸಾಕೇತ್‌ಗೆ ಗೆಲುವು

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಪ್ರಜ್ಞೇಶ್‌ಗೆ ಸಾಟಿಯಾಗದ ನೆಡೆಲ್ಕೊ

Published:
Updated:
Deccan Herald

ಬೆಂಗಳೂರು: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಮಂಗಳವಾರ ಸೆಂಟರ್‌ ಕೋರ್ಟ್‌ನಲ್ಲಿ ಸಿಡಿಸಿದ ಶರವೇಗದ ಸರ್ವ್‌ ಮತ್ತು ಚುರುಕಿನ ರಿಟರ್ನ್‌ಗಳಿಗೆ ಅಭಿಮಾನಿಗಳು ಮನಸೋತರು.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಪ್ರಜ್ಞೇಶ್‌ ಈ ಹಾದಿಯಲ್ಲಿ ಭರವಸೆಯ ಹೆಜ್ಜೆ ಇಟ್ಟಿದ್ದಾರೆ.

ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಭಾರತದ ಆಟಗಾರ 6–2, 6–2ರಲ್ಲಿ ರಷ್ಯಾದ ಇವಾನ್‌ ನೆಡೆಲ್ಕೊ ಅವರನ್ನು ಪರಾಭವಗೊಳಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 144ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌ ಮೊದಲ ಸೆಟ್‌ನಲ್ಲಿ ಅಬ್ಬರಿಸಿದರು. ಮೂರನೇ ಗೇಮ್‌ನಲ್ಲಿ ಇವಾನ್‌ ಸರ್ವ್‌ ಮುರಿದು 2–1ರ ಮುನ್ನಡೆ ಪಡೆದ ಅವರು ನಂತರ ಮನಮೋಹಕ ‘ಏಸ್‌’ಗಳನ್ನು ಸಿಡಿಸಿ ಎದುರಾಳಿಯ ಮೇಲೆ ಒತ್ತಡ ಹೇರಿದರು. ಪ್ರಜ್ಞೇಶ್‌, ರ‍್ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಮಿಂಚಿನ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಹಿಂತಿರುಗಿಸಲು ಪರದಾಡಿದ ಇವಾನ್‌ ಸುಲಭವಾಗಿ ಸೋಲೊಪ್ಪಿಕೊಂಡರು.

ಎರಡನೇ ಸೆಟ್‌ನಲ್ಲೂ ಪ್ರಜ್ಞೇಶ್‌, ಪರಾಕ್ರಮ ಮೆರೆದರು. ಐದನೇ ಗೇಮ್‌ನಲ್ಲಿ ‘ಏಸ್‌’ ಸಿಡಿಸಿದ ಅವರು ಮರು ಗೇಮ್‌ನಲ್ಲಿ ಇವಾನ್‌ ಸರ್ವ್‌ ಮುರಿದು 4–2ರ ಮುನ್ನಡೆ ಗಳಿಸಿದರು. ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಭಾರತದ ಆಟಗಾರ, ನಂತರ ಇನ್ನಷ್ಟು ಆಕ್ರಮಣಕಾರಿ ಆಟ ಆಡಿದರು. ಏಳನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಪ್ರಜ್ಞೇಶ್‌, ಮುನ್ನಡೆಯನ್ನು 5–2ಕ್ಕೆ ಹೆಚ್ಚಿಸಿಕೊಂಡರು. ಮರು ಗೇಮ್‌ನಲ್ಲಿ ಕ್ರಾಸ್‌ಕೋರ್ಟ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ರಷ್ಯಾದ ಆಟಗಾರನ ಸರ್ವ್‌ ಮುರಿದು ಸಂಭ್ರಮಿಸಿದರು.

ಸಾಕೇತ್‌ಗೆ ಜಯ: ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿರುವ ಸಾಕೇತ್‌ ಮೈನೇನಿ  ಗೆಲುವಿನ ಮುನ್ನುಡಿ ಬರೆದರು.

ಮೊದಲ ಸುತ್ತಿನ ಹೋರಾಟದಲ್ಲಿ ಸಾಕೇತ್‌ 6–3, 7–6ರಲ್ಲಿ ಆದಿಲ್‌ ಕಲ್ಯಾಣಪುರ ಅವರನ್ನು ಪರಾಭವಗೊಳಿಸಿದರು.

ಇನ್ನೊಂದು ಹಣಾಹಣಿಯಲ್ಲಿ ಶಶಿಕುಮಾರ್‌ ಮುಕುಂದ್‌ 7–6, 6–3ರಲ್ಲಿ ಅಮೆರಿಕದ ಕಾಲಿನ್‌ ಅಲ್ಟಮಿರಾನೊ ಎದುರು ಗೆದ್ದರು.

ರಾಡುಗೆ ಆಘಾತ: ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಮಾಲ್ಡೋವಾದ ರಾಡು ಆಲ್ಬಟ್‌ಗೆ ಆರಂಭಿಕ ಸುತ್ತಿನಲ್ಲೇ ಆಘಾತ ಎದುರಾಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿರುವ ರಾಡು 6–2, 2–6, 2–6ರಲ್ಲಿ ಈಜಿಪ್ಟ್‌ನ ಯೂಸುಫ್‌ ಹೊಸಾಮ್‌ ಎದುರು ಶರಣಾದರು.

ಇತರ ಪಂದ್ಯಗಳಲ್ಲಿ ಬ್ಲಾಜ್‌ ಕ್ಯಾವಸಿಕ್‌ 6–2, 6–0ರಲ್ಲಿ ಫಿಲಿಪ್‌ ಪೆಲಿವೊ ಎದುರೂ, ಸೆಬಾಸ್ಟಿಯನ್‌ ಫ್ಯಾನ್ಸೆಲೊವ್‌ 7–6, 6–4ರಲ್ಲಿ ಜೊಂಬೊರ್‌ ಪಿರೊಸ್‌ ಮೇಲೂ, ಕ್ವಿಂಟನ್‌ ಹಲಿಸ್‌ 6–3, 6–1ರಲ್ಲಿ ಸೂರಭ್‌ ಪ್ರಭೋದ್‌ ವಿರುದ್ಧವೂ, ಬ್ರೇಡನ್‌ ಶುನರ್‌ 6–4, 7–6ರಲ್ಲಿ ಮ್ಯಾಕ್ಸ್‌ ಪರ್ಸೆಲ್‌ ಎದುರೂ, ಜಿಜೌ ಬರ್ಗ್ಸ್‌ 6–1, 6–2ರಲ್ಲಿ ಆ್ಯಂಡ್ರೆಜ್‌ ಮಾರ್ಟಿನ್‌ ಮೇಲೂ, ಫೆಡೆರಿಕೊ ಸಿಲ್ವಾ 6–3, 3–6, 6–4ರಲ್ಲಿ ಡ್ಯಾನಿಲೊ ಪೆಟ್ರೊವಿಕ್‌ ವಿರುದ್ಧವೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !