ಶುಕ್ರವಾರ, ಫೆಬ್ರವರಿ 28, 2020
19 °C
ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ ಪ್ರವೇಶಿಸಿದ ಭಾರತ–ಆಸ್ಟ್ರೇಲಿಯಾ ಜೋಡಿ

ಮತ್ತೆ ಲಿಯಾಂಡರ್‌ ಪೇಸ್‌ ಮ್ಯಾಜಿಕ್‌

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅದೇ ಸಮಯ, ಅದೇ ಅಂಗಳ. ಪ್ರೇಕ್ಷಕರ ಗ್ಯಾಲರಿಯಲ್ಲಿ ಪ್ರತಿಧ್ವನಿಸುತ್ತಿದ್ದದ್ದೂ ಅವೇ ಘೋಷಣೆಗಳು. ಕಮಾನ್‌ ಲಿಯಾಂಡರ್‌... ಕಮಾನ್‌ ಲಿಯಾಂಡರ್‌...

ಕಬ್ಬನ್‌ ಉದ್ಯಾನದಲ್ಲಿರುವ ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಬುಧವಾರ ಹೊನಲು ಬೆಳಕಿನಲ್ಲಿ ನಡೆದಿದ್ದ ಪ್ರೀ ಕ್ವಾಟರ್‌ನಲ್ಲಿ ಮಿಂಚಿನ ಆಟ ಆಡಿ ಪ್ರಜ್ವಲಿಸಿದ್ದ ಲಿಯಾಂಡರ್‌ ಪೇಸ್‌, ಗುರುವಾರವೂ ಕಲಾತ್ಮಕ ಆಟದ ಮೂಲಕ ಉದ್ಯಾನನಗರಿಯ ಅಭಿಮಾನಿಗಳನ್ನು ರಂಜಿಸಿದರು.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಆಡುತ್ತಿರುವ ಅವರು ಸೆಮಿಫೈನಲ್‌ಗೆ ದಾಪುಗಾಲಿಟ್ಟರು.

 ‘ಸೆಂಟರ್‌ ಕೋರ್ಟ್‌’ನಲ್ಲಿ ಹೊನಲು ಬೆಳಕಿನಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಪೇಸ್‌ ಮತ್ತು ಮ್ಯಾಥ್ಯೂ 7–5, 0–6, 10–7ರಲ್ಲಿ ಇಂಡೊನೇಷ್ಯಾದ ಕ್ರಿಸ್ಟೋಫರ್‌ ರಂಗ್‌ಕತ್‌ ಮತ್ತು ಸ್ವೀಡನ್‌ನ ಆ್ಯಂಡ್ರೆ ಗೊರಾಸನ್‌ ಅವರನ್ನು ಪರಾಭವಗೊಳಿಸಿದರು. 46 ವರ್ಷ ವಯಸ್ಸಿನ ಲಿಯಾಂಡರ್‌, ಭಾರತದಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದು. 

ಅವರು ನೆಟ್‌ನ ಸಮೀಪದಲ್ಲಿ ಪಾದರಸದಂತೆ ಅತ್ತಿತ್ತ ಓಡಾಡುತ್ತಾ, ಸಿಕ್ಕ ಅವಕಾಶದಲ್ಲಿ ಚೆಂಡನ್ನು ಸ್ಮ್ಯಾಷ್‌ ಮಾಡಿ ಪಾಯಿಂಟ್ಸ್‌ ಗಳಿಸಿದಾಗಲೆಲ್ಲಾ ಮೈದಾನದಲ್ಲಿ ಮೆಕ್ಸಿಕನ್‌ ಅಲೆ ಏಳುತ್ತಿತ್ತು.

ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಯ ಸ್ವಾಗತದೊಂದಿಗೆ ಅಂಗಳ ಪ್ರವೇಶಿಸಿದ ಪೇಸ್‌ ಮತ್ತು ಮ್ಯಾಥ್ಯೂ ಮೊದಲ ಗೇಮ್‌ನಲ್ಲೇ ಸರ್ವ್‌ ಉಳಿಸಿಕೊಂಡು 1–0 ಮುನ್ನಡೆ ಪಡೆದರು. ಮೂರನೇ ಗೇಮ್‌ನಲ್ಲಿ ಪೇಸ್‌, ಸರ್ವ್‌ ಕಳೆದುಕೊಂಡರು. ಹೀಗಾಗಿ ಎದುರಾಳಿಗಳು 2–1 ಮುನ್ನಡೆ ಪಡೆದರು. ಇದರಿಂದ ಭಾರತ ಮತ್ತು ಆಸ್ಟ್ರೇಲಿಯಾದ ಜೋಡಿ ಎದೆಗುಂದಲಿಲ್ಲ. ನಾಲ್ಕನೇ ಗೇಮ್‌ನಲ್ಲಿ ಕ್ರಿಸ್ಟೋಫರ್‌ ಮತ್ತು ಆ್ಯಂಡ್ರೆ ಅವರ ಸರ್ವ್‌ ಮುರಿದು 2–2 ಸಮಬಲ ಸಾಧಿಸಿತು.

ನಂತರದ ಎಂಟು ಗೇಮ್‌ಗಳಲ್ಲಿ ಉಭಯ ಜೋಡಿಗಳೂ ಸಮಬಲದಿಂದ ಸೆಣಸಿದವು. ‘ಟೈ ಬ್ರೇಕರ್‌’ನಲ್ಲಿ ಜಾದೂ ಮಾಡಿದ ಪೇಸ್‌ ಮತ್ತು ಮ್ಯಾಥ್ಯೂ 39 ನಿಮಿಷಗಳಲ್ಲಿ ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಜೋಡಿ ಹಲವು ತಪ್ಪುಗಳನ್ನು ಮಾಡಿತು. ಮೂರು ಸರ್ವ್‌ಗಳನ್ನೂ ಕೈಚೆಲ್ಲಿ ನಿರಾಸೆ ಕಂಡಿತು. ಸುಲಭವಾಗಿ ಸೆಟ್‌ ಜಯಿಸಿದ ಕ್ರಿಸ್ಟೋಫರ್‌ ಮತ್ತು ಆ್ಯಂಡ್ರೆ 1–1ರಿಂದ ಸಮಬಲ ಸಾಧಿಸಿದರು.

‘ಸೂಪರ್‌ ಟೈ ಬ್ರೇಕರ್‌’ನಲ್ಲಿ ಪೇಸ್‌ ಜೋಡಿಯ ಆಟ ಮತ್ತಷ್ಟು ರಂಗೇರಿತು. ಸತತ ಎರಡು ಅಮೋಘ ಸರ್ವ್‌ಗಳನ್ನು ಮಾಡಿದ ಪೇಸ್‌, ಗರ್ಜಿಸಿದರು. ಬಳಿಕವೂ ಅಮೋಘ ಆಟ ಆಡಿ 9–4ರಿಂದ ಮುನ್ನಡೆ ಗಳಿಸಿದ್ದರಿಂದ ಭಾರತ ಮತ್ತು ಆಸ್ಟ್ರೇಲಿಯಾದ ಜೋಡಿಯ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಈ ಹಂತದಲ್ಲಿ ಚೆಂಡನ್ನು ಪದೇ ಪದೇ ಅಂಗಳದ ಆಚೆ ಬಾರಿಸಿದ ಪೇಸ್‌ ಮೂರು ಪಾಯಿಂಟ್ಸ್‌ ಬಿಟ್ಟುಕೊಟ್ಟಿದ್ದರಿಂದ ಎದುರಾಳಿಗಳ ಹಿನ್ನಡೆ 7–9ಕ್ಕೆ ತಗ್ಗಿತು.

ಹೀಗಾಗಿ ಮೈದಾನದಲ್ಲಿ ಮತ್ತೆ ಆತಂಕ ಆವರಿಸಿತ್ತು. ಅಭಿಮಾನಿಗಳ ಎದೆಬಡಿತವೂ ಜೋರಾಗಿತ್ತು. 17ನೇ ಸರ್ವ್‌ನಲ್ಲಿ ಎದುರಾಳಿ ಆಟಗಾರ ಬಾರಿಸಿದ ಚೆಂಡು ಅಂಗಳದ ಆಚೆ ಬೀಳುತ್ತಿದ್ದಂತೆ ಪೇಸ್‌ ಮತ್ತು ಮ್ಯಾಥ್ಯೂ ಅವರ ಸಂಭ್ರಮ ಮೇಳೈಸಿತು. ಪರಸ್ಪರ ಆಲಂಗಿಸಿಕೊಂಡ ಅವರು ಖುಷಿಯಿಂದ ಕುಣಿದಾಡಿದರು. ಬಳಿಕ ಗ್ಯಾಲರಿಯತ್ತ ತಿರುಗಿ ಗಾಳಿಯಲ್ಲಿ ಮುತ್ತನ್ನು ತೇಲಿಬಿಟ್ಟ ಪೇಸ್‌, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು