ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಪಣ್ಣ–ರಾಮ್‌ಕುಮಾರ್ ಜೋಡಿಗೆ ಅಡಿಲೇಡ್ ಟ್ರೋಫಿ

ಮೊದಲ ಬಾರಿ ಜೊತೆಯಾಗಿ ಆಡಿದ ಭಾರತದ ಟೆನಿಸ್ ಆಟಗಾರರು; ಇವಾನ್–ಮಾರ್ಸೆಲೊ ಎದುರಿನ ಫೈನಲ್‌ನಲ್ಲಿ ಗೆಲುವು
Last Updated 9 ಜನವರಿ 2022, 12:44 IST
ಅಕ್ಷರ ಗಾತ್ರ

ಅಡಿಲೇಡ್: ಮೊದಲ ಬಾರಿ ಜೊತೆಯಾಗಿ ಕಣಕ್ಕೆ ಇಳಿದ ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಅಡಿಲೇಡ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇವಾನ್ ದೊಡಿಗ್ ಮತ್ತು ಮಾರ್ಸೆಲೊ ಮೆಲೊ ಅವರನ್ನು ಭಾರತದ ಜೋಡಿ 7-6 (6), 6-1ರಲ್ಲಿ ಮಣಿಸಿದರು.

ಒಂದು ತಾಸು 21 ನಿಮಿಷಗಳ ಹಣಾಹಣಿಯಲ್ಲಿ ಭಾರತದ ಆಟಗಾರರು ತಮಗೆದುರಾದ ಎಲ್ಲ ನಾಲ್ಕು 4 ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. ಎದುರಾಳಿಗಳನ್ನು ಎರಡು ಬಾರಿ ಬ್ರೇಕ್ ಮಾಡಿದರು. ನಿರ್ಣಾಯಕ ಹಂತಗಳಲ್ಲಿ ರೋಹನ್ ಬೋಪಣ್ಣ ಅವರ ಅಮೋಘ ಸರ್ವಿಸ್ ರಿಟರ್ನ್ ಮತ್ತು ರಾಮ್‌ಕುಮಾರ್ ಅವರ ಆಲ್‌ರೌಂಡ್ ಆಟ ಕಣ್ಮನ ತಣಿಸಿತು.

ಕನ್ನಡಿಗ ರೋಹನ್ ಬೋಪಣ್ಣ ಅವರಿಗೆ ಇದು ಎಟಿಪಿ ಟೂರ್ನಿಯಲ್ಲಿ 20ನೇ ಡಬಲ್ಸ್‌ ಕಿರೀಟವಾಗಿದ್ದು ರಾಮ್‌ಕುಮಾರ್ ಮೊದಲ ಪ್ರಶಸ್ತಿಯ ಖುಷಿಯ ಅಲೆಯಲ್ಲಿ ಮಿಂದರು. ಈ ಹಂತದ ಟೂರ್ನಿಯಲ್ಲಿ ಇದು ರಾಮ್‌ಕುಮಾರ್ ಅವರ ಎರಡನೇ ಫೈನಲ್‌. 2018ರಲ್ಲಿ ನಡೆದ ಹಾಲ್‌ ಆಫ್ ಫೇಮ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಅವರು ರನ್ನರ್ ಅಪ್ ಆಗಿದ್ದರು.

ರೋಹನ್‌–ರಾಮ್‌ಕುಮಾರ್ ಜೋಡಿ ₹ 13 ಲಕ್ಷ 88,000 ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ. ಇಬ್ಬರಿಗೂ 250 ರ‍್ಯಾಂಕಿಂಗ್ ಪಾಯಿಂಟ್‌ಗಳು ಕೂಡ ಸಿಗಲಿವೆ. ಇದೇ ತಿಂಗಳಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಅಡಲು ಸಜ್ಜಾಗುತ್ತಿರುವ ರಾಮ್‌ಕುಮಾರ್ ಅವರಿಗೆ ಈ ಜಯ ಭರವಸೆ ತುಂಬಿದೆ.

ಪ್ರಯಾಸದ ಮೊದಲ ಸೆಟ್‌

ಟೈಬ್ರೇಕರ್‌ಗೆ ಸಾಗಿದ ಮೊದಲ ಸೆಟ್‌ನಲ್ಲಿ ರೋಹನ್‌–ರಾಮ್‌ಕುಮಾರ್ ಪ್ರಯಾಸದಿಂದ ಗೆಲುವು ಸಾಧಿಸಿದರು. ಆರಂಭದಲ್ಲೇ ಬ್ರೇಕ್ ಪಾಯಿಂಟ್ ಉಳಿಸಿಕೊಂಡ ಈ ಜೋಡಿ ನಂತರ ಭರ್ಜರಿ ಆಟವಾಡಿತು. ಏಳನೇ ಗೇಮ್‌ನಲ್ಲಿ ಎದುರಾಳಿಗಳು ಮುನ್ನಡೆ ಸಾಧಿಸಿದ್ದಾಗ ರೋಹನ್ ಮಿಂಚಿನ ಸರ್ವ್ ಮತ್ತು ಫೋರ್‌ಹ್ಯಾಂಡ್ ಹೊಡೆತದ ಮೂಲಕ ಮಿಂಚಿದರು. ಮತ್ತೊಮ್ಮೆ ಬ್ರೇಕ್ ಪಾಯಿಂಟ್ ಉಳಿಸಿಕೊಂಡ ರೋಹನ್ ಅವರು ಸೆಟ್‌ 4–4ರಲ್ಲಿ ಸಮ ಆಗಲು ಕಾರಣರಾದರು. ಪ್ರಬಲ್ ಏಸ್‌ ಸಿಡಿಸಿ ಪಂದ್ಯವನ್ನು ಟೈ ಬ್ರೇಕರ್‌ಗೆ ಕೊಂಡೊಯ್ಯುವಲ್ಲಿ ಕೂಡ ರೋಹನ್ ಯಶಸ್ಸು ಕಂಡರು. ಎರಡನೇ ಸೆಟ್‌ನಲ್ಲಿ ಭಾರತದ ಆಟಗಾರರು ಕ್ರೊವೇಷ್ಯಾದ ಇವಾನ್ ಮತ್ತು ಬ್ರೆಜಿಲ್‌ನ ಮಾರ್ಸೆಲೊ ಎದುರು ಏಕಪಕ್ಷೀಯ ಜಯ ಸಾಧಿಸಿದರು.

'ರಾಮ್‌ಕುಮಾರ್ ಅವರ ಸರ್ವ್‌ಗಳು ನಿಖರ. ಆದ್ದರಿಂದ ಪಾಯಿಂಟ್‌ಗಳನ್ನು ಕಲೆ ಹಾಕಲು ಕಷ್ಟವಾಗುವುದಿಲ್ಲ. ದಿವಿಜ್ ಶರಣ್ ಜೊತೆ ಆಡುವಾಗ ಪಾಯಿಂಟ್‌ಗಳನ್ನು ಪ್ರಯಾಸದಿಂದ ಕಲೆ ಹಾಕಬೇಕಾಗುತ್ತದೆ'

ರೋಹನ್ ಬೋಪಣ್ಣ ಭಾರತದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT