ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಸಾಕೇತ್‌– ರಾಮ್‌ಕುಮಾರ್‌

ಸೆಮಿಫೈನಲ್‌ಗೆ ಬೋರ್ನಾ ಗೋಜೊ
Last Updated 11 ಫೆಬ್ರುವರಿ 2022, 15:13 IST
ಅಕ್ಷರ ಗಾತ್ರ

ಬೆಂಗಳೂರು: ದಿಟ್ಟ ಆಟವಾಡಿದ ಭಾರತದ ಸಾಕೇತ್ ಮೈನೇನಿ ಹಾಗೂ ರಾಮ್‌ಕುಮಾರ್ ರಾಮನಾಥನ್ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ತಲುಪಿದ್ದಾರೆ.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ಆಟಗಾರರು6-4, 6-4ರಿಂದ ಬ್ರಿಟನ್‌– ಆಸ್ಟ್ರೇಲಿಯಾ ಜೋಡಿಯಾದ ಜೇ ಕ್ಲಾರ್ಕ್‌ ಮತ್ತು ಮಾರ್ಕ್‌ ಪೊಲ್ಮನ್ಸ್ ಸವಾಲು ಮೀರಿದರು.

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರರು ಫೈನಲ್‌ನಲ್ಲಿ ಫ್ರಾನ್ಸ್‌ನ ಹ್ಯೂಗೊ ಗ್ರೇನಿಯರ್ ಮತ್ತು ಅಲೆಕ್ಸಾಂಡರ್ ಮುಲ್ಲರ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ. ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಫ್ರಾನ್ಸ್ ಜೋಡಿಯು6-3, 6-4ರಿಂದ ಅಸ್ಟ್ರಿಯಾ– ಜೆಕ್ ಗಣರಾಜ್ಯದ ಅಲೆಕ್ಸಾಂಡರ್‌ ಎರ್ಲರ್‌ ಮತ್ತು ವಿಟ್‌ ಕೊಪ್ರಿವಾ ಅವರನ್ನು ಮಣಿಸಿದರು.

ಬೊರ್ನಾ ಜಯದ ಓಟ: ಅರ್ಹತಾ ಸುತ್ತಿನಿಂದ ಗೆದ್ದುಬಂದಿರುವ ಕ್ರೊವೇಷ್ಯಾ ಆಟಗಾರ ಬೊರ್ನಾ ಗೊಜೊ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಗೆಲುವಿನ ಓಟ ಮುಂದುವರಿಸಿದರು. ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ7-5, 6-4ರಿಂದ ಬೆಲ್ಜಿಯಂನ ಕಿಮ್ಮರ್ ಕೊಪರ್ಜೆನ್ಸ್ ಅವರನ್ನು ಸೋಲಿಸಿದ ಅವರು ನಾಲ್ಕರ ಘಟ್ಟ ಪ್ರವೇಶಿಸಿದರು.

ಮುಂದಿನ ಪಂದ್ಯದಲ್ಲಿ ಬೊರ್ನಾ, ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ಎದುರು ಸೆಣಸುವರು. ಸೆಮಿಫೈನಲ್‌ನ ಮತ್ತೊಂದು ಹಣಾಹಣಿಯಲ್ಲಿ ಮುಲ್ಲರ್‌6-4, 7-6 (7)ರಿಂದ ಟರ್ಕಿಯ ಸೆಮ್ ಇಲ್ಕೆಲ್‌ ಅವರನ್ನು ಮಣಿಸಿದರು.

ನೋವಿನಿಂದಾಗಿ ಹಿಂದೆ ಸರಿದ ವೆಸ್ಲಿ: ಅಗ್ರಶ್ರೇಯಾಂಕದ ಆಟಗಾರ, ಕ್ರೊವೇಷ್ಯಾದ ಜಿರಿ ವೆಸ್ಲಿ ಕ್ವಾರ್ಟರ್‌ಫೈನಲ್‌ನ ಪಂದ್ಯದ ಅರ್ಧದಲ್ಲೇ ಹಿಂದೆ ಸರಿದರು. ಫ್ರಾನ್ಸ್‌ನ ಎಂಜೊ ಕೌಸಾಡ್‌ ಎದುರು ಕಣಕ್ಕಿಳಿದಿದ್ದ ಅವರು ಮೊದಲ ಸೆಟ್‌ಅನ್ನು 4–6ರಿಂದ ಸೋತಿದ್ದರು. ಬಳಿಕ ಹೊಟ್ಟೆನೋವಿನಿಂದ ಬಳಲಿದ ಕಾರಣ ಆಟ ಮುಂದುವರಿಸಲಿಲ್ಲ. ಸೆಮಿಫೈನಲ್‌ನಲ್ಲಿ ಎಂಜೊ ಚೀನಾ ತೈಪೆಯ ಚುನ್ ಸಿನ್ ಸೆಂಗ್ ಎದುರು ಆಡುವರು. ಕ್ವಾರ್ಟರ್‌ಫೈನಲ್‌ನಲ್ಲಿ ಸೆಂಗ್‌6-4, 6-4ರಿಂದ ಬ್ರೆಜಿಲ್‌ನ ಗೇಬ್ರಿಯಲ್ ಡಿಕಾಂಪ್ಸ್ ಎದುರು ಗೆದ್ದರು.

ಆದಿಲ್ ಕಲ್ಯಾಣಪುರಗೆ ವೈಲ್ಡ್‌ಕಾರ್ಡ್‌: ಬೆಂಗಳೂರು ಓಪನ್ ಟೂರ್ನಿಯ ಎರಡನೇ ಲೆಗ್‌ಗೆ ಕರ್ನಾಟಕದ ಆದಿಲ್ ಕಲ್ಯಾಣಪುರ ಅವರಿಗೆ ವೈಲ್ಡ್‌ ಕಾರ್ಡ್‌ ದೊರೆತಿದೆ. ಭಾರತದ ಸಿದ್ಧಾರ್ಥ್ ರಾವತ್‌ ಮತ್ತು ಅರ್ಜುನ್ ಖಾಡೆ ಅವರಿಗೂ ವೈಲ್ಡ್‌ಕಾರ್ಡ್‌ ಪ್ರವೇಶ ಸಿಕ್ಕಿದೆ. ಭಾನುವಾರ ಎರಡನೇ ಲೆಗ್‌ನ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT