ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಕೆಟ್‌ ಕೆಳಗಿಟ್ಟ ಬ್ರಿಯಾನ್‌ ಬ್ರದರ್ಸ್‌

Last Updated 2 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಪುರುಷರ ಡಬಲ್ಸ್ ಟೆನಿಸ್‌ ವಿಭಾಗದಲ್ಲಿ ಸುಮಾರು ಎರಡು ದಶಕಗಳಿಂದ ಕೇಳಿಬರುತ್ತಿದ್ದ ಪ್ರಮುಖ ಹೆಸರು ಬಾಬ್‌ ಹಾಗೂ ಮೈಕ್‌ ಬ್ರಿಯಾನ್‌ ಸಹೋದರರದ್ದು. ಅವರು ಕೇವಲ ದಾಖಲೆಗಳಿಂದ ಮೆಚ್ಚುಗೆ ಪಡೆದವರಲ್ಲ. ಪಾಯಿಂಟ್ಸ್‌ ಗಳಿಸಿದಾಗ, ಪಂದ್ಯ ಗೆದ್ದಾಗ ಜಿಗಿದು ಎದೆಗೆ ಎದೆ ತಾಕಿಸಿ ಸಂಭ್ರಮಿಸುವ ಪರಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. 21ನೇ ಶತಮಾನದಲ್ಲಿ ಟೆನಿಸ್‌ಗೆ ಹೊಸ ಮೆರುಗು ತಂದ ಅಮೆರಿಕದ ಈ ಅವಳಿ ಸಹೋದರರು ಈಗ ಟೆನಿಸ್‌ಗೆ ವಿದಾಯ ಹೇಳಿದ್ದಾರೆ.

ರಾಬರ್ಟ್‌ ಚಾರ್ಲ್ಸ್‌ ‘ಬಾಬ್‌’ ಬ್ರಿಯಾನ್‌–ಮೈಕೆಲ್‌ ಕಾರ್ಲ್‌ ‘ಮೈಕ್‌’ ಬ್ರಿಯಾನ್‌ ಜನಿಸಿದ್ದು 1978ರ ಏಪ್ರಿಲ್‌ 29ರಂದು. ಇಬ್ಬರ ನಡುವಿನ ವಯಸ್ಸಿನ ಅಂತರ ಎರಡು ನಿಮಿಷ! ತಂದೆ ವೇಯ್ನ್‌ ಅವರಿಗೆ ಟೆನಿಸ್‌ ಒಲವು ಜಾಸ್ತಿ. ಮಕ್ಕಳನ್ನು ಈ ಹಂತಕ್ಕೆ ಕೊಂಡೊಯ್ಯಲು ಅವರ ಈ ಪ್ರೀತಿಯೂ ಕಾರಣವಾಯಿತು. ಜೂನಿಯರ್‌ ವಿಭಾಗದಲ್ಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಈ ಜೋಡಿ 1995ಲ್ಲಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಗೆ ಅರ್ಹತೆ ಗಳಿಸಿತು. ಆ ಟೂರ್ನಿಯ ಮೊದಲ ಸುತ್ತಿನಲ್ಲಿ ಎದುರಾಳಿಗಳು ಇವರನ್ನು ‘ಬಾಲ್‌ಬಾಯ್ಸ್‌’ ಎಂದು ತಿಳಿದುಕೊಂಡಿದ್ದರಂತೆ! ಮೈಕ್‌ ಎಡಗೈ ಆಟಗಾರ ಆದರೆ ಬಾಬ್‌ ಬಲಗೈ ಬಳಸುತ್ತಿದ್ದರು. ಇದು ಕೂಡ ಅವರಿಗೆ ಅಂಗಣದಲ್ಲಿ ಅನುಕೂಲವಾಗಿ ಪರಿಣಮಿಸಿತ್ತು.

438 ವಾರಗಳ ಕಾಲ ಈ ಜೋಡಿ ವಿಶ್ವ ಡಬಲ್ಸ್‌ ಕ್ರಮಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿತ್ತು (ಮೈಕ್‌ ವೈಯಕ್ತಿಕವಾಗಿ ಒಟ್ಟು 506 ವಾರ ಈ ಸ್ಥಾನದಲ್ಲಿದ್ದರು). ಡಬಲ್ಸ್‌ ಇತಿಹಾಸದಲ್ಲಿ ಇದು ದಾಖಲೆಯಾಗಿದೆ. ಸತತ ಏಳು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಭಾಗವಹಿಸಿದ ಹಿರಿಮೆಯೂ ಅವರದು. ಟೆನಿಸ್‌ನ ಹತ್ತು ಋತುಗಳಲ್ಲಿ ಅವರು ವಿಶ್ವ ಡಬಲ್ಸ್‌ ವಿಭಾಗದಲ್ಲಿ ಅಗ್ರಪಟ್ಟದಲ್ಲಿದ್ದರು. ಡೇವಿಸ್‌ ಕಪ್‌ ಟೂರ್ನಿಯ ಇತಿಹಾಸದಲ್ಲಿ ಹೆಚ್ಚು ಯಶಸ್ಸು ಕಂಡ ಜೋಡಿ ಇದು. 25 ಪಂದ್ಯಗಳನ್ನು ಅವರು ಅಮೆರಿಕಕ್ಕೆ ಗೆದ್ದುಕೊಟ್ಟಿದ್ದಾರೆ.ಬ್ರಿಯಾನ್‌ ಸಹೋದರರ ಸಾಧನೆಯಲ್ಲಿ ಅವರ ದೀರ್ಘಕಾಲದ ಕೋಚ್‌ ಡೇವಿಡ್‌ ಮ್ಯಾಕ್‌ಪರ್ಸನ್‌ ಅವರ ಕೊಡುಗೆಯೂ ಸಾಕಷ್ಟಿದೆ.

‘ನಮಗೆ ಆಡಬೇಕೆಂಬ ಬಯಕೆ ಇನ್ನೂ ಇದೆ. ಆದರೆ ಅದಕ್ಕೆ ದೇಹವನ್ನು ಸಾಕಷ್ಟು ದಂಡಿಸಬೇಕಾಗುತ್ತದೆ. ಅದು ಕಷ್ಟಸಾಧ್ಯ. ನಮ್ಮ ಆಟ ಉತ್ತುಂಗದಲ್ಲಿದ್ದಾಗಲೇ ಹೊರನಡೆಯುವುದು ಸೂಕ್ತ ಎನಿಸುತ್ತದೆ’ ಎಂದು ವಿದಾಯ ಘೋಷಿಸಿದ 42 ವರ್ಷದ ಬ್ರಿಯಾನ್‌ ಸಹೋದರರು ನುಡಿದರು.

ಬ್ರಿಯಾನ್‌ ಸಹೋದರರ ಸಾಧನೆ

1,108:ಡಬಲ್ಸ್‌ ಪಂದ್ಯಗಳ ಗೆಲುವು

178:ಟೂರ್‌ ಮಟ್ಟದಲ್ಲಿ ಆಡಿದ ಫೈನಲ್ಸ್

119: ಟೂರ್‌ ಮಟ್ಟದಲ್ಲಿ ಗೆದ್ದ ಪ್ರಶಸ್ತಿ:

39: ಎಟಿಪಿ ಮಾಸ್ಟರ್ಸ್‌ (1000) ಪ್ರಶಸ್ತಿ

16: ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ

2: ಒಲಿಂಪಿಕ್ಸ್‌‌ ಪದಕ(2008ರಲ್ಲಿ ಬೀಜಿಂಗ್‌ನಲ್ಲಿ ಕಂಚು, 2012ರಲ್ಲಿ ಲಂಡನ್‌ನಲ್ಲಿ ಚಿನ್ನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT