ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಇಗಾ ಸ್ವೆಟೆಕ್‌

ಮೊದಲ ಬಾರಿ ಸೆಮಿಫೈನಲ್‌ಗೆ ಸಿಲಿಚ್‌, ರೂಡ್‌
Last Updated 3 ಜೂನ್ 2022, 2:02 IST
ಅಕ್ಷರ ಗಾತ್ರ

ಪ್ಯಾರಿಸ್‌: ಗೆಲುವಿನ ಓಟ ಮುಂದುವರಿಸಿದ ಪೋಲೆಂಡ್‌ನ ಇಗಾ ಸ್ವೆಟೆಕ್‌ ಫ್ರೆಂಚ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯತ್ತ ದಾಪುಗಾಲಿಟ್ಟಿದ್ದಾರೆ. ಸತತ 34ನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಅವರು ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಹಣಾಹಣಿಯಲ್ಲಿ ಸ್ವೆಟೆಕ್‌ 6–2, 6–1ರಿಂದ ರಷ್ಯಾದ ದರಿಯಾ ಕಸತ್ಕಿನಾ ಸವಾಲು ಮೀರಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸ್ವೆಟೆಕ್‌, ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ಆರಂಭದಿಂದಲೇ ಹಿಡಿತ ಸಾಧಿಸಿದರು. ದರಿಯಾ ಅವರ ಸ್ವಯಂಕೃತ ತಪ್ಪುಗಳೂ ಪೋಲೆಂಡ್ ಆಟಗಾರ್ತಿಯ ಗೆಲುವನ್ನು ಸುಲಭವಾಗಿಸಿದವು.

2020ರ ಆವೃತ್ತಿಯ ಚಾಂಪಿಯನ್‌ ಸ್ವೆಟೆಕ್‌ ಫೆಬ್ರುವರಿಯಿಂದ ಒಂದು ಪಂದ್ಯದಲ್ಲಿಯೂ ಸೋಲು ಅನುಭವಿಸಿಲ್ಲ.

ಶನಿವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸ್ವೆಟೆಕ್ ಇಟಲಿಯ ಮಾರ್ಟಿನಾ ಟ್ರೆವಿಸನ್ ಅಥವಾ ಅಮೆರಿಕದ ಕೊಕೊ ಗಫ್ ಅವರನ್ನು ಎದುರಿಸಲಿದ್ದಾರೆ.

‘ಮೊದಲ’ ಸೆಮಿಗೆ ಸಿಲಿಚ್‌, ರೂಡ್‌: ಜಿದ್ದಾಜಿದ್ದಿನ ಹಣಾಹಣಿಗಳಲ್ಲಿ ಗೆದ್ದ ಕ್ರೊವೇಷ್ಯಾದ ಮರಿನ್ ಸಿಲಿಚ್‌ ಮತ್ತು ನಾರ್ವೆಯ ಕಾಸ್ಪರ್ ರೂಡ್‌, ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಬುಧವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಸಿಲಿಚ್‌5-7, 6-3, 6-4, 3-6, 7-6 (10/2)ರಿಂದ ರಷ್ಯಾದ ಆ್ಯಂಡ್ರೆ ರುಬ್ಲೆವ್ ಅವರಿಗೆ ಸೋಲುಣಿಸಿದರು. ಗೆಲುವಿನ ಹಾದಿಯಲ್ಲಿ ಸಿಲಿಚ್‌ 33 ಏಸ್‌ಗಳನ್ನು ಸಿಡಿಸಿದರು.

2014ರ ಅಮೆರಿಕ ಓಪನ್ ಚಾಂಪಿಯನ್‌ ಸಿಲಿಚ್‌, ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಐದು ಬಾರಿ ಕ್ವಾರ್ಟರ್‌ಫೈನಲ್‌ಗಳಲ್ಲಿ ಮುಗ್ಗರಿಸಿದ್ದರು. ಆದರೆ ಇಲ್ಲಿ ನಾಲ್ಕು ತಾಸು 10 ನಿಮಿಷಗಳ ಸುದೀರ್ಘ ಹಣಾಹಣಿಯಲ್ಲಿ ಅವರಿಗೆ ಗೆಲುವಿನ ಸಂಭ್ರಮ ಆಚರಿಸಿದರು.

ಎಂಟರಘಟ್ಟದ ಇನ್ನೊಂದು ಪಂದ್ಯದಲ್ಲಿ ರೂಡ್‌6-1, 4-6, 7-6 (7/2), 6-3ರಿಂದ ಡೆನ್ಮಾರ್ಕ್‌ನ ಯುವ ಆಟಗಾರ ಹೋಲ್ಗರ್ ರೂನೆ ಅವರನ್ನು ಮಣಿಸಿದರು.

ಫ್ರೆಂಚ್‌ ಓಪನ್ ಟೂರ್ನಿಯಲ್ಲಿಸೆಮಿಫೈನಲ್ ತಲು‍‍ಪಿದ ಡೆನ್ಮಾರ್ಕ್‌ನ ಮೊದಲ ಆಟಗಾರ ಎಂಬ ಶ್ರೇಯದ ಹಾದಿಯಲ್ಲಿ 19 ವರ್ಷದ ರೂನೆ ಇದ್ದರು. ಆದರೆ ರೂಡ್ ಅದಕ್ಕೆ ಅವಕಾಶ ನೀಡಲಿಲ್ಲ.

ಶಿಬಾರ–ಕೂಲೋಪ್‌ಗೆ ಮಿಶ್ರ ಡಬಲ್ಸ್ ಗರಿ: ಜಪಾನ್‌ನ ಎನಾ ಶಿಬಾರ ಮತ್ತು ನೆದರ್ಲೆಂಡ್ಸ್‌ನ ವೇಸ್ಲಿ ಕೂಲೋಪ್‌ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಈ ಜೋಡಿಯು7-6(5), 6-2ರಿಂದ ನಾರ್ವೆಯ ಯುಲ್‌ರಿಕ್‌ ಐಕೇರಿ ಮತ್ತು ಬೆಲ್ಜಿಯಂನ ಜೋರಾನ್‌ ಲಿಜೆನ್ ವಿರುದ್ಧ ಗೆದ್ದರು.

ವೀರೋಚಿತ ಹೋರಾಟದಲ್ಲಿ ಮಣಿದ ಬೋಪಣ್ಣ ಜೋಡಿ

ಏಳು ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾನ್ ಟೂರ್ನಿಯೊಂದರ ಸೆಮಿಫೈನಲ್‌ ತಲುಪಿದ್ದ ಭಾರತದ ರೋಹನ್ ಬೋಪಣ್ಣ ಅವರ ಫೈನಲ್‌ ಪ್ರವೇಶದ ಕನಸು ನನಸಾಗಲಿಲ್ಲ.

ಗುರುವಾರ ನಡೆದ ನಾಲ್ಕರ ಘಟ್ಟದ ಪುರುಷರ ಡಬಲ್ಸ್ ಪಂದ್ಯದಲ್ಲಿ 16ನೇ ಶ್ರೇಯಾಂಕದ ಕನ್ನಡಿಗ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮ್ಯಾಟ್‌ವೆ ಮಿಡಲ್‌ಕೂಪ್6-4, 3-6, 6-7, (8-10)ರಿಂದ ಮಾರ್ಸೆಲೊ ಅರೆವಾಲೊ ಮತ್ತು ಜೀನ್ ಜೂಲಿಯನ್ ರೋಜರ್ ಎದುರು ಸೋತರು.

ಎರಡು ತಾಸು ಏಳು ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಎಲ್‌ ಸಲ್ವಡಾರ್‌ನ ಮಾರ್ಸೆಲೊ ಮತ್ತು ನೆದರ್ಲೆಂಡ್ಸ್‌ನ ಜೀನ್ ಜಯ ಸಂಪಾದಿಸಿದರು.

2013ರಲ್ಲಿ ಲಿಯಾಂಡರ್‌ ಪೇಸ್‌ ಅಮೆರಿಕ ಓಪನ್‌ನ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು. ಇಲ್ಲಿ ಫೈನಲ್ ತಲುಪಿದ್ದರೆ ಒಂಬತ್ತು ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಫೈನಲ್ ತಲುಪಿದ ಭಾರತದ ಆಟಗಾರ ಎಂಬ ಶ್ರೇಯ ಬೋಪಣ್ಣ ಅವರದಾಗುತ್ತಿತ್ತು.

ಇಂದಿನ ಪಂದ್ಯಗಳು

ಪುರುಷರ ಸೆಮಿಫೈನಲ್ಸ್

ರಫೆಲ್ ನಡಾಲ್‌ (ಸ್ಪೇನ್‌)– ಅಲೆಕ್ಸಾಂಡರ್ ಜ್ವೆರೆವ್‌ (ಜರ್ಮನಿ)

ಆರಂಭ: ಸಂಜೆ 6.15ರಿಂದ

ಕಾಸ್ಪರ್ ರೂಡ್‌ (ನಾರ್ವೆ)– ಮರಿನ್ ಸಿಲಿಚ್‌ (ಕ್ರೊವೇಷ್ಯಾ)

ಆರಂಭ: ರಾತ್ರಿ 9 ಗಂಟೆ

ಸಮಯ: ಭಾರತೀಯ ಕಾಲಮಾನ

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT