ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್ ತಂಡದ ಮಾಜಿ ನಾಯಕ ನರೇಶ್ ಕುಮಾರ್ ನಿಧನ

ದಿಗ್ಗಜ ಟೆನಿಸ್‌ ಆಟಗಾರ, ಭಾರತ ಡೇವಿಸ್‌ ಕಪ್ ತಂಡದ ಮಾಜಿ ನಾಯಕ ನರೇಶ್ ಕುಮಾರ್‌ (93) ಬುಧವಾರ ನಿಧನರಾದರು.
Last Updated 14 ಸೆಪ್ಟೆಂಬರ್ 2022, 12:54 IST
ಅಕ್ಷರ ಗಾತ್ರ

ಕೋಲ್ಕತ್ತ: ದಿಗ್ಗಜ ಟೆನಿಸ್‌ ಆಟಗಾರ, ಭಾರತ ಡೇವಿಸ್‌ ಕಪ್ ತಂಡದ ಮಾಜಿ ನಾಯಕ ನರೇಶ್ ಕುಮಾರ್‌ (93) ಬುಧವಾರ ನಿಧನರಾದರು.

ಲಿಯಾಂಡರ್ ಪೇಸ್‌ ಅವರಿಗೆ ಮಾರ್ಗದರ್ಶನ ಮಾಡಿದ್ದ ನರೇಶ್ ಅವರಿಗೆ ಪತ್ನಿ ಸುನಿತಾ, ಮಗ ಅರ್ಜುನ್ ಮತ್ತು ಇಬ್ಬರು ಪುತ್ರಿಯರಾದ ಗೀತಾ ಮತ್ತು ಪ್ರಿಯಾ ಇದ್ದಾರೆ.

‘ಕಳೆದ ವಾರ ಕೆಲವು ವಾರಗಳಿಂದ ನರೇಶ್ ಕುಮಾರ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ದಿಗ್ಗಜ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಿದ್ದೇನೆ‘ ಎಂದು ಟೆನಿಸ್‌ ಆಟಗಾರ ಜೈದೀಪ್ ಮುಖರ್ಜಿ ಹೇಳಿದ್ದಾರೆ.

ನರೇಶ್ ಕುಮಾರ್ ಅವರ ನಾಯಕತ್ವದಲ್ಲಿ ಜೈದೀಪ್‌ ಡೇವಿಸ್‌ ಕಪ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದರು.

1922ರ ಡಿಸೆಂಬರ್ 22ರಂದು ಲಾಹೋರ್‌ನಲ್ಲಿ (ಅವಿಭಜಿತ ಭಾರತ) ಜನಿಸಿದ್ದ ನರೇಶ್ ಕುಮಾರ್, 1949ರ ಏಷ್ಯನ್ ಚಾಂಪಿಯನ್‌ಷಿಪ್‌ ಮೂಲಕ ಟೆನಿಸ್ ಪಯಣ ಆರಂಭಿಸಿದ್ದರು. 1952ರಲ್ಲಿ ಡೇವಿಸ್ ಕಪ್ ತಂಡಕ್ಕೆ ಮೊದಲ ಬಾರಿ ನಾಯಕರಾಗಿ ಆಯ್ಕೆಯಾದರು. 1955ರ ವಿಂಬಲ್ಡನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದು ಅವರ ವೃತ್ತಿಜೀವನದ ಪ್ರಮುಖ ಸಾಧನೆಯಾಗಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಅಮೆರಿಕದ ಟೋನಿ ಟ್ರಾಬರ್ಟ್ ಎದುರು ಅವರು ಸೋತಿದ್ದರು.

ಅಮೆಚೂರ್ ಆಟಗಾರನಾಗಿ ನರೇಶ್‌ ದಾಖಲೆಯ 101 ವಿಂಬಲ್ಡನ್‌ ಪಂದ್ಯಗಳಲ್ಲಿ ಆಡಿದ್ದರು. ಐರಿಷ್‌ ಚಾಂಪಿಯನ್‌ಷಿಪ್‌ (1952 ಮತ್ತು 1953), ವೆಲ್ಶ್‌ ಚಾಂಪಿಯನ್‌ಷಿಪ್‌ (1952), ಎಸೆಕ್ಸ್ ಚಾಂಪಿಯನ್‌ಷಿಪ್‌ (1957) ಮತ್ತು 1958ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ವೆನ್‌ಜೆನ್ ಟೂರ್ನಿಯ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

1990ರಲ್ಲಿ ಭಾರತ ತಂಡದ ಆಟವಾಡದ ನಾಯಕರಾಗಿ, ಆಗ 16 ವರ್ಷದವರಿದ್ದ ಲಿಯಾಂಡರ್ ಪೇಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಆಗ ಭಾರತ ತಂಡವು ಜಪಾನ್ ವಿರುದ್ಧ ಆಡಿತ್ತು.

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ನರೇಶ್ ಕುಮಾರ್ ಅವರು, ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿಗೆ (2000ನೇ ಇಸ್ವಿಯಲ್ಲಿ) ಭಾಜನರಾದ ಮೊದಲ ಟೆನಿಸ್‌ ಕೋಚ್ ಎಂಬ ಶ್ರೇಯ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT