ಗುರುವಾರ , ಡಿಸೆಂಬರ್ 12, 2019
19 °C
ಡೇವಿಸ್ ಕಪ್ | ಪಂದ್ಯ ಸ್ಥಳಾಂತರಕ್ಕೆ ಪಿಟಿಎಫ್‌ ಅಧ್ಯಕ್ಷ ಸಲೀಂ ಪ್ರತಿಕ್ರಿಯೆ

ಭಾರತ ನಮ್ಮೆದುರು ಗೆಲ್ಲಲು ಬಯಸಿತ್ತು, ಇದೀಗ ಸುಲಭವಾಗಿ ಗೆಲ್ಲಬಹುದು: ಪಾಕಿಸ್ತಾನ

Published:
Updated:

ನವದೆಹಲಿ: ಭಾರತ–ಪಾಕಿಸ್ತಾನ ಡೇವಿಸ್‌ ಕಪ್‌ ಪಂದ್ಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿರಿಯ ಆಟಗಾರರು, ಕಜಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವುದರಿಂದ ಪಾಕಿಸ್ತಾನ ಟೆನಿಸ್‌ ಮಂಡಳಿ(ಪಿಟಿಎಫ್‌) ಕಿರಿಯ ಆಟಗಾರರ ತಂಡವನ್ನೇ ಕಳುಹಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪಿಟಿಎಫ್‌ ಅಧ್ಯಕ್ಷ ಸಲೀಂ ಸೈಫುಲ್ಲಾ ಖಾನ್‌, ಭಾರತವು ನಮ್ಮ ವಿರುದ್ಧ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕೆಂದು ಬಯಸಿತ್ತು. ಇದೀಗ ಭಾರತಕ್ಕೆ ಜಯ ಸುಲಭವಾಗಿ ಸಿಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡೇವಿಸ್‌ ಕಪ್‌ ಸ್ಥಳಾಂತರ?

‘ಡೇವಿಸ್‌ ಕಪ್‌ ಪಂದ್ಯ ಆಡಲು ನಮ್ಮ ಹಿರಿಯ ಆಟಗಾರರು ನಿರಾಕರಿಸಿದ್ದಾರೆ. ಹಾಗಾಗಿ ಕಿರಿಯ ಆಟಗಾರರ ತಂಡವನ್ನೇ ಕಳುಹಿಸಿದ್ದೇವೆ. ಎಲ್ಲರೂ 16–17 ವಯಸ್ಸಿನವರು. ಇದರಿಂದ ಅವರು ಅನುಭವವನ್ನು ಪಡೆಯಲಿದ್ದಾರೆ’ ಎಂದು ಸಲೀಂ ತಿಳಿಸಿದ್ದಾರೆ.

ಮುಂದುವರಿದು, ‘ಭಾರತ ಈ ಪಂದ್ಯವನ್ನು ಗೆಲ್ಲಲ್ಲೇಬೇಕೆಂದು ಬಯಸಿತ್ತು. ಇದೀಗ ಸುಲಭವಾಗಿ ಗೆಲ್ಲಬಹುದು. ಪ್ರತಿದಿನವು ನೂರಾರು ಭಾರತೀಯರು(ಯಾತ್ರಿಗಳು) ಪಾಕಿಸ್ತಾನಕ್ಕೆ ಬರುತ್ತಾರೆ. ಇಸ್ಲಾಮಾಬಾದ್‌ನಲ್ಲಿನ ನಮ್ಮ ಹೋಟೆಲ್‌ಗಳು ಭಾರತೀಯರಿಂದ ತುಂಬಿವೆ. ಆದರೆ, ಆರು ಆಟಗಾರರ ತಂಡ ಮಾತ್ರ ಪಾಕಿಸ್ತಾನಕ್ಕೆ ಬರಲಾರದು. ಇದು ಅವಮಾನದ ಸಂಗತಿ’ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತಟಸ್ಥ ಸ್ಥಳಕ್ಕೆ ಡೇವಿಸ್‌ ಕಪ್‌ ಪಂದ್ಯ ಸ್ಥಳಾಂತರ: ಪಾಕ್‌ ನಿರ್ಧಾರ ಇಂದು

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನವೆಂಬರ್‌ 29–30ರಂದು ಪಂದ್ಯ ನಡೆಯಬೇಕಿತ್ತು. ಆದರೆ, ಭಾರತವು ಭದ್ರತೆ ಸಂಬಂಧ ಕಳವಳ ವ್ಯಕ್ತಪಡಿಸಿದ್ದರಿಂದ ಪಂದ್ಯವನ್ನು ಕಜಕಿಸ್ತಾನದ ರಾಜಧಾನಿ ನೂರ್‌–ಸುಲ್ತಾನ್‌ಗೆ ಅಂತರರಾಷ್ಟ್ರೀಯ ಟೆನಿಸ್‌ ಮಂಡಳಿ(ಐಟಿಎಫ್) ಸ್ಥಳಾಂತರಿಸಿತ್ತು.

ಈ ನಿರ್ಧಾರವನ್ನು ಹಿರಿಯ ಆಟಗಾರರಾದ ಐಸಾಮ್‌ ಉಲ್‌ ಹಕ್‌ ಖುರೇಷಿ ಹಾಗೂ ಅಖೀಲ್‌ ಖಾನ್‌  ವಿರೋಧಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅವರನ್ನು ಕೈಬಿಟ್ಟಿರುವ ಪಿಟಿಎಫ್‌, 17 ವರ್ಷದ ಯುವ ಆಟಗಾರರಾದ ಹುಜೈಫಾ ಅಬ್ದುಲ್‌ ರೆಹ್ಮಾನ್‌ ಮತ್ತು ಶೋಯೆಬ್‌ ಖಾನ್‌ ಅವರಿಗೆ ತಂಡದಲ್ಲಿ ಅವಕಾಶ ನೀಡಿದೆ.

ಈ ಇಬ್ಬರೂ ಕಿರಿಯರ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿಯೂ ಕೆಳಕ್ರಮಾಂದಲ್ಲಿದ್ದು, ಕ್ರಮವಾಗಿ 446 ಮತ್ತು 1004ನೇ ಸ್ಥಾನದಲ್ಲಿದ್ದಾರೆ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು