ಬುಧವಾರ, ನವೆಂಬರ್ 13, 2019
23 °C

ಡೇವಿಸ್‌ ಕಪ್‌ ಟೆನಿಸ್‌: ಆಟವಾಡದ ನಾಯಕರಾಗಿ ರೋಹಿತ್‌ ನೇಮಕ

Published:
Updated:

ನವದೆಹಲಿ: ಹಿರಿಯ ಆಟಗಾರ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್‌ ರಾಜ್‌ಪಾಲ್‌ ಅವರನ್ನು ಪಾಕಿಸ್ತಾನ ಎದುರಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಕ್ಕೆ ಭಾರತ ತಂಡದ ಆಟವಾಡದ ನಾಯಕರನ್ನಾಗಿ ನೇಮಿಸಲಾಗಿದೆ.

ಸೋಮವಾರ ನಡೆದ ಅಖಿಲ ಭಾರತ ಟೆನಿಸ್‌ ಸಂಸ್ಥೆಯ (ಎಐಟಿಎ) ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ ಹಿಂದೆ ಆಟವಾಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಮಹೇಶ್‌ ಭೂಪತಿ, ಪಾಕ್‌ ಎದುರಿನ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಅವರ ಜಾಗಕ್ಕೆ ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು ನೇಮಕ ಮಾಡಬಹುದೆಂದು ಹೇಳಲಾಗಿತ್ತು.

‘ಈ ಹಿಂದೆ ಎಐಟಿಎ ಅಧ್ಯಕ್ಷರಾಗಿದ್ದ ಅನಿಲ್‌ ಖನ್ನಾ ಮತ್ತು ಪ್ರವೀಣ್‌ ಮಹಾಜನ್‌ ಅವರು ರೋಹಿತ್‌ ಅವರ ಹೆಸರನ್ನು ಸೂಚಿಸಿದರು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಮಾತ್ರ ರೋಹಿತ್‌ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ’ ಎಂದು ಎಐಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್‌ಪಾಲ್‌ ಅವರು 1990ರಲ್ಲಿ ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ್ದರು. ಸೋಲ್‌ನಲ್ಲಿ ನಡೆದಿದ್ದ ದಕ್ಷಿಣ ಕೊರಿಯಾ ಎದುರಿನ ಪಂದ್ಯದಲ್ಲಿ ಆಡಿದ್ದರು. ಆ ಹಣಾಹಣಿಯಲ್ಲಿ ಭಾರತ ತಂಡವು 0–5ರಿಂದ ಸೋತಿತ್ತು.

ಸಿಂಗಲ್ಸ್‌ ಹಣಾಹಣಿಯಲ್ಲಿ ಕಣಕ್ಕಿಳಿದಿದ್ದ ರಾಜ್‌ಪಾಲ್‌ 1–6, 2–6 ನೇರ ಸೆಟ್‌ಗಳಿಂದ ಜೇ ಸಿಕ್‌ ಕಿಮ್‌ ಎದುರು ಪರಾಭವಗೊಂಡಿದ್ದರು.

ಪಾಕ್‌ ಎದುರಿನ ಪಂದ್ಯ ಈ ತಿಂಗಳ 29 ಮತ್ತು 30 ರಂದು ನಿಗದಿಯಾಗಿದೆ.

ಪ್ರತಿಕ್ರಿಯಿಸಿ (+)