ಭಾನುವಾರ, ಜುಲೈ 3, 2022
24 °C
ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ: ನವೊಮಿ ಒಸಾಕ ಜಯಭೇರಿ

ಸೆರೆನಾ ವಿಲಿಯಮ್ಸ್, ಜೊಕೊವಿಚ್‌ ಶುಭಾರಂಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ದಾಖಲೆಯ ಹೊಸ್ತಿಲಲ್ಲಿರುವ ಸೆರೆನಾ ವಿಲಿಯಮ್ಸ್, ನೊವಾಕ್ ಜೊಕೊವಿಚ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಇಲ್ಲಿ ಎಂಟು ಬಾರಿ ಪ್ರಶಸ್ತಿ ಗೆದ್ದಿರುವ ಸರ್ಬಿಯ ಆಟಗಾರ ಜೊಕೊವಿಚ್, ಸೋಮವಾರ ಮೊದಲ ಸುತ್ತಿನ ಹಣಾಹಣಿಯಲ್ಲಿ 6–3, 6–1, 6–2ರಿಂದ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು ಮಣಿಸಿದರು. ರಾಡ್‌ ಲಾವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಜೊಕೊವಿಚ್‌  91 ನಿಮಿಷಗಳಲ್ಲಿ ಸುಲಭ ಗೆಲವು ದಾಖಲಿಸಿದರು.

ಅಮೆರಿಕದ ಸೆರೆನಾ ವಿಲಿಯಮ್ಸ್ ಕೂಡ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನ ತಡೆ ದಾಟಿದರು. ಅವರು 6–1, 6–1ರಿಂದ ಜರ್ಮನಿಯ ಲೌರಾ ಸಿಜಮಂಡ್ ಅವರನ್ನು ಪರಾಭವಗೊಳಿಸಿದರು. 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಸೆರೆನಾ ಅವರಿಗೆ ಈ ಪಂದ್ಯ ಗೆಲ್ಲಲು 56 ನಿಮಿಷಗಳು ಸಾಕಾದವು.

ಸೆರೆನಾ ಅವರು ಪಂದ್ಯದಲ್ಲಿ ವರ್ಣಮಯ ‘ಸಿಂಗಲ್‌ ಲೆಗ್ ಕ್ಯಾಟ್ ಸ್ಯೂಟ್‌‘ ಧರಿಸಿ ಕಣಕ್ಕಿಳಿದಿದ್ದರು. ಅಮೆರಿಕದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌, ಮಾಜಿ ಒಲಿಂಪಿಕ್ ಚಾಂಪಿಯನ್‌ ಫ್ಲಾರೆನ್ಸ್ ಗ್ರಿಫಿಥ್‌ ಜಾಯ್ನರ್ ನೆನಪಿಗಾಗಿ ಈ ಪೋಷಾಕು ಧರಿಸಿದ್ದಾಗಿ ಅವರು ಹೇಳಿದ್ದಾರೆ.

ಮೂರನೇ ಶ್ರೇಯಾಂಕದ ಆಟಗಾರ್ತಿ ಜಪಾನ್ ನವೊಮಿ ಒಸಾಕ 6–1, 6–2ರಿಂದ ರಷ್ಯಾದ ಅನಸ್ತೇಸಿಯಾ ಪಾವ್ಲಿಚೆಂಕೋವಾ ಎದುರು ಗೆದ್ದು ಎರಡನೇ ಸುತ್ತಿಗೆ ಮುನ್ನಡೆದರು.

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ 2019ರ ಅಮೆರಿಕ ಓಪನ್ ಚಾಂಪಿಯನ್‌ ಬಿಯಾಂಕಾ ಆ್ಯಂಡ್ರಿಸ್ಕು 6–2, 4–6, 6–3ರಿಂದ ರುಮೇನಿಯಾದ ಮಿಹಾಲಾ ಬುಜರ್ನೆಸ್ಕು ಎದುರು, ಫ್ರೆಂಚ್ ಓಪನ್ ಚಾಂಪಿಯನ್‌ ಐಗಾ ಸ್ವಾಟೆಕ್‌ 6–1, 6–3ರಿಂದ ಅರಾಂಟ ರೂಸ್‌ ವಿರುದ್ಧ ಜಯಿಸಿದರು.

ಕೆರ್ಬರ್‌ಗೆ ಸೋಲು: 2016ರ ಆಸ್ಟ್ರೇಲಿಯಾ ಓಪನ್ ಚಾಂಪಿಯನ್‌ ಆ್ಯಂಜೆಲಿಕ್ ಕೆರ್ಬರ್ ಮೊದಲ ಪಂದ್ಯದಲ್ಲೇ ನಿರಾಸೆ ಅನುಭವಿಸಿದರು. 23ನೇ ಶ್ರೇಯಾಂಕದ ಜರ್ಮನಿ ಆಟಗಾರ್ತಿ 0–6, 4–6ರಿಂದ ಅಮೆರಿಕದ ಬರ್ನಾಂಡಾ ಪೆರಾ ಎದುರು ಮುಗ್ಗರಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ, ಅಮೆರಿಕ ಓಪನ್ ಚಾಂಪಿಯನ್‌ ಡೊಮಿನಿಕ್ ಥೀಮ್‌ 7–6, 6–2, 6–3ರಿಂದ ಕಜಕಸ್ತಾನ ಮಿಖಾಯಿಲ್ ಕುಕುಷ್ಕಿನ್ ಎದುರು, ಅಲೆಕ್ಸಾಂಡರ್ ಜ್ವೆರೆವ್ 6–7, 7–6, 6–3, 6–2ರಿಂದ ಮಾರ್ಕಸ್‌ ಗಿರೊನ್ ವಿರುದ್ಧ, ಸ್ಟ್ಯಾನ್ ವಾವ್ರಿಂಕಾ 6–3, 6–2, 6–4ರಿಂದ ಪೌಲೊ ಸೋಸಾ ಎದುರು ಗೆದ್ದು ಮುನ್ನಡೆದರು.

ನಿಶಿಕೋರಿ ಪರಾಭವ: ಜಪಾನ್‌ನ ಕೀ ನಿಶಿಕೋರಿ ಅವರಿಗೆ ಮೊದಲ ಸುತ್ತಿನ ತಡೆ ದಾಟಲಾಗಲಿಲ್ಲ. ಅವರು 5–7, 6–7, 2–6ರಿಂದ ಸ್ಪೇನ್‌ನ ಪ್ಯಾಬ್ಲೊ ಕರೆನೊ ಬುಸ್ಟಾ ಎದುರು ಮುಗ್ಗರಿಸಿದರು.

ಕಡಿಮೆ ಪ್ರೇಕ್ಷಕರ ಉಪಸ್ಥಿತಿ: ಕೋವಿಡ್–19 ಆತಂಕದ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ದಿನವೊಂದಕ್ಕೆ 30 ಸಾವಿರಕ್ಕೆ ಸಿಮೀತಗೊಳಿಸಲಾಗಿತ್ತು. ಆದರೆ ಮೊದಲ ದಿನ ಕೇವಲ 17, 922 ಮಂದಿ ಪಂದ್ಯಗಳನ್ನು ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು