ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿಯ ನಡುವೆಯೂ ಟೆನಿಸ್‌ ಟೂರ್ನಿ ಆಯೋಜನೆ: ಜೊಕೊವಿಚ್‌ ವಿರುದ್ಧ ಆಕ್ರೋಶ

Last Updated 23 ಜೂನ್ 2020, 5:49 IST
ಅಕ್ಷರ ಗಾತ್ರ

ಪ್ಯಾರಿಸ್‌: ಕೊರೊನಾ ಭೀತಿಯ ನಡುವೆಯೂ ಏಡ್ರಿಯಾ‌ ಟೂರ್‌ ಪ್ರದರ್ಶನ ಟೆನಿಸ್‌ ಟೂರ್ನಿಯನ್ನು ಆಯೋಜಿಸಿದ್ದ ಸರ್ಬಿಯಾದ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಹಾಗೂ ಕ್ರೊವೇಷ್ಯಾದ ಬೊರ್ನಾ ಕೊರಿಕ್‌ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟ ಬೆನ್ನಲ್ಲೇ ಜೊಕೊವಿಚ್‌ ನಿರ್ಧಾರವನ್ನು ಹಲವರು ಖಂಡಿಸಿದ್ದಾರೆ.

ಟೂರ್ನಿಯ ವೇಳೆ ಕೊರೊನಾ ಸೋಂಕು ಹರಡದಂತೆ ತಡೆಯಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿರಲಿಲ್ಲ. ಸರ್ಬಿಯಾ ಹಾಗೂ ಕ್ರೊವೇಷ್ಯಾ ಸರ್ಕಾರಗಳ ಮಾರ್ಗಸೂಚಿಗಳ ಪಾಲನೆಯೂ ಆಗಿರಲಿಲ್ಲ. ಪಂದ್ಯದ ವೇಳೆ ಆಟಗಾರರು ಅಂತರ ಕಾಪಾಡಿಕೊಂಡಿರಲಿಲ್ಲ. ಪರಸ್ಪರ ಅಪ್ಪಿಕೊಳ್ಳುವುದು, ಹೈ ಫೈವ್‌ ಸಂಭ್ರಮದಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿತ್ತು. ರಾತ್ರಿಯ ಹೊತ್ತಿನಲ್ಲಿ ಮೋಜು ಮಸ್ತಿಯಲ್ಲೂ ತೊಡಗಿಕೊಂಡಿದ್ದರು ಎಂದು ಅನೇಕರು ಆರೋಪಿಸಿದ್ದಾರೆ.

‘ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಸಾವಿರಾರು ಮಂದಿ ಪ್ರೇಕ್ಷಕರ ಎದುರು ಪಂದ್ಯಗಳನ್ನು ಆಯೋಜಿಸಿದ್ದು ತಲೆಬುಡವಿಲ್ಲದ ನಿರ್ಧಾರ. ನಾವು ಯಾವುದನ್ನೂ ಲಘುವಾಗಿ ಪರಿಗಣಿಸಬಾರದು. ನಿಯಮಗಳನ್ನು ಗಾಳಿಗೆ ತೂರಿದರೆ ಇಂತಹ ಅಪಾಯಗಳಾಗುವುದು ಸಹಜ’ ಎಂದು ಆಸ್ಟ್ರೇಲಿಯಾದ ಟೆನಿಸ್‌ ಆಟಗಾರ ನಿಕ್‌ ಕಿರ್ಗಿಯೊಸ್‌ ಟ್ವೀಟ್‌ ಮಾಡಿದ್ದಾರೆ.

‘ಈ ಟೂರ್ನಿಯಲ್ಲಿ ಆಡುವ ಮೂಲಕ ನಾನು ಯಾರನ್ನಾದರೂ ತೊಂದರೆಗೆ ಸಿಲುಕಿಸಿದ್ದರೆ ದಯವಿಟ್ಟು ಕ್ಷಮಿಸಿ’ ಎಂದು ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಅಪ್ರಬುದ್ಧರಿಂದ ಆದ ಪ್ರಮಾದವಿದು. ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಆಯೋಜಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರ ನಿರ್ಲಕ್ಷ ಧೋರಣೆ ಎದ್ದು ಕಾಣುತ್ತಿದೆ’ ಎಂದು ಎಟಿಪಿ ಆಟಗಾರರ ಸಮಿತಿಯ ಸದಸ್ಯ ಬ್ರುನೊ ಸೋರೆಸ್‌ ವಾಗ್ದಾಳಿ ನಡೆಸಿದ್ದಾರೆ.

‘ನೀವು ಯಾರು, ಏನು ಮಾಡುತ್ತಿದ್ದೀರಿ ಎಂಬುದರ ಅರಿವು ಇರಬೇಕಿತ್ತು. ಇತರರಿಗೆ ಮಾದರಿಯಾಗಬೇಕಿದ್ದ ನೀವೇ ಹೀಗೆ ಮಾಡುವುದು ಸರಿಯೇ’ ಎಂದು ಇಎಸ್‌ಪಿಎನ್‌ ವೆಬ್‌ಸೈಟ್‌ನ ವಿಶ್ಲೇಷಕ ಪ್ಯಾಟ್ರಿಕ್‌ ಮೆಕೆನ್ರೊ, ಜೊಕೊವಿಚ್‌ ಅವರ ಹೆಸರನ್ನು ಉಲ್ಲೇಖಿಸದೆಯೇ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT