ಬುಧವಾರ, ಜೂನ್ 23, 2021
30 °C
ಫ್ರೆಂಚ್ ಓಫನ್‌: ಸ್ಟೀಫನ್ಸ್ ಮಣಿಸಿದ ಕ್ರೆಸಿಕೋವಾ ಎಂಟರ ಘಟ್ಟಕ್ಕೆ; ಸ್ವಾರ್ಟ್ಸ್‌ಮನ್‌ಗೆ ಗೆಲುವು

ಗೆದ್ದ ಜೊಕೊವಿಚ್‌: ಮನಗೆದ್ದ ಮುಸೆಟ್ಟಿ

ಪಿಟಿಐ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್‌ಗೆ ಪ್ರಬಲ ಪೈಪೋಟಿ ನೀಡಿದ ಇಟಲಿಯ ಯುವ ಆಟಗಾರ ಲೊರೆನ್ಸೊ ಮುಸೆಟ್ಟಿ ಅವರು ಟೆನಿಸ್ ಪ್ರಿಯರ ಮನಗೆದ್ದರು. ಸೋಮವಾರ ನಡೆದ ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದ ಮೊದಲ ಎರಡು ಸೆಟ್‌ಗಳನ್ನು ಸೋತರೂ ಚೇತರಿಸಿಕೊಂಡ ಜೊಕೊವಿಚ್ 6-7 (7/9), 6-7 (2/7), 6-1, 6-0, 4-0ರಲ್ಲಿ ಜಯ ಗಳಿಸಿದರು.

ಟೈ ಬ್ರೇಕರ್‌ನಲ್ಲಿ ಮುಕ್ತಾಯಗೊಂಡ ಮೊದಲ ಎರಡು ಸೆಟ್‌ಗಳಲ್ಲಿ 19 ವರ್ಷದ ಮುಸೆಟ್ಟಿ ಅತ್ಯಮೋಘ ಆಟದ ಮೂಲಕ ಭರವಸೆ ಮೂಡಿಸಿದ್ದರು. ಮುಂದಿನ ಎರಡು ಸೆಟ್‌ಗಳಲ್ಲಿ ಜೊಕೊವಿಚ್‌ ನೈಜ ಸಾಮರ್ಥ್ಯ ಮೆರೆದು 76ನೇ ಕ್ರಮಾಂಕದ ಆಟಗಾರನನ್ನು ಕಂಗೆಡಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಜೊಕೊವಿಚ್‌ 4–0ಯ ಮುನ್ನಡೆ ಗಳಿಸಿದ್ದಾಗ ಮುಸೆಟ್ಟಿ ನಿವೃತ್ತಿ ಘೋಷಿಸಿ ಹೊರನಡೆದರು.

ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್ ಜರ್ಮನಿಯ ಜಾನ್ ಲೆನಾರ್ಡ್‌ ಸ್ಟ್ರಫ್‌ ವಿರುದ್ಧ 7-6(9), 6-4, 7-5ರಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಒಂದು ಸೆಟ್‌ ಕೂಡ ಸೋಲದೇ ಪ್ರೀ ಕ್ವಾರ್ಟರ್‌ ಹಂತ ಪ್ರವೇಶಿಸಿದ್ದ ಸ್ವಾರ್ಟ್ಸ್‌ಮನ್‌ ಅವರನ್ನು ಆರಂಭದಲ್ಲಿ ಕಂಗೆಡಿಸಿದ ಸ್ಟ್ರಫ್‌ ಮೊದಲ ಸೆಟ್‌ನಲ್ಲಿ 5–1ರ ಮುನ್ನಡೆ ಗಳಿಸಿದ್ದರು. ಆದರೆ ಛಲ ಬಿಡದ ಸ್ವಾರ್ಟ್ಸ್‌ಮನ್‌ ಮೋಹಕ ಹೊಡೆತಗಳು ಮತ್ತು ರಕ್ಷಣಾತ್ಮಕ ಆಟದ ಮೂಲಕ ಸೆಟ್‌ ಗೆದ್ದುಕೊಂಡರು. ನಂತರದ ಎರಡು ಸೆಟ್‌ಗಳಲ್ಲೂ ಸ್ಟ್ರಫ್‌ ಉತ್ತಮ ಹೋರಾಟ ಮಾಡಿದರು. ಆದರೆ ಗೆಲುವು ತಮ್ಮದಾಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ಕ್ರೆಸಿಕೋವಾಗೆ ಮಣಿದ ಸ್ಟೀಫನ್ಸ್

ಇಟಲಿಯ ಮಟಿಯೊ ಬೆರೆಟಿನಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅವರ ವಿರುದ್ಧ ಸೆಣಸಬೇಕಾಗಿದ್ದ ರೋಜರ್ ಫೆಡರರ್ ಭಾನುವಾರ ಟೂರ್ನಿಯಿಂದ ಹಿಂದೆ ಸರಿದಿದದರು.

ಬಲಶಾಲಿ ಹೊಡೆತಗಳ ಮೂಲಕ ಮಿಂಚಿದ ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಸಿಕೋವಾ ಅಮೆರಿಕದ ಸ್ಲಾನೆ ಸ್ಟೀಫನ್ಸ್ ಅವರನ್ನು ಮಣಿಸಿ ಮಹಿಳೆಯರ ವಿಭಾಗದ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. ಸೋಮವಾರ ನಡೆದ ಪಂದ್ಯದಲ್ಲಿ ಅವರು 6-2, 6-0ರಲ್ಲಿ ಜಯ ಸಾಧಿಸಿದರು. 

2018ರಲ್ಲಿ ಫೈನಲ್ ಪ್ರವೇಶಿಸಿದ್ದ ಸ್ಲಾನೆ ಸ್ಟೀಫನ್ಸ್ ವಿರುದ್ಧ ಕ್ರೆಸಿಕೋವಾ ನಿರಾಯಾಸವಾಗಿ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಮೊದಲ ಸೆಟ್‌ನಲ್ಲಿ ಎರಡು ಬಾರಿ ಎದುರಾಳಿಯ ಸರ್ವ್ ಮುರಿದ ಕ್ರೆಸಿಕೋವಾ ಎರಡನೇ ಸೆಟ್‌ನಲ್ಲಿ ಇನ್ನಷ್ಟು ಪ್ರಭಾವಿ ಆಟ ಆಡಿದರು.

ದಾಖಲೆ ಬರೆದ ಕೊಕೊ ಗಫ್‌ 

ಪ್ಯಾರಿಸ್‌ (ಎಎಫ್‌ಪಿ): ಅಮೆರಿಕದ ಯುವ ಆಟಗಾರ್ತಿ ಕೊಕೊ ಗಫ್‌ ಅವರು ಒಂದೂವರೆ ದಶಕದಲ್ಲಿ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅತಿ ಕಿರಿಯ ಮಹಿಳೆ ಎಂಬ ದಾಖಲೆ ಬರೆದರು. 17 ವರ್ಷ ವಯಸ್ಸಿನ ಅವರು ಸೋಮವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಟುನೀಷಿಯಾದ ಆನ್ಸ್‌ ಜಬೆವುರ್ ಅವರನ್ನು 6-3, 6-1ರಲ್ಲಿ ಮಣಿಸಿದರು.

53 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ ಕೊಕೊ ಗಫ್ ಪೂರ್ಣ ಆಧಿಪತ್ಯ ಸ್ಥಾಪಿಸಿದರು. ಮೂರು ಬಾರಿ ಎದುರಾಳಿಯ ಸರ್ವ್‌ ಮುರಿದ ಅವರು ಎರಡನೇ ಸೆಟ್‌ನಲ್ಲಿ ಅತ್ಯಂತ ಸುಲಭ ಜಯ ಗಳಿಸಿದರು.

2006ರಲ್ಲಿ ಫ್ರೆಂಚ್ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಜೆಕ್ ಗಣರಾಜ್ಯದ ನಿಕೋಲ್ ವೈಡಿಸೋವಾ ಹೆಸರಿನಲ್ಲಿ ಈ ವರೆಗೆ ದಾಖಲೆ ಇತ್ತು. ಕೊಕೊ ಗಫ್‌ 15ನೇ ವಯಸ್ಸಿನಲ್ಲಿ ವಿಂಬಲ್ಡನ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿ ಗಮನ ಸೆಳೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು