ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಟೆನಿಸ್ ಟೂರ್ನಿ: ನೊವಾಕ್‌ಗೆ ‘ಗೋಲ್ಡನ್ ಗ್ರ್ಯಾನ್‌ಸ್ಲಾಂ’ ಗುರಿ

ಕಣದಲ್ಲಿ ರೋಜರ್ ಫೆಡರರ್‌, ಸೆರೆನಾ ವಿಲಿಯಮ್ಸ್
Last Updated 27 ಜೂನ್ 2021, 15:33 IST
ಅಕ್ಷರ ಗಾತ್ರ

ಲಂಡನ್‌: ‘ಗೋಲ್ಡನ್ ಗ್ರ್ಯಾನ್‌ಸ್ಲಾಂ’ ಮೇಲೆ ಕಣ್ಣಿಟ್ಟಿರುವಸರ್ಬಿಯಾದ ನೊವಾಕ್ ಜೊಕೊವಿಚ್‌ ಸೋಮವಾರ ಆರಂಭವಾಗಲಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ದಾಖಲೆ ಸಮಗಟ್ಟುವ 20ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಕನಸಿನೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.

ಫ್ರೆಂಚ್ ಓಪನ್ ಟೂರ್ನಿಯ ಪ್ರಶಸ್ತಿ ಗೆಲ್ಲುವುದರೊಂದಿಗೆ ಅವರು ಈಗ ಆಡುತ್ತಿರುವ ಆಟಗಾರರ ಪೈಕಿ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದಾರೆ. ಒಟ್ಟಾರೆ ಈ ಸಾಧನೆ ಮಾಡಿದ ಮೂರನೇ ಆಟಗಾರ ಅವರು.

ಒಂದೇ ಋತುವಿನ ಎಲ್ಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆಲ್ಲುವತ್ತ ಕೂಡ ಅವರು ಚಿತ್ತ ನೆಟ್ಟಿದ್ದಾರೆ. ಅಮೆರಿಕದ ಡಾನ್‌ ಬಜ್‌ 1937ರಲ್ಲೂ ಆಸ್ಟ್ರೇಲಿಯಾದ ರಾಡ್‌ ಲೇವರ್‌ 1962 ಮತ್ತು 1969ರಲ್ಲೂ ಈ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆದ್ದರೆ ‘ಗೋಲ್ಡನ್ ಗ್ರ್ಯಾನ್‌ಸ್ಲಾಂ’ ಸಾಧನೆ ಆಗಲಿದೆ.

ಪುರುಷರ ವಿಭಾಗದಲ್ಲಿ ಈವರೆಗೆ ಯಾರಿಗೂ ಗೋಲ್ಡನ್ ಸ್ಲಾಂ ಗಳಿಸಲು ಸಾಧ್ಯವಾಗಿಲ್ಲ. ಮಹಿಳಾ ವಿಭಾಗದಲ್ಲಿ ಜರ್ಮನಿಯ ಸ್ಟೆಫಿ ಗ್ರಾಫ್1988ರಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಂ ಮತ್ತು ಒಲಿಂಪಿಕ್ ಚಿನ್ನದ ಪದಕ ಗಳಿಸಿದ್ದರು.

ಕಳೆದ ಬಾರಿಯ ವಿಂಬಲ್ಡನ್‌ ಚಾಂಪಿಯನ್ ಆಗಿರುವ ಜೊಕೊವಿಚ್‌ ಈ ವರ್ಷದ ಫೆಬ್ರುವರಿಯಲ್ಲಿ ದಾಖಲೆಯ ಒಂಬತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದರು. ವಿಂಬಲ್ಡನ್‌ ನಂತರ ಒಲಿಂಪಿಕ್ಸ್‌ ನಡೆಯಲಿದ್ದು ಆ ನಂತರ ಅಮೆರಿಕ ಓಪನ್‌ ಟೂರ್ನಿ ನಡೆಯಲಿದೆ. ವಿಂಬಲ್ಡನ್ ಟೂರ್ನಿಯಲ್ಲಿ ಈ ಬಾರಿ ಪ್ರಶಸ್ತಿ ಗೆದ್ದರೆ ಒಂದೇ ಋತುವಿನ ಎಲ್ಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರನಾಗುವ ಕನಸಿಗೂ ರೆಕ್ಕೆ ಮೂಡಲಿದೆ.

ವಿಂಬಲ್ಡನ್ ಟೂರ್ನಿಯ ಹಾಲಿ ಚಾಂಪಿಯನ್ ಜೊಕೊವಿಚ್ ಆರನೇ ಪ್ರಶಸ್ತಿಗಾಗಿ ಇಲ್ಲಿ ಸೆಣಸಲಿದ್ದಾರೆ. 2019ರಲ್ಲಿ ನಡೆದ ಟೂರ್ನಿಯ ಅತಿದೀರ್ಘ ಫೈನಲ್‌ನಲ್ಲಿ ರೋಜರ್ ಫೆಡರರ್‌ ವಿರುದ್ಧ ಅವರು ಗೆದ್ದಿದ್ದರು. ನಾಲ್ಕು ತಾಸು 57 ನಿಮಿಷಗಳ ಹಣಾಹಣಿಯಲ್ಲಿ ಎರಡು ಚಾಂಪಿಯನ್‌ಷಿಪ್ ಪಾಯಿಂಟ್‌ಗಳನ್ನು ಉಳಿಸಿ ಅವರು ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಕೊರೊನಾದಿಂದಾಗಿ ಕಳೆದ ಬಾರಿ ವಿಂಬಲ್ಡನ್ ಟೂರ್ನಿಯನ್ನು ರದ್ದುಮಾಡಲಾಗಿತ್ತು.

ವಿಶ್ವ ಕ್ರಮಾಂಕದ ಒಂದನೇ ಸ್ಥಾನದಲ್ಲಿರುವ ಜೊಕೊವಿಚ್ ಸೋಮವಾರ ಮೊದಲ ಪಂದ್ಯದಲ್ಲಿ 250ನೇ ಸ್ಥಾನದಲ್ಲಿರುವ ಬ್ರಿಟನ್‌ನ ಜ್ಯಾಕ್ ಡ್ರ್ಯಾಪರ್ ವಿರುದ್ಧ ಸೆಣಸಲಿದ್ದಾರೆ. 2008 ಮತ್ತು 2010ರ ಚಾಂಪಿಯನ್ ರಫೆಲ್ ನಡಾಲ್ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಎಂಟು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ. ಮಂಗಳವಾರ ಮೊದಲ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಅಡ್ರಿಯಾನ್ ಮನರಿನೊ ಎದುರು ಅವರು ಸೆಣಸಲಿದ್ದಾರೆ. ಆ್ಯಂಡಿ ಮರ್ರೆ, ಸ್ಟೆಫನೋಸ್ ಸಿಟ್ಸಿಪಾಸ್, ಬಾಟಿಸ್ಟಾ ಅಗೂಟ್ ಮುಂತಾದವರೂ ಕಣದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್‌, ವೀನಸ್ ವಿಲಿಯಮ್ಸ್‌, ಎಲಿನಾ ಸ್ವಿಟೋಲಿನಾ, ಕರೋಲಿನಾ ಪ್ಲಿಸ್ಕೋವ, ಏಂಜೆಲಿಕ್ ಕರ್ಬರ್, ಗಾರ್ಬೈನ್ ಮುಗುರುಜಾ, ಪೆಂಟಾ ಕ್ವಿಟೋವ ಮುಂತಾದವರು ಪ್ರಶಸ್ತಿಗಾಗಿ ಸೆಣಸುವರು.

ಪಂದ್ಯಗಳು ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್‌ 1,2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT