ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಸ್ಟಾರ್‌ ಆಗುವರೇ ಸಿಸಿ‍ಪಸ್‌?

Last Updated 24 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸ್ಟೆಫಾನೊಸ್‌ ಸಿಸಿಪಸ್‌...ಉದ್ದ ಕೂದಲಿನ, ನೀಳ ಕಾಯದ ಹುಡುಗ. ಹೋದ ಭಾನುವಾರ (ನ.17) ವರ್ಷಾಂತ್ಯದ ಎಟಿಪಿ ಫೈನಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಗಳಿಗೆಯಲ್ಲಿ ಆತನ ಮೊಗದಲ್ಲಿ ಭರವಸೆಯ ಮಂದಹಾಸ ಲಾಸ್ಯವಾಡುತ್ತಿತ್ತು. ಒಂದೂವರೆ ದಶಕದಲ್ಲಿ ಟೆನಿಸ್‌ ಸಾಮ್ರಾಜ್ಯವನ್ನು ಬಿಗ್‌ 3 ಎಂದೇ ಹೆಸರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌ ಹಾಗೂ ನೊವಾಕ್‌ ಜೊಕೊವಿಚ್‌ ಅವರೇ ಆಳಿದ್ದಾರೆ; ಆಳುತ್ತಿದ್ದಾರೆ. ಇವರ ಆಧಿಪತ್ಯ ಕೊಣೆಗಾಣಿಸಲು ಹವಣಿಸುತ್ತಿರುವ ಯುವಪೀಳಿಗೆಯ ಆಟಗಾರರಲ್ಲಿ ಗ್ರೀಸ್‌ ಪ್ರತಿಭೆ ಸಿಸಿಪಸ್‌ ಕೂಡ ಒಬ್ಬರು. ಈ ಮೂವರು ದಿಗ್ಗಜ ಆಟಗಾರರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಸಿಸಿಪಸ್‌ ಮಣಿಸಿದ್ದಾರೆ.

ಬಾಲ್ಯದಿಂದಲೇ ಸಿಸಿಪಸ್‌ ಟೆನಿಸ್‌ ಆಟವನ್ನು ಮೈಗೂಡಿಸಿಕೊಂಡವರು. ಕುಟುಂಬದಲ್ಲಿ ಅದಕ್ಕೆ ಪೂರಕವಾದ ವಾತಾವರಣವೇ ಇತ್ತು. ತಾಯಿ ವೃತ್ತಿಪರ ಟೆನಿಸ್‌ ಆಟಗಾರ್ತಿಯಾಗಿದ್ದರೆ, ತಂದೆ ಟೆನಿಸ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದವರು. ಆರನೇ ವರ್ಷದವರಿದ್ದಾಗಲೇ ಆಟದ ಪಾಠಗಳನ್ನು ಕಲಿಯಲಾರಂಭಿಸಿದ ಸಿಸಿಪಸ್‌, ಜೂನಿಯರ್‌ ವಿಭಾಗದಲ್ಲಿ ವಿಶ್ವದ ನಂ. 1 ಆಟಗಾರನಾದರು. 2016ರಲ್ಲಿ ವಿಂಬಲ್ಡನ್‌ ಡಬಲ್ಸ್ ಬಾಲಕರ ವಿಭಾಗದ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ ಜೂ⇒ನಿಯರ್‌ ಗ್ರ್ಯಾನ್‌ಸ್ಲಾಮ್‌ ಪ‍್ರಶಸ್ತಿ ಗೆದ್ದ ಗ್ರೀಸ್‌ನ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

21 ವರ್ಷದ ಸಿಸಿಪಸ್‌ ಎಟಿಪಿ ಮೊದಲ ಪಂದ್ಯ ಗೆದ್ದಿದ್ದು 2017ರಲ್ಲಿ. ಆ ಬಳಿಕ ರ‍್ಯಾಂಕಿಂಗ್‌ನಲ್ಲಿ ದಿಢೀರ್‌ ಪ್ರಗತಿ ಕಾಣುತ್ತಾ ಸಾಗಿದ ಅವರು 2018ರಲ್ಲಿ ಸ್ಟಾಕ್‌ಹೋಮ್‌ ಓಪನ್‌ನಲ್ಲಿ ಕಿರೀಟ ಧರಿಸಿದರು. ಕೆನಡಿಯನ್‌ ಓಪನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದ ಸಿಸಿಪಸ್‌, ಆ ಒಂದೇ ಟೂರ್ನಿಯಲ್ಲಿ ಅಗ್ರ 10ರೊಳಗಿನ ಪಟ್ಟಿಯಲ್ಲಿದ್ದ ನಾಲ್ವರು ಆಟಗಾರರನ್ನು ಸೋಲಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದರು. 8ನೇ ಸ್ಥಾನದಲ್ಲಿದ್ದ ಡೊಮಿನಿಕ್‌ ಥೀಮ್‌, ನೊವಾಕ್‌ ಜೊಕೊವಿಚ್‌ (10ನೇ ಸ್ಥಾನ), ಅಲೆಕ್ಸಾಂಡರ್‌ ಜ್ವೆರೆವ್‌ (3ನೇ ಸ್ಥಾನ) ಹಾಗೂ ಕೆವಿನ್‌ ಆ್ಯಂಡರ್ಸನ್‌ (6ನೇ ಸ್ಥಾನ) ಅವರು ಸಿಸಿಪಸ್‌ ಆಟಕ್ಕೆ ಮಣಿದಿದ್ದರು.

ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಒಮ್ಮೆಯೂ ಜಯಿಸದ ಸಿಸಿಪಸ್‌, ಆ ಕೊರತೆ ನೀಗಿಸಿಕೊಳ್ಳುವತ್ತ ದಾಪುಗಾಲನ್ನಂತೂ ಇಟ್ಟಿದ್ದಾರೆ.

ಆಟದ ಶೈಲಿ: ಆಕ್ರಮಣಕಾರಿ ಬೇಸ್‌ಲೈನ್‌ ಹೊಡೆತಗಳಿಗೆ ಹೆಸರಾಗಿರುವ ಸಿಸಿಪಸ್‌, ಮುಂಗೈ ಬಳಸಿ ಆಡುವ ಆಟ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುವಂಥದ್ದು. ಆಧುನಿಕ ಟೆನಿಸ್‌ ಆಟಗಾರರಲ್ಲಿ ಅಪರೂಪ ಎನ್ನಬಹುದಾದ ‘ಸಿಗ್ನೇಚರ್‌ ಶಾಟ್‌’ ಅವರ ವಿಶೇಷ. ನೆಟ್‌ನ ಅತೀ ಮೇಲಕ್ಕೆ ಚೆಂಡು ಬಾರಿಸುವುದು ಹಾಗೂ ಅನಗತ್ಯ ತಪ್ಪುಗಳನ್ನು ಎಸಗುವುದು ಸಿಸಿಪಸ್‌ ಅವರ ದೌರ್ಬಲ್ಯ. ಅವರ ಶೈಲಿಯನ್ನು ಟೆನಿಸ್‌ ದಿಗ್ಗಜರಲ್ಲೊಬ್ಬರಾದ ಬ್ಯೋನ್‌ ಬೋರ್ಗ್‌ ಅವರ ಆಟಕ್ಕೆ ಹೋಲಿಸುವವರೂ ಇದ್ದಾರೆ.

ವ್ಲಾಗಿಂಗ್‌ ಸಿಸಿ‍ಪಸ್‌ ಅವರ ನೆಚ್ಚಿನ ಹವ್ಯಾಸ. ಬ್ಲಾಗ್‌ನ ಒಂದು ಪರ್ಯಾಯ ರೂಪವೇ ವ್ಲಾಗ್‌. ತಾವಾಡಿದ ಪಂದ್ಯಗಳ ವಿಡಿಯೊಗಳನ್ನು ಇಲ್ಲಿ ಪೋಸ್ಟ್‌ ಮಾಡುತ್ತಾರೆ. ನವೆಂಬರ್‌ 17ರಂದು ಡೊಮಿನಿಕ್‌ ಥೀಮ್‌ ಅವರನ್ನು ಸೋಲಿಸಿ ಸಿಸಿಪಸ್‌ ಮೊದಲ ಬಾರಿಎಟಿಪಿ ಫೈನಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. 18 ವರ್ಷಗಳ ಬಳಿಕ ಈ ಟ್ರೋಫಿಗೆ ಮುತ್ತಿಕ್ಕಿದ ಅತಿ ಕಿರಿಯ ಆಟಗಾರ ಅವರು. 2001ರಲ್ಲಿ ಆಸ್ಟ್ರೇಲಿಯಾದ ಲೇಟನ್‌ ಹೆವಿಟ್‌ ಗೆಲುವಿನ ಕಿರೀಟ ಧರಿಸಿದ್ದಾಗ ಅವರಿಗೆ 20 ವರ್ಷ ವಯಸ್ಸು.

ಸದ್ಯ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಸಿಸಿಪಸ್‌ ಆರನೇ ಸ್ಥಾನದಲ್ಲಿದ್ದಾರೆ. 2019ರ ಆಗಸ್ಟ್‌ನಲ್ಲಿ ಅವರು ಜೀವನಶ್ರೇಷ್ಠ 5ನೇ ಕ್ರಮಾಂಕದಲ್ಲಿದ್ದರು. ಸದ್ಯದ ಲಯದಲ್ಲೇ ಮುಂದುವರೆದರೆ ನಂ.1 ಪಟ್ಟಕ್ಕೇರುವ ದಿನಗಳು ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT